ಕೂಡಿಗೆ, ಜು. 21: ಜಿಲ್ಲೆಯಲ್ಲಿ ರೇಷ್ಮೆ ಬೆಳೆ ನಶಿಸಿ ಹೋಗುತ್ತಿದ್ದು, ರೇಷ್ಮೆ ಬೆಳೆ ಅಭಿವೃದ್ಧಿಗೆ ಸರ್ಕಾರ ಹೆಚ್ಚು ಒತ್ತು ನೀಡಬೇಕು ಎಂದು ಕಾವೇರಿ ರೇಷ್ಮೆ ಸಹಕಾರ ಸಂಘ ಆಗ್ರಹಿಸಿದೆ.
ರೇಷ್ಮೆ ಮೊಟ್ಟೆಯ ಬೀಜೋತ್ಪಾದನೆಯಲ್ಲಿ ಕೊಡಗು ಜಿಲ್ಲೆ ರಾಜ್ಯದಲ್ಲೇ ಹೆಸರು ವಾಸಿಯಾಗಿದ್ದು, ಇಂದಿಗೂ ರೇಷ್ಮೆ ಬೆಳೆಗೆ ಬೇಡಿಕೆ ಹೆಚ್ಚಿದೆ. ರೇಷ್ಮೆ ಮೊಟ್ಟೆಯ ಬೀಜೋತ್ಪಾದನೆಯ ಕೇಂದ್ರವು ಕೂಡಿಗೆಯ ರೇಷ್ಮೆ ಕೃಷಿ ಕೇಂದ್ರಲ್ಲಿದ್ದು, ಜಿಲ್ಲೆಯ ಹವಾಮಾನ, ಮಳೆ ಮತ್ತು ಬಿಸಿಲಿನ ಅನುಪಾತದ ಲೆಕ್ಕದಲ್ಲಿ ರೇಷ್ಮೆ ಗೂಡು, ರೇಷ್ಮೆ ಮೊಟ್ಟೆ ಉತ್ಪಾದನೆಗೆ ಅನುಕೂಲವಾಗಲಿದೆ. ಅಲ್ಲದೇ ರೇಷ್ಮೆ ಬೆಳೆಗಾರರು ಹಾಗೂ ಜಿಲ್ಲೆಯ ರೈತರು ರೇಷ್ಮೆ ಬೆಳೆಗಾಗಿ ತಮ್ಮ ಜಮೀನಿನಲ್ಲಿ ಹಿಪ್ಪ ನೇರಳೆ ಗಿಡಗಳನ್ನು ನೆಡಲು ಮುಂದಾಗಿದ್ದಾರೆ.
ರೇಷ್ಮೆ ಗೂಡಿಗೆ ಇದೀಗ ಉತ್ತಮವಾದ ಬೆಲೆಯಿರುವದಲ್ಲದೇ (1 ಕೆ.ಜಿ.ಗೆ 2 ರಿಂದ 3 ಮೂರು ಸಾವಿರ) ವರ್ಷದಲ್ಲಿ ನಾಲ್ಕು ಬೆಳೆಯನ್ನು ತೆಗೆಯಲು ಅನುಕೂಲವಾಗುತ್ತದೆ. ರೈತರು ತಮ್ಮ ಆರ್ಥಿಕಮಟ್ಟ ಸುಧಾರಿಸಿಕೊಳ್ಳಲು ಅನುಕೂಲವಾಗಲಿದೆ. ಈ ನಿಟ್ಟಿನಲ್ಲಿ ಜಿಲ್ಲಾ ಮತ್ತು ತಾಲೂಕು ಪಂಚಾಯಿತಿಯು ವಿಶೇಷ ಅನುದಾನಗಳನ್ನು ರೇಷ್ಮೆ ಬೆಳೆಗಾರರಿಗೆ ನೀಡಬೇಕು. ಇಲಾಖೆಯಲ್ಲಿ ಖಾಲಿಯಿರುವ ಎಲ್ಲಾ ಹುದ್ದೆಯನ್ನು ಭರ್ತಿ ಮಾಡಬೇಕು ಎಂದು ಕಾವೇರಿ ರೇಷ್ಮೆ ಸಹಕಾರ ಸಂಘದ ಅಧ್ಯಕ್ಷ ಗಣೇಶ್ ಒತ್ತಾಯಿಸಿದ್ದಾರೆ.