ಮಡಿಕೇರಿ, ಜು. 21: ಜಿಲ್ಲೆ ಯ ಸರ್ಕಾರಿ ಶಾಲೆಗಳಿಗೆ ಶಿವಮೊಗ್ಗದ ಸಂಸ್ಥೆಯೊಂದರಿಂದ ಮತ ಪ್ರಚಾರದ ಪುಸ್ತಕಗಳು ಬಂದಿದ್ದು, ಸೌಹಾರ್ದ ಯುತ ವಾತಾವರಣವನ್ನು ಕದಡುವ ಪ್ರಯತ್ನದÀ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳಬೇಕೆಂದು ಕೊಡಗು ಜಿಲ್ಲಾ ಶಿಕ್ಷಕರ ಸಂಘಗಳ ಒಕ್ಕೂಟ ಆಗ್ರಹಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಹೆಚ್.ಎಸ್. ಚೇತನ್ ಜಿಲ್ಲೆಯ ಸರಕಾರಿ ಶಾಲೆಗಳನ್ನು ಗುರಿಯಾಗಿಸಿ ಕೊಂಡು ಮತಪ್ರಚಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ಕಳುಹಿಸಿಕೊಡಲಾಗಿದೆ. ಡಿಡಿಪಿಐ ಮಚ್ಚಾಡೋ ಅವರಿಗೆ ಮಾಹಿತಿ ನೀಡಿದ ಸಂದರ್ಭ ಅವರು ಈ ಬಗ್ಗೆ ದಿಗ್ಭ್ರಮೆ ವ್ಯಕ್ತಪಡಿಸಿದಲ್ಲದೆ, ಯಾವದೇ ಕಾರಣಕ್ಕೂ ಇಂತಹ ಪುಸ್ತಕಗಳನ್ನು ಶಾಲೆಯ ಗ್ರಂಥಾಲಯದಲ್ಲಿ ಇಡಬಾರದು ಮತ್ತು ಪುಸ್ತಕಗಳನ್ನು ಹಿಂದಕ್ಕೆ ಕಳುಹಿಸುವಂತೆ ಸೂಚನೆ ನೀಡಿದ್ದಾರೆ. ಅಲ್ಲದೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೂ ದೂರು ಸಲ್ಲಿಸಿದ್ದಾರೆ ಎಂದು ಸ್ಪಷ್ಟಪಡಿಸಿದರು.

ಮಚ್ಚಾಡೋ ಅವರ ವಿರುದ್ಧ ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಗಳನ್ನು ಮಾಡುವದು ಸರಿಯಾದ ಕ್ರಮವಲ್ಲ. ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಮಾನವೀಯ ನೆಲೆಗಟ್ಟಿನಲ್ಲಿ ಶ್ರಮಿಸುತ್ತಿರುವ ಉಪನಿರ್ದೇಶಕರಿಗೆ ಶಿಕ್ಷಕರ ಸಂಘಗಳ ಒಕ್ಕೂಟ ನೈತಿಕ ಬೆಂಬಲವನ್ನು ಸೂಚಿಸುತ್ತದೆ ಎಂದರು.

ಅನುದಾನಿತ ಶಾಲಾ ಕಾಲೆÉೀಜು ನೌಕರರ ಸಂಘದ ಜಿಲ್ಲಾಧ್ಯಕ್ಷ ಪ್ರಭು ಕುಮಾರ್ ಮಾತನಾಡಿ, ಧರ್ಮ ಪ್ರಚಾರದ ಪುಸ್ತಕಗಳನ್ನು ಶಾಲೆಗಳಿಗೆ ಕಳುಹಿಸುವ ಮೂಲಕ ಅಶಾಂತಿಗೆ ಪ್ರಚೋದನೆ ನೀಡುತ್ತಿರುವದು ಖಂಡನೀಯ. ಇನ್ನು ಮುಂದೆ ಬರುವ ಪುಸ್ತಕವನ್ನು ಸ್ವೀಕರಿಸುವದು ಬೇಡ ಎಂದ ಅವರು, ಜಿಲ್ಲಾಡಳಿತ ಸಂಬಂಧಪಟ್ಟವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದರು.

ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಮಾತನಾಡಿ, ಡಿಡಿಪಿಐ ಜಾತ್ಯತೀತ ನೆಲೆಗಟ್ಟಿನಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರನ್ನು ಪ್ರಕರಣದೊಂದಿಗೆ ತಾಳೆ ಹಾಕುವ ಕ್ರಮವನ್ನು ಖಂಡಿಸುವದಾಗಿ ತಿಳಿಸಿದರು.

ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಸಹ ಕಾರ್ಯದರ್ಶಿ ರೇವತಿ ರಮೇಶ್, ಮಡಿಕೇರಿ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮೋಹನ್ ಪೆರಾಜೆ ಮಾತನಾಡಿದರು. ಗೋಷ್ಠಿಯಲ್ಲಿ ಪ್ರಾಥಮಿಕ ಮತ್ತು ಮಾಧ್ಯಮಿಕ ಶಾಲೆಗಳ ಎಸ್‍ಸಿ, ಎಸ್‍ಟಿ ಶಿಕ್ಷಕರ ಕ್ಷೇಮಾಭಿವೃದ್ಧಿ ಸಂಘದÀ ಜಿಲ್ಲಾಧ್ಯಕ್ಷ ಬಿ.ಸಿ. ರಾಜು ಉಪಸ್ಥಿತರಿದ್ದರು.

ಮಣಿಉತ್ತಪ್ಪ ಆಗ್ರಹ

ಜಿಲ್ಲೆಯ ಸರಕಾರಿ ಶಾಲೆಗಳಿಗೆ ಮತ ಪ್ರಚಾರಕ್ಕೆ ಸಂಬಂಧಿಸಿದ ಪುಸ್ತಕಗಳನ್ನು ರವಾನಿಸಿರುವ ಶಿವಮೊಗ್ಗದ ಗಿಡಿಯನ್ ಇನ್ ಇಂಡಿಯಾ ವಿರುದ್ಧ ಕಾನೂನು ಕ್ರಮಕೈಗೊಳ್ಳುವದರೊಂದಿಗೆ ಸಂಸ್ಥೆಯ ಎಸ್. ಗಿರಿ ಎಂಬವರನ್ನು ಕೂಡಲೇ ಬಂಧಿಸಬೇಕು ಎಂದು ಸೋಮವಾರ ಪೇಟೆ ತಾಲೂಕು ಪಂಚಾಯಿತಿ ಸದಸ್ಯ ಬಲ್ಲಾರಂಡ ಮಣಿ ಉತ್ತಪ್ಪ ಒತ್ತಾಯಿಸಿದ್ದಾರೆ. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿ ಕಾರಿಗಳಿಗೆ ದೂರು ನೀಡಿರುವ ಅವರು, ಮುಂದಿನ 15 ದಿನಗಳ ಒಳಗಾಗಿ ಸಂಬಂಧಿಸಿದವರ ವಿರುದ್ಧ ಕ್ರಮ ಕೈಗೊಳ್ಳದಿದ್ದಲ್ಲಿ ನ್ಯಾಯಾಲಯದ ಮೊರೆ ಹೋಗುವದಾಗಿ ಸುದ್ದಿಗೋಷ್ಠಿಯಲ್ಲಿ ಎಚ್ಚರಿಕೆ ನೀಡಿದರು. ಪುಸ್ತಕಗಳನ್ನು ಸರಬರಾಜು ಮಾಡಿರುವ ವ್ಯಕ್ತಿಗಳು ಜಿಲ್ಲೆಯ ಎಲ್ಲಾ ಸರಕಾರಿ ಶಾಲೆಗಳ ಅಂಚೆ ವಿಳಾಸವನ್ನು ತಪ್ಪಿಲ್ಲದಂತೆ ನಮೂದಿಸಿದ್ದು, ಇದನ್ನು ಗಮನಿಸಿದರೆ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕರು ಶಾಮೀಲಾಗಿರುವ ಸಂಶಯವಿದೆ ಎಂದು ಆರೋಪಿಸಿದ ಮಣಿ ಉತ್ತಪ್ಪ, ಪ್ರಕರಣಕ್ಕೆ ಸಂಬಂಧಿಸಿದಂತೆ ಅವರನ್ನೂ ತನಿಖೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದರು.

ಗೋಷ್ಠಿಯಲ್ಲಿ ಕೃಷಿ ಪತ್ತಿನ ಸಹಕಾರ ಸಂಘದ ನಿರ್ದೇಶಕ ಧನಂಜಯ ಉಪಸ್ಥಿತರಿದ್ದರು.