ಗೋಣಿಕೊಪ್ಪಲು, ಜು. 21: ಇತ್ತೀಚೆಗೆ ಕಾವೇರಿ ಪದವಿಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ಪತ್ರಿಕೋದ್ಯಮ ಕ್ಷೇತ್ರದ ಕುರಿತು ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿತ್ತು. ಕಾವೇರಿ ಪದವಿ ಕಾಲೇಜು, ವೀರಾಜಪೇಟೆಯ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥ ಐನಂಡ ಎಂ. ಸೋಮಣ್ಣ ಕಾರ್ಯಾಗಾರವನ್ನು ನಡೆಸಿಕೊಟ್ಟರು. ಪತ್ರಿಕೋದ್ಯಮ ಇಂದು ಹೆಚ್ಚು ಪ್ರಚಲಿತದಲ್ಲಿರುವ ಕ್ಷೇತ್ರವಾಗಿದ್ದು ಸಮಾಜದ ಕನ್ನಡಿಯಂತೆ ಕೆಲಸ ನಿರ್ವಹಿಸುತ್ತಿದೆ. ಇದು ದೇಶದ ಯಾವದೇ ಕ್ಷೇತ್ರದ ಘಟನೆಗಳನ್ನು ಪ್ರತಿಯೊಬ್ಬರಿಗೂ ಮನಮುಟ್ಟುವಂತೆ ತಲಪಿಸುತ್ತಿದೆ. ಈ ಕ್ಷೇತ್ರವು ಯುವಕರಿಗೆ ವಿಪುಲವಾದ ಉದ್ಯೋಗಾವ ಕಾಶಗಳನ್ನು ಒದಗಿಸುತ್ತಿದೆ. ಆದರೆ ಮಾಧ್ಯಮ ಕ್ಷೇತ್ರಕ್ಕೆ ಬರಲು ಯುವಕರು ಹಿಂಜರಿಯುತ್ತಿದ್ದಾರೆ. ಇಂದು ಪತ್ರಿಕೋದ್ಯಮ ಕ್ಷೇತ್ರಕ್ಕೆ ಪ್ರವೇಶಿಸಲು ಹಲವಾರು ಕೋರ್ಸುಗಳು ವಿಶ್ವವಿದ್ಯಾನಿಲಯ ಮಟ್ಟದಲ್ಲಿವೆ. ಯುವಕರು ಈ ಪದವಿ ಪಡೆದು ಸಮಾಜ ಸೇವೆಯಲ್ಲಿ ತೊಡಗಿಕೊಳ್ಳ ಬೇಕೆಂದು ಕರೆ ನೀಡಿದರು.
ಜೊತೆಗೆ ಕಾರ್ಯಾಗಾರದಲ್ಲಿ ಯಾವದೇ ಸುದ್ದಿಗಳನ್ನು ಹೇಗೆ ಸಂಗ್ರಹಿಸಬೇಕು, ಬರೆಯಬೇಕು, ಎಲ್ಲಿಗೆ ಕಳುಹಿಸಬೇಕು ಎಂಬಿತ್ಯಾದಿ ವಿಷಯಗಳ ಬಗ್ಗೆ ಸವಿವರವಾಗಿ ತಿಳಿಸಿಕೊಟ್ಟರು. ಪತ್ರಿಕೆಯ ಮುಖಪುಟ ಮತ್ತು ಒಳಪುಟಗಳ ವಿನ್ಯಾಸ ರಚನೆ ಹೇಗಿರಬೇಕು, ಯಾವ ಸುದ್ದಿಗಳನ್ನು ಯಾವ ಪುಟಗಳಲ್ಲಿ ಪ್ರಕಟಿಸಬೇಕು ಹಾಗೂ ಜಾಹಿರಾತುಗಳನ್ನು ಪ್ರಕಟಿಸುವ ಬಗ್ಗೆಯು ತಿಳಿಸಿಕೊಟ್ಟರು. ಜೊತೆಗೆ ವಿದ್ಯಾರ್ಥಿಗಳಾಗಿ ದೈನಿಕ, ಮಾಸಿಕ ಮತ್ತು ವಾರ್ಷಿಕ ಸಂಚಿಕೆಗಳನ್ನು ಹೇಗೆ ಹೊರತರಬೇಕು ಎಂಬದರ ಬಗ್ಗೆಯು ಮನವರಿಕೆ ಮಾಡಿಕೊಟ್ಟರು.
ಇಂಗ್ಲಿಷ್ ಉಪನ್ಯಾಸಕಿ ಪೂವಮ್ಮ ಎಂ.ಬಿ. ಸ್ವಾಗತಿಸಿದರೆ, ಪ್ರಾಂಶುಪಾಲ ಎಸ್.ಎಸ್. ಮಾದಯ್ಯ ವಂದಿಸಿದರು.