ಗೋಣಿಕೊಪ್ಪ ವರದಿ, ಜು. 21: ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಸಹಾಯಕ ಪ್ರಾದ್ಯಾಪಕ ಡಾ. ವಿ. ಮಹೇಶ್ವರಪ್ಪ ಅವರು ಅರಣ್ಯ ಜೀವಶಾಸ್ತ್ರ ಮತ್ತು ವೃಕ್ಷ ಅಭಿವೃದ್ಧಿ ವಿಭಾಗದಲ್ಲಿ ನಡೆಸಿದ ಸಂಶೋಧನೆಗೆ ಪಿ.ಎಚ್.ಡಿ ಗೌರವ ಡಾಕ್ಟರೇಟ್ ಲಭಿಸಿದೆ. ಕಾಫಿ ಬೆಳೆ ಮೂಲಕ ವಿನಾಶದಂಚಿನಲ್ಲಿರುವ ಮರಗಳ ಪೋಷಣೆ ವಿಷಯದ ಕುರಿತು ಧಾರವಾಡ ಕೃಷಿ ವಿಶ್ವ ವಿದ್ಯಾಲಯದಲ್ಲಿ ಮಂಡಿಸಿದ್ದ ವಿಷಯಕ್ಕೆ ಗೌರವ ಲಭಿಸಿದೆ.

2015 ರಿಂದ 2018 ರವರೆಗೆ ನಡೆಸಿದ ಸಂಶೋಧನೆಯ ಫಲಿತಾಂಶ ಪ್ರಕಾರ ಕೊಡಗಿನ ಕಾಫಿ ತೋಟಗಳಲ್ಲಿ ಬೆಳೆಸಿರುವ ಗಿಡ ಮರಗಳಿಂದ ವಿನಾಶದಂಚಿನಲ್ಲಿರುವ ಗಿಡ ಹಾಗೂ ಉಪಯೋಗಕ್ಕೆ ಬರುವ ಮರಗಳ ವಿವಿಧತೆಯನ್ನು ಕಾಪಾಡುವಲ್ಲಿ ಮುಖ್ಯ ಪಾತ್ರ ವಹಿಸಿಕೊಂಡಿವೆ ಎಂಬದನ್ನು ದಾಖಲಿಸಿದ್ದರು. ಶಿರಸಿ ಅರಣ್ಯ ಮಹಾವಿದ್ಯಾಲಯದಲ್ಲಿ ಹೆಚ್ಚಿನ ವ್ಯಾಸಂಗ ಕೈಗೊಂಡಿದ್ದ ಇವರಿಗೆ ಅರಣ್ಯ ಜೀವಶಾಸ್ತ್ರದಲ್ಲಿ ಡಾ. ಆರ್. ವಾಸುದೇವ ಮಾರ್ಗದರ್ಶಕರಾಗಿ, ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯ ಪ್ರಾದ್ಯಾಪಕ ಡಾ. ರಾಮಕೃಷ್ಣ ಹೆಗ್ಡೆ ಉಪ ಮಾರ್ಗದರ್ಶಕರಾಗಿದ್ದರು.