ಮಡಿಕೇರಿ, ಜು. 19: ಹಾಕತ್ತೂರು ಗ್ರಾಮ ಪಂಚಾಯಿತಿಯ ಗ್ರಾಮಸಭೆ ಪಂಚಾಯಿತಿ ಅಧ್ಯಕ್ಷೆ ಎ.ಆರ್. ಶಾರದ ಅಧ್ಯಕ್ಷತೆಯಲ್ಲಿ ನಡೆಯಿತು.

ಗ್ರಾಮದ ಕುವೆಂಪು ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿ.ಪಂ ಅಧ್ಯಕ್ಷ ಬಿ.ಎ. ಹರೀಶ್, ಗ್ರಾಮದ ಅಭಿವೃದ್ಧಿಗೆ ಮುಂದಿನ ದಿನಗಳಲ್ಲಿ ಕೈಗೊಳ್ಳಬಹುದಾದ ಕಾರ್ಯಗಳ ಬಗ್ಗೆ ಮಾಹಿತಿ ನೀಡಿದರು. ಯೋಜನೆಗಳ ಪ್ರಗತಿಯನ್ನು ಪರಿಶೀಲಿಸಿದ ಅವರು ತುರ್ತಾಗಿ ಆಗಬೇಕಾಗಿರುವ ಕಾಮಗಾರಿಗಳ ಕಡೆಗೆ ಗಮನ ಹರಿಸುವಂತೆ ಸಲಹೆ ನೀಡಿದರು. ಅಗತ್ಯವಿರುವ ಕಾಮಗಾರಿಗಳಿಗೆ ಜಿ.ಪಂ ಮೂಲಕ ಸಹಕಾರ ನೀಡುವದಾಗಿ ತಿಳಿಸಿದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಎಸ್.ಎಸ್. ದಿನೇಶ್ ಪ್ರಾಸ್ತವಿಕವಾಗಿ ಮಾತನಾಡಿದರು., ಸಾರ್ವಜನಿಕರು ಸಕಾಲದಲ್ಲಿ ಪಂಚಾಯಿತಿಗೆ ಮನೆ ಕಂದಾಯ, ನೀರಿನ ತೆರಿಗೆ ಪಾವತಿಸುವಂತೆ ಮನವಿ ಮಾಡಿದರು. ಮಹಾತ್ಮಗಾಂಧಿ ರಾಷ್ಟ್ರೀಯ ಉದ್ಯೋಗ ಖಾತ್ರಿ ಯೋಜನೆಯ ಬಗ್ಗೆ ಸಭೆಗೆ ವಿವರಿಸಿದರು.

ನೋಡಲ್ ಅಧಿಕಾರಿ ಶ್ರೀಕಂಠಯ್ಯ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಜರಿದ್ದು, ಇಲಾಖಾವಾರು ಮಾಹಿತಿಯನ್ನು ಗ್ರಾಮಸ್ಥರಿಗೆ ನೀಡಿದರು. ಸಭೆಯಲ್ಲಿ ತಾ.ಪಂ. ಸದಸ್ಯೆ ಕುಮುದಾ ರಶ್ಮಿ, ಗ್ರಾ.ಪಂ. ಸದಸ್ಯರುಗಳಾದ ದೇವಿಪ್ರಸಾದ್, ಪಿಯೂಶ್ ಪೆರೇರಾ, ಹೇಮಾವತಿ, ಸವಿತ, ಸರೋಜ, ಪೂವಮ್ಮ ಹಾಗೂ ಸಿಬ್ಬಂದಿಗಳು, ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಸ್ಥಳೀಯ ಆರೋಗ್ಯ ಕೇಂದ್ರದ ಸಿಬ್ಬಂದಿ ಹಾಜರಿದ್ದರು.