ಶ್ರೀಮಂಗಲ, ಜು. 20: ದ. ಕೊಡಗಿನಲ್ಲಿ ಕಳೆದ 1 ವಾರದಿಂದ ಮಳೆಯ ಪ್ರಮಾಣ ಇಳಿಮುಖ ಹಿನ್ನೆಲೆ ಕಕ್ಕಟ್ಟ್ ಪೊಳೆ (ಬರಪೊಳೆ) ನೀರಿನ ಮಟ್ಟಕಡಿಮೆಯಾಗಿದ್ದು, ರಿವರ್ ರ್ಯಾಫ್ಟಿಂಗ್ಗೆ ಹಿನ್ನಡೆಯಾಗಿದೆ. ಬ್ರಹ್ಮಗಿರಿ ತಪ್ಪಲಿನ ಬಿರುನಾಣಿ ವ್ಯಾಪ್ತಿಯಲ್ಲಿ ಉಕ್ಕಿ ಹರಿಯುವ ನೀರಿನ ಮಟ್ಟ ವಾಡಿಕೆಯಂತೆ ಬಿರುನಾಣಿ ವ್ಯಾಪ್ತಿಯು ಅತಿ ಹೆಚ್ಚು ಮಳೆ ಸುರಿಯುವ ಪ್ರದೇಶವಾಗಿದೆ. ಜೂನ್ ತಿಂಗಳಿನಲ್ಲಿ ಮುಂಗಾರು ಆರಂಭವಾದರೆ ಸೆಪ್ಟೆಂಬರ್ನಿಂದ ಅಕ್ಟೋಬರ್ವರೆಗೆ ಈ ವ್ಯಾಪ್ತಿಯಲ್ಲಿಮಳೆಯಾಗುವದರಿಂದ ಜಲ ಮೂಲಗಳು ಹಾಗೂ ಮಳೆಯಿಂದ ನದಿ ತುಂಬಿ ಹರಿಯುತ್ತದೆ.ಎತ್ತರ ಪ್ರದೇಶದಿಂದ ತಗ್ಗು ಪ್ರದೇಶದೆಡೆಗೆ ಈ ನದಿ ಹರಿಯುವದರಿಂದ ಹಲವೆಡೆ ಇಳಿಜಾರುಗಳಿದ್ದು, ಸಾಹಸ ಕ್ರೀಡೆಯಾದ ರಿವರ್ ರ್ಯಾಫ್ಟಿಂಗ್ಗೆ ಹೇಳಿ ಮಾಡಿಸಿದಂತಿದೆ. ಕಳೆದ ಒಂದು ವಾರದಿಂದ ಮಳೆ ಪ್ರಮಾಣ ತಗ್ಗಿರುವದರಿಂದ ಈ ನದಿಯಲ್ಲಿ ದಿಢೀರಾಗಿ ನೀರಿನ ಮಟ್ಟ ಇಳಿಕೆಯಾಗಿದೆ. ಸುಮಾರು 3 ರಿಂದ 4 ಅಡಿಯಷ್ಟು ನೀರು ತಗ್ಗಿದ್ದು, ರಿವರ್ ರ್ಯಾಫ್ಟಿಂಗ್ ಸರಾಗವಾಗಿ ತೆರಳಲು ತೊಡಕಾಗಿದೆ. ಅಲ್ಲಲ್ಲಿ ಈ ನದಿಯ ಕಲ್ಲುಗಳು ನದಿಯ ಮಧ್ಯದಲ್ಲಿ ಕಾಣಿಸಿಕೊಂಡಿದ್ದು ರಿವರ್ ರ್ಯಾಫ್ಟಿಂಗ್ ಸುಗಮವಾಗಿ ಸಾಗಲು ಹಾಗೂ ಸ್ವಾಭಾವಿಕವಾಗಿ ಸಾಗಲು ತೊಂದರೆಯಾಗುತ್ತಿದೆ. ಕಳೆದ ಒಂದುವಾರದಿಂದ ರಿವರ್ ರ್ಯಾಫ್ಟಿಂಗ್ಗೆ ಜನರು ಬರುತ್ತಿಲ್ಲ.
ಈಗಾಗಲೇ ಜಿಲ್ಲಾಡಳಿತ ಈ ನದಿಯಲ್ಲಿ
(ಮೊದಲ ಪುಟದಿಂದ) ರಿವರ್ ರ್ಯಾಫ್ಟಿಂಗ್ ನಡೆಸಲು ಕೂರ್ಗ್ ವಾಟರ್ ಸ್ಪೋಟ್ರ್ಸ್ ಮತ್ತು ಅಡ್ವೆಂಚರ್, ಕೊಡಗು ವೈಟ್ ವಾಟರ್ ರ್ಯಾಫ್ಟಿಂಗ್, ಕೂರ್ಗ್ ವೈಟ್ ವಾಟರ್ ರ್ಯಾಫ್ಟಿಂಗ್ ಮತ್ತು ಏಸ್ ಪೆಡ್ಲರ್ ಎಂಬ ನಾಲ್ಕು ಸಂಸ್ಥೆಗಳಿಗೆ ಅನುಮತಿ ನೀಡಿದ್ದು, ಈ ಸಂಸ್ಥೆಗಳು ಇಲ್ಲಿ ಕಳೆದ 20 ದಿನಗಳಿಂದ ರ್ಯಾಫ್ಟಿಂಗ್ ಕ್ರೀಡೆ ಆರಂಭಿಸಿತ್ತು.
ಒಂದು ವಾರದಿಂದ ಈ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ತಗ್ಗಿರುವದರಿಂದ ಅನುಮತಿ ಪಡೆದಿರುವ ಸಂಸ್ಥೆಗಳು ರ್ಯಾಫ್ಟಿಂಗ್ ನಡೆಸಲು ಸಾಧ್ಯವಾಗದೆ ಪರಿತಪಿಸುತ್ತಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಳೆಯಾದರೆ ಮಾತ್ರ ರ್ಯಾಫ್ಟಿಂಗ್ ನಡೆಸಲು ಸಾಧ್ಯವಾಗಲಿದೆ. ಕಡಿಮೆ ನೀರಿನ ಮಟ್ಟದಲ್ಲಿ ರ್ಯಾಫ್ಟಿಂಗ್ ನಡೆಸಲು ಸಾಧ್ಯವಾಗದೇ ಇರುವದರಿಂದ ರ್ಯಾಫ್ಟಿಂಗ್ ಅರಸಿ ಆಗಮಿಸುವ ಸ್ಥಳೀಯರು ಹಾಗೂ ಪ್ರವಾಸಿಗರಿಗೂ ನದಿಯಲ್ಲಿ ನೀರಿನ ಮಟ್ಟ ತಗ್ಗಿರುವದರಿಂದ ನಿರಾಸೆ ಮೂಡಿಸಿದೆ.
ಈ ವ್ಯಾಪ್ತಿಯಲ್ಲಿ ಮಳೆ ಪ್ರಮಾಣ ತಗ್ಗಿರುವದರಿಂದ ನದಿ ನೀರಿನ ಮಟ್ಟ ಕುಸಿದಿದೆ. ಇದರಿಂದ ನದಿಯ ಮಧ್ಯದಲ್ಲಿ ಬಂಡೆ ಕಲ್ಲುಗಳು ಕಾಣುವಂತಾಗಿದೆ. ರ್ಯಾಫ್ಟಿಂಗ್ ಸರಾಗವಾಗಿ ಸಾಗಲು ಇದರಿಂದ ತೊಡಕಾಗಿದೆ. ಜಿಲ್ಲಾಡಳಿತ ಅತೀ ಹೆಚ್ಚು ಮಳೆ ಬೀಳುವ ಹವಮಾನ ಇಲಾಖೆಯ ವರದಿ ಹಿನ್ನೆಲೆ ಮುನ್ನೆಚರಿಕೆಯಿಂದ ರೆಡ್ ಅಲರ್ಟ್ ಘೋಷಿಸಿದ್ದು, ಇದರಿಂದ ಪ್ರವಾಸಿಗರು ಜಿಲ್ಲೆಗೆ ಆಗಮಿಸಲು ಹಿಂದೇಟು ಹಾಕುತ್ತಿದ್ದಾರೆ ಎಂದು ಬೋಸ್ ಮಾದಪ್ಪ, ಪಾಲುದಾರರು-ಕೂರ್ಗ್ ವಾಟರ್ ಸ್ಪೋಟ್ರ್ಸ್ ಮತ್ತು ಅಡ್ವೆಂಚರ್ ಸಂಸ್ಥೆ ಶ್ರೀಮಂಗಲ ಎಂದು ಪ್ರತಿಕ್ರಿಯಿಸಿದ್ದಾರೆ. - ವರದಿ : ಹರೀಶ್ ಮಾದಪ್ಪ