ಮಡಿಕೇರಿ, ಜು. 20: ಉತ್ತರ ಪ್ರದೇಶದಲ್ಲಿ ಗುಂಡಿನ ದಾಳಿ ನಡೆದ ಸ್ಥಳಕ್ಕೆ ಭೇಟಿ ನೀಡಲು ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ತೆರಳುತ್ತಿದ್ದಾಗ ಪೊಲೀಸರು ಅಕ್ರಮ ಬಂಧನ ಮಾಡಿದ್ದಾರೆ ಎಂದು ಆರೋಪಿಸಿ ಜಿಲ್ಲಾ ಪ್ರತಿಭಟನೆ ನಡೆಸಿತು.

ನಗರದ ಮಹಾತ್ಮ ಗಾಂಧಿ ಪ್ರತಿಮೆ ಎದುರು ಜಮಾಯಿಸಿದ ಪ್ರತಿಭಟನಾಕಾರರು ಬಿಜೆಪಿ, ಕೇಂದ್ರ ಸರ್ಕಾರ, ಉತ್ತರ ಪ್ರದೇಶ ಸರ್ಕಾರ, ಯೋಗಿ ಆದಿತ್ಯನಾಥ್ ವಿರುದ್ಧ ಘೋಷಣೆ ಕೂಗಿದರು.

ಈ ಸಂದರ್ಭ ಮಾತನಾಡಿದ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಕೆ ಮಂಜುನಾಥ್, ಉತ್ತರಪ್ರದೇಶದ ಸೋನ್ ಭದ್ರ ಎಂಬಲ್ಲಿ ತುಂಡು ಭೂಮಿ ವಿಚಾರಕ್ಕೆ ಗುಂಡಿನ ದಾಳಿ ನಡೆದಿತ್ತು. ಬುಡಕಟ್ಟು ಜನಾಂಗದ 10 ಮಂದಿ ಸಾವನ್ನಪ್ಪಿದ್ದು, ಹಲವಾರು ಮಂದಿ ಗಾಯಗೊಂಡಿದ್ದಾರೆ. ಘಟನಾ ಸ್ಥಳಕ್ಕೆ ತೆರಳುತ್ತಿದ್ದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ ಅವರನ್ನು ಮಾರ್ಗಮಧ್ಯೆಯೇ ತಡೆದ ಪೊಲೀಸರು ಅವರನ್ನು ಬಂಧಿಸಿದ್ದಾರೆ. ಉತ್ತರ ಪ್ರದೇಶ ಸರ್ಕಾರದ ಕ್ರಮ ಖಂಡನೀಯವಾಗಿದ್ದು, ಇದನ್ನು ಜಿಲ್ಲಾ ಕಾಂಗ್ರೆಸ್ ಪ್ರತಿರೋಧಿಸುತ್ತದೆ. ಕೇಂದ್ರ ಸರ್ಕಾರದ ನಿರ್ದೇಶನದಂತೆ ಉತ್ತರ ಪ್ರದೇಶದ ಯೋಗಿ ಸರ್ಕಾರ ಸಂವಿಧಾನ ವಿರೋಧಿ ಕೆಲಸ ಮಾಡುತ್ತಿದ್ದು, ಬಿಜೆಪಿ ಸರ್ಕಾರ ರೈತ ವಿರೋಧಿ, ಬಡಜನ ವಿರೋಧಿ, ಬುಡಕಟ್ಟು ಜನಾಂಗದ ವಿರೋಧಿ ಸರ್ಕಾರ ಎಂಬದನ್ನು ಪದೇ ಪದೇ ಸಾಬೀತು ಪಡಿಸುತ್ತಿದೆ ಎಂದು ಆರೋಪಿಸಿದರು.

ಪ್ರತಿಭಟನೆಯಲ್ಲಿ ಕೆಪಿಸಿಸಿ ಉಪಾಧ್ಯಕ್ಷ ಮಿಟ್ಟು ಚಂಗಪ್ಪ, ಕಾರ್ಯದರ್ಶಿ ಚಂದ್ರಕಲಾ, ಸದಸ್ಯ ಟಿ.ಪಿ. ರಮೇಶ್, ವಕ್ಫ್ ಮಂಡಳಿ ಅಧ್ಯಕ್ಷ ಯಾಕೂಬ್, ನಗರಾಧ್ಯಕ್ಷ ಅಬ್ದುಲ್ ರಜಾಕ್, ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್, ಪ್ರಮುಖರಾದ ಟಿ.ಇ. ಸುರೇಶ್, ಎಂ.ಎ. ಉಸ್ಮಾನ್, ಅಪ್ರು ರವೀಂದ್ರ ಮತ್ತಿತರರು ಇದ್ದರು.