ಗೋಣಿಕೊಪ್ಪಲು, ಜು. 20: ಜಿಲ್ಲಾಧಿಕಾರಿಗಳ ನಿಯಮಗಳನ್ನು ಉಲ್ಲಂಘಿಸಿ ಭಾರೀ ಗಾತ್ರದ ಮರಗಳನ್ನು ಕೇರಳ ರಾಜ್ಯಕ್ಕೆ ಸಾಗಾಟ ಮಾಡುತ್ತಿರುವದನ್ನು ಪತ್ತೆ ಹಚ್ಚಿದ ಅರಣ್ಯ ಇಲಾಖೆಯ ಅಧಿಕಾರಿಗಳು ಮರ ಸಹಿತ ಲಾರಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

ಆಗಸ್ಟ್ 8 ರವರೆಗೆ ಜಿಲ್ಲೆಯಲ್ಲಿ ಯಾವದೇ ಮರಗಳನ್ನು ಸಾಗಿಸಬಾರದು ಎಂಬ ಕಟ್ಟು ನಿಟ್ಟಿನ ಆದೇಶ ಕೊಡಗು ಜಿಲ್ಲಾಧಿಕಾರಿಗಳಿಂದ ಹೊರಬಿದ್ದಿದ್ದರು ಈ ಆದೇಶವನ್ನು ಉಲ್ಲಂಘಿಸಿ ಮಿತಿಯನ್ನು ಮೀರಿ ಸಿಲ್ವರ್ ಮರವನ್ನು ಕೊಡಗಿನ ಗಡಿ ಭಾಗವಾದ ಕುಟ್ಟ ಗೇಟ್ ಬಳಿಯಿಂದ ಕೇರಳಕ್ಕೆ ಸಾಗಿಸುವ ಪ್ರಯತ್ನ ನಡೆದಿತ್ತು.

ಪೊನ್ನಂಪೇಟೆ ಅರಣ್ಯ ಇಲಾಖೆಯ ಅಧಿಕಾರಿಗಳಾದ ಗಂಗಾಧರ್ ಹಾಗೂ ಸಿಬ್ಬಂದಿಗಳು ಗಸ್ತು ತಿರುಗುವಿಕೆಯ ಸಂದರ್ಭದಲ್ಲಿ ಮರ ಸಾಗಾಟದ ಲಾರಿ ಕಂಡು ಬಂದಿದೆ. ಲಾರಿ ಚಾಲಕನನ್ನು ವಶಕ್ಕೆ ಪಡೆದ ಅರಣ್ಯ ಅಧಿಕಾರಿಗಳು ಅತಿ ಹೆಚ್ಚಾಗಿ ಲೋಡ್ ಮಾಡಿದ ಹಿನ್ನೆಲೆಯಲ್ಲಿ ಮಡಿಕೇರಿಯ ಆರ್ ಟಿ ಒ,ಹಾಗೂ ಜಿಲ್ಲಾಡಳಿತಕ್ಕೆ ಮುಂದಿನ ಕ್ರಮಕ್ಕೆ ವರದಿ ಸಲ್ಲಿಸಿದ್ದಾರೆ. ಅರಣ್ಯ ಇಲಾಖೆಯ ಸಿಬ್ಬಂದಿಗಳಾದ ರಾಜೇಶ್, ಚಾಲಕ ಸಂಜು,ಇತರ ಸಿಬ್ಬಂದಿಗಳು ಹಾಜರಿದ್ದರು.

-ಹೆಚ್.ಕೆ. ಜಗದೀಶ್