ಶ್ರೀಮಂಗಲ, ಜು. 20: ರೈತರ ಸಂಪೂರ್ಣ ಸಾಲ ಮನ್ನಾ ಸೇರಿದಂತೆ ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ವತಿಯಿಂದ ತಾ. 21 ರಂದು (ಇಂದು) ಹಾವೇರಿಯಲ್ಲಿ ಹಮ್ಮಿಕೊಂಡಿರುವ ಪ್ರತಿಭಟನಾ ಮೆರವಣಿಗೆಯಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯಿಂದ ಪ್ರೊ.ಎಂ.ಡಿ. ನಂಜುಂಡ ಸ್ವಾಮಿ ಬಣದ ರೈತ ಸಂಘದಿಂದ ರೈತರು ಹಾಗೂ ರೈತ ಮಹಿಳೆಯರು ವಿಶೇಷ ಬಸ್‍ನಲ್ಲಿ ಶನಿವಾರ ತೆರಳಿದರು.

ಜಿಲ್ಲಾ ರೈತ ಸಂಘದ ಅಧ್ಯಕ್ಷ ಚಿಮ್ಮಂಗಡ ಗಣೇಶ್ ಗಣಪತಿ ಅವರ ನೇತೃತ್ವದಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸುಮಾರು 60ಕ್ಕೂ ಅಧಿಕ ರೈತ ಸಂಘದ ಕಾರ್ಯಕರ್ತರು ಶ್ರೀಮಂಗಲದಿಂದ ತೆರಳಿದರು.

ಈ ಸಂದರ್ಭ ಮಾತನಾಡಿದ ಗಣೇಶ್ ಗಣಪತಿ ಹಾವೇರಿಯ ಹುಕ್ಕೇರಿ ಮಠದಿಂದ ಹೊಸಮನಿ ಸಿದ್ಧಪ್ಪ ವೃತ್ತದವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಲಿದ್ದು, ರೈತರ ಸಂಪೂರ್ಣ ಸಾಲಮನ್ನಾ, ಅತಿವೃಷ್ಟಿ ಅನಾವೃಷ್ಟಿಯಿಂದ ಆದ ಬೆಳೆ ನಷ್ಟಕ್ಕೆ ವೈಜ್ಞಾನಿಕ ಪರಿಹಾರ ನೀತಿ ಜಾರಿಯಾಗಬೇಕು ಸೇರಿದಂತೆ ಪ್ರಮುಖ ಬೇಡಿಕೆಗಳ ಈಡೇರಿಕೆಗಾಗಿ ಪ್ರತಿಭಟನೆ ನಡೆಯುತ್ತಿದೆ. ಪ್ರತಿಭಟನೆಗೆ ಜಿಲ್ಲೆಯ ರೈತರ ಪರವಾಗಿ ರೈತ ಸಂಘದಿಂದ ಬೆಂಬಲ ವ್ಯಕ್ತಪಡಿಸಿ ಈ ಪ್ರತಿಭಟನೆಯಲ್ಲಿ ಪಾಲ್ಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.