ಸೋಮವಾರಪೇಟೆ, ಜು.20: ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ಆಶ್ರಯದಲ್ಲಿ ನಗರ ಪತ್ರಕರ್ತರ ಸಂಘ ಹಾಗೂ ಪತ್ರಿಕಾಭವನ ಟ್ರಸ್ಟ್ ಸಹಯೋಗದೊಂದಿಗೆ ಇಲ್ಲಿನ ಪತ್ರಿಕಾ ಭವನ ಸಭಾಂಗಣದಲ್ಲಿ ಪತ್ರಿಕಾ ದಿನಾಚರಣೆ ಮತ್ತು ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು.

ಪತ್ರಿಕಾ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದ ಉದ್ಯಮಿ ಹಾಗೂ ದಾನಿಗಳಾದ ಹರಪಳ್ಳಿ ರವೀಂದ್ರ ಅವರು, ಸಮಾಜದ ಏಳಿಗೆಯ ಮುಂಚೂಣಿ ಪ್ರಜೆಗಳಾಗಿರುವ ಪತ್ರಕರ್ತರು ತಮ್ಮ ಕರ್ತವ್ಯದ ಹೊಣೆಗಾರಿಕೆಯನ್ನು ಅರಿಯಬೇಕಿದೆ. ರಾಜಕೀಯ ಕ್ಷೇತ್ರದ ಸುಧಾರಣೆಯಲ್ಲಿ ಮಾಧ್ಯಮ ಕ್ಷೇತ್ರದ ಹೊಣೆಗಾರಿಗೆ ಬಹುಮುಖ್ಯವಾಗಿದೆ ಎಂದರು.

ಪತ್ರಕರ್ತರು ಸಮಾಜದ ಸುಧಾರಕರಾಗಿದ್ದು, ದಿನನಿತ್ಯ ನಡೆಯುವ ವಿದ್ಯಮಾನಗಳ ಬಗ್ಗೆ ಸಮಾಜದಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮಾಡಬೇಕಿದೆ ಎಂದರು. ಸೇವೆಯನ್ನು ಸಂಶಯದ ದೃಷ್ಟಿಯಲ್ಲಿ ನೋಡುವ ಪ್ರವೃತ್ತಿ ಸಮಾಜದ ಕೆಲವರಲ್ಲಿದ್ದು, ಅವರುಗಳಿಂದಾಗಿ ಸೇವಾ ಮನೋಭಾವನೆಯ ಹಲವಷ್ಟು ಮಂದಿ ಹಿಂದೆ ಉಳಿದಿದ್ದಾರೆ. ನಿಸ್ವಾರ್ಥ ಸೇವೆಯನ್ನು ಗುರುತಿಸುವ ಪ್ರಾಮಾಣಿಕ ಕೆಲಸ ಮಾಧ್ಯಮ ಕ್ಷೇತ್ರದಿಂದ ಆಗಬೇಕಿದೆ ಎಂದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ, ಪತ್ರಕರ್ತರು ಓದಿನ ಆಸಕ್ತಿ ಬೆಳೆಸಿಕೊಳ್ಳಬೇಕು. ಸಮಾಜದ ವಿವಿಧ ಕ್ಷೇತ್ರಗಳ ಬಗ್ಗೆ ಜ್ಞಾನ ಹೊಂದಬೇಕು ಎಂದು ಕಿವಿಮಾತು ನುಡಿದರು.

ಪತ್ರಿಕಾಭವನ ಟ್ರಸ್ಟ್ ಅಧ್ಯಕ್ಷ ಎಸ್. ಮಹೇಶ್ ಮಾತನಾಡಿ, ಗ್ರಾಮೀಣ ಭಾಗದಲ್ಲಿ ಕಾರ್ಯನಿರ್ವಹಿಸುವ ಪತ್ರಕರ್ತರಿಗೆ ಸರ್ಕಾರದಿಂದ ಹೆಚ್ಚಿನ ಸವಲತ್ತುಗಳನ್ನು ನೀಡಬೇಕಿದೆ ಎಂದು ಅಭಿಪ್ರಾಯಿಸಿದರು.

ಭಾರತೀಯ ಪತ್ರಕರ್ತರ ಒಕ್ಕೂಟದ ನಿರ್ದೇಶಕ ಎಸ್.ಎ. ಮುರುಳೀಧರ್ ಅವರು. ರಾಜ್ಯ ಹಾಗೂ ರಾಷ್ಟ್ರದಲ್ಲಿ ಪತ್ರಿಕೋದ್ಯಮದ ಬೆಳವಣಿಗೆಯ ಬಗ್ಗೆ ವಿವರ ಮಾಹಿತಿ ಒದಗಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಸಂಘದ ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ವಹಿಸಿದ್ದರು. ರಾಜ್ಯ ಸಂಘದ ನಿರ್ದೇಶಕ ಅಜ್ಜಮಾಡ ರಮೇಶ್ ಕುಟ್ಟಪ್ಪ, ನಗರ ಪತ್ರಕರ್ತರ ಸಂಘದ ಅಧ್ಯಕ್ಷ ಡಿ.ಪಿ. ಲೋಕೇಶ್ ಅವರುಗಳು ಉಪಸ್ಥಿತರಿದ್ದರು.

ಪ್ರಶಸ್ತಿ ಪ್ರದಾನ: ನಂತರ ತಾಲೂಕು ಪತ್ರಕರ್ತರ ಸಂಘದಿಂದ ಕೊಡಮಾಡುವ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭ ನಡೆಯಿತು. ಗರಗಂದೂರು ಗ್ರೀನ್‍ವ್ಯಾಲಿ ಪ್ರಾಡಕ್ಟ್ಸ್‍ನ ವ್ಯವಸ್ಥಾಪಕ ಪಾಲುದಾರ ಮಧು ಬೋಪಣ್ಣ ಅವರು ಕಾರ್ಯಕ್ರಮದಲ್ಲಿ ಭಾಗವಹಿಸಿ ಪ್ರಶಸ್ತಿ ವಿತರಣೆ ಮಾಡಿದರು.

ನಂತರ ಮಾತನಾಡಿದ ಅವರು, ಪ್ರಾಕೃತಿಕ ಸಂಪತ್ತನ್ನು ಉಳಿಸಿಕೊಳ್ಳುವ ಸಾಮೂಹಿಕ ಜವಾಬ್ದಾರಿ ಎಲ್ಲರ ಮೇಲಿದೆ. ಪರಿಸರ ರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕು. ಪತ್ರಿಕೋದ್ಯಮ ಸಮಾಜದ ಆರ್ಥಿಕ, ಸಾಮಾಜಿಕ, ರಾಜಕೀಯ ಸೇರಿದಂತೆ ಪ್ರಾಕೃತಿಕ ಸುಧಾರಣೆಯತ್ತಲೂ ಗಮನ ಹರಿಸಬೇಕು ಎಂದು ಅಭಿಪ್ರಾಯಿಸಿದರು.

ತಾಲೂಕು ಸಂಘದ ಮಾಜೀ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ ತಾಯಿ ತೇಲಪಂಡ ಸೋಮಣ್ಣ ಮತ್ತು ಶಾರದ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಮೌಲ್ಯವುಳ್ಳ ವರದಿ ಪ್ರಶಸ್ತಿಯನ್ನು ‘ಶಕ್ತಿ’ಯ ಸೋಮವಾರಪೇಟೆ ವರದಿಗಾರ ವಿಜಯ್ ಹಾನಗಲ್ ಅವರಿಗೆ ವಿತರಿಸಲಾಯಿತು.

ಕುಶಾಲನಗರದ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ತಾಯಿ ಎಂ. ನಾರಾಯಣ ಮತ್ತು ಎಂ. ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಯನ್ನು ಕೂಡಿಗೆಯ ಶಕ್ತಿ ಪತ್ರಿಕೆ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ, ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ಅವರು ತಮ್ಮ ತಂದೆ ಹೆಚ್.ಎಸ್. ರಾಮೇಗೌಡ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಯನ್ನು ಸುಂಟಿಕೊಪ್ಪದ ವಿಜಯಕರ್ನಾಟಕ ವರದಿಗಾರ ಬಿ.ಕೆ. ಶಶಿಕುಮಾರ್ ರೈಅವರುಗಳಿಗೆ ನೀಡಲಾಯಿತು.

ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ತಮ್ಮ ತಂದೆ ತಾಯಿ ಬಿ.ಕೆ. ಸುಬ್ಬಯ್ಯ ಮತ್ತು ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ, ಪರಿಸರ-ವನ್ಯಜೀವಿ ವಿಭಾಗದ ಪ್ರಶಸ್ತಿಯನ್ನು ಸೋಮವಾರಪೇಟೆಯ ಪ್ರಜಾಸತ್ಯ ಪತ್ರಿಕೆಯ ವರದಿಗಾರ ಹಿರಿಕರ ರವಿ, ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್ ಅವರು ತಮ್ಮ ಸಹೋದರ ಗಣೇಶ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಸುಂಟಿಕೊಪ್ಪದ ಪ್ರಜಾವಾಣಿ ವರದಿಗಾರ ಎಂ.ಎಸ್. ಸುನಿಲ್ ಅವರುಗಳಿಗೆ ಪ್ರದಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಮಾಜ ಸುಧಾರಣೆಯ ಕರ್ತವ್ಯ ನಿರ್ವಹಿಸುತ್ತಿರುವ ಪತ್ರಕರ್ತರು ಸುದ್ದಿಯಲ್ಲಿ ರಾಜಿ ಮಾಡಿಕೊಳ್ಳಬಾರದು; ರಾಜಿ ಮಾಡಿಕೊಂಡು ಸುದ್ದಿ ಮಾಡಬಾರದು. ಜಾತಿ, ಧರ್ಮ, ಸಂಘಟನೆ, ಸ್ವಾರ್ಥವನ್ನು ಮೀರಿ ಪತ್ರಿಕೋದ್ಯಮ ಬೆಳೆಯಬೇಕು ಎಂದು ಆಶಿಸಿದರು.

ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಉಪಸ್ಥಿತರಿದ್ದರು. ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್, ನಿರ್ದೇಶಕ ವಿಶ್ವ ಕುಂಬೂರು, ಸದಸ್ಯ ಗಣೇಶ್ ಕುಡೆಕಲ್, ಖಜಾಂಚಿ ಬಿ.ಎ. ಭಾಸ್ಕರ್, ಮಾಜೀ ಅಧ್ಯಕ್ಷ ಕವನ್ ಕಾರ್ಯಪ್ಪ ಅವರುಗಳು ಕಾರ್ಯಕ್ರಮ ನಿರ್ವಹಿಸಿದರು.