ಮಡಿಕೇರಿ, ಜು. 20 : ವಿಶ್ವದ ಭೂಪಟದಲ್ಲಿ ಪ್ರವಾಸೋದ್ಯಮ ತಾಣವಾಗಿ ಗುರುತಿಸಿಕೊಂಡಿರುವ ಕೊಡಗು ಜಿಲ್ಲೆ ಮುಂದಿನ ದಿನಗಳಲ್ಲಿ ವಿಶ್ವ ಪ್ರವಾಸೋದ್ಯಮಕ್ಕೆ ತನ್ನದೇ ಆದ ಕೊಡುಗೆಗಳನ್ನು ನೀಡಲಿದೆ ಎಂದು ರಾಜ್ಯ ಪ್ರವಾಸೋದ್ಯಮ ಇಲಾಖೆಯ ವ್ಯವಸ್ಥಾಪಕ ನಿರ್ದೇಶಕ ಕುಮಾರ್ ಪುಷ್ಕರ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ನಗರದ ಖಾಸಗಿ ಹೊಟೇಲ್‍ನಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ‘ಕರ್ನಾಟಕ ಇಂಟರ್ ನ್ಯಾಷನಲ್ ಟ್ರಾವೆಲ್ ಎಕ್ಸ್ ಪೋ’ ಕಾರ್ಯಕ್ರಮದ ಪೂರ್ವಭಾವಿಯಾಗಿ ಸಭೆ ನಡೆಸಲಾಯಿತು.
ಪ್ರವಾಸೋದ್ಯಮದ ಅಭಿವೃದ್ಧಿಗಾಗಿ ಇಲಾಖೆಯಲ್ಲಿ 4.5 ಕೋಟಿ ರೂ.ಗಳನ್ನು ಮೀಸಲಿಡಲಾಗಿದೆ ಎಂದು ಮಾಹಿತಿ ನೀಡಿದ ಅವರು, ನಗರದ ಗಾಲ್ಫ್ ಮೈದಾನ ಪಕ್ಕದಲ್ಲಿ ನಿರ್ಮಾಣ ಹಂತದಲ್ಲಿರುವ ಕೊಡವ ಹೆರಿಟೇಜ್ ಸೆಂಟರ್ ಕಾಮಗಾರಿಯನ್ನು ಶೀಘ್ರವಾಗಿ ಮುಕ್ತಾಯ ಮಾಡುವ ಗುರಿಯೂ ಇಲಾಖೆಗೆ ಇದ್ದು, ರಾಜಾಸೀಟು ಉದ್ಯಾನವನ್ನೂ ಕೂಡ ಸಮಗ್ರವಾಗಿ ಅಭಿವೃದ್ಧಿ ಮಾಡಲಾಗುತ್ತದೆ ಎಂದು ಹೇಳಿದರು. ಕೊಡಗು ಜಿಲ್ಲೆಯನ್ನು ವಿಶ್ವ ಪ್ರವಾಸೋದ್ಯಮ ತಾಣವನ್ನಾಗಿ ರೂಪಿಸಲು ರಾಜ್ಯ ಪ್ರವಾಸೋದ್ಯಮ ಸಚಿವಾಲಯ 15 ಕೋಟಿ ರೂ.ಗಳನ್ನು ನೀಡುವದಾಗಿ ಹೇಳಿದೆ. ಈ ಹಿಂದೆ ಪ್ರವಾಸೋದ್ಯಮ ಸಚಿವ ಹಾಗೂ ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರೊಂದಿಗೆ ಚರ್ಚಿಸಿದ ಸಂದರ್ಭ ಅನುದಾನ ಬಿಡುಗಡೆಗೆ ಒಪ್ಪಿಗೆ ಸೂಚಿಸಿದ್ದಾರೆ ಎಂದು ಸಭೆಗೆ ತಿಳಿಸಿದರು.
ಕಳೆದ 1 ವರ್ಷದಲ್ಲಿ ಕರ್ನಾಟಕಕ್ಕೆ ದೇಶ ವಿದೇಶಗಳ 18 ಕೋಟಿ ಪ್ರವಾಸಿಗರು ಭೇಟಿ ನೀಡಿದ್ದು, ಕರ್ನಾಟಕ ಕೂಡ ಪ್ರವಾಸಿಗರ ಅಚ್ಚುಮೆಚ್ಚಿನ ತಾಣವಾಗುತ್ತಿರುವದಕ್ಕೆ ಸಾಕ್ಷಿಯಾಗಿದೆ ಎಂದು ಅವರು ಹೇಳಿದರು. ಜಿಲ್ಲೆಯ ಹೋಂ ಸ್ಟೇ, ರೆಸಾರ್ಟ್, ಲಾಡ್ಜ್ ಮತ್ತು ಪ್ರವಾಸೋದ್ಯಮ ಚಟುವಟಿಕೆಗಳಲ್ಲಿ ತೊಡಗಿಕೊಂಡಿರುವ ಪ್ರತಿಯೊಬ್ಬರೂ ಕೂಡ ಪ್ರವಾಸೋದ್ಯಮ ಇಲಾಖೆಯೊಂದಿಗೆ ಸಹಕರಿಸುವ ಮೂಲಕ ಜಿಲ್ಲೆಯನ್ನು ವಿಶ್ವ ಪ್ರವಾಸೋದ್ಯಮ ಜಿಲ್ಲೆಯನ್ನಾಗಿ ರೂಪಿಸಲು ಕೈ ಜೋಡಿಸಬೇಕೆಂದು ಕುಮಾರ್ ಪುಷ್ಕರ್ ಮನವಿ ಮಾಡಿದರು.
ಅಂತರ್ರಾಷ್ಟ್ರೀಯ ಪ್ರವಾಸೋದ್ಯಮದಲ್ಲಿ ಭಾರತ 11ನೇ ಸ್ಥಾನದಲ್ಲಿದ್ದು, ಪ್ರವಾಸೋದ್ಯಮದ ಕುರಿತಾಗಿ ಮಡಿಕೇರಿಯಲ್ಲಿ ಕಾರ್ಯಕ್ರಮ ರೂಪಿಸಿದರೆ ಹೆಚ್ಚಿನ ಪ್ರಾಮುಖ್ಯತೆ ಇರುತ್ತದೆ. ಕೊಡಗು ಎಂಬುದು ಕೇವಲ ಕರ್ನಾಟಕ, ಭಾರತ ಮಾತ್ರವಲ್ಲ ವಿದೇಶದಲ್ಲೂ ಪ್ರಮುಖ ಪ್ರವಾಸಿ ತಾಣ ಎನಿಸಿಕೊಂಡಿದೆ ಎಂದು ಹೇಳಿದರು.
ಬೆಂಗಳೂರಿನಲ್ಲಿ ಆಗಸ್ಟ್ 25 ರಿಂದ 27ರವರೆಗೆ ಪ್ರವಾಸೋದ್ಯಮ ಇಲಾಖೆ ವತಿಯಿಂದ ‘ಕರ್ನಾಟಕ ಇಂಟರ್‍ನ್ಯಾಷನಲ್ ಟ್ರಾವೆಲ್ ಎಕ್ಸ್‍ಪೊ’ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಅದರ ಅಂಗವಾಗಿ ಪ್ರವಾಸೋದ್ಯಮ ಕ್ಷೇತ್ರದಲ್ಲಿ ತೊಡಗಿಸಿಕೊಂಡವರ ಸಲಹೆ ಸೂಚನೆಗಳನ್ನು ಪಡೆಯಲು ಮಡಿಕೇರಿಯ ಕೂರ್ಗ್ ಇಂಟರ್‍ನ್ಯಾಷನಲ್ ಹೊಟೇಲ್ ಸಭಾಂಗಣದಲ್ಲಿ ಕನೆಕ್ಟ್ ಪೂರ್ವಭಾವಿ ಕಾರ್ಯಕ್ರಮ ನಡೆಸಲಾಯಿತು.
ಹೊಟೇಲ್, ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ನಾಗೇಂದ್ರ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ಪ್ರವಾಸೋದ್ಯಮ ಇನ್ನಷ್ಟು ಬೆಳವಣಿಗೆ ಹೊಂದಬೇಕು. ಮಡಿಕೇರಿಯಲ್ಲಿ ಪ್ರವಾಸಿ ಕೇಂದ್ರವೊಂದನ್ನು ಸ್ಥಾಪಿಸಿ ಆ ಮೂಲಕ ಹೊರ ಜಿಲ್ಲೆಯ ಪ್ರವಾಸಿಗರಿಗೆ ಇಲ್ಲಿನ ಪ್ರವಾಸಿ ತಾಣಗಳ ಬಗ್ಗೆ ಮಾಹಿತಿ ನೀಡುವಂತಾಗಬೇಕು, ನಿಶಾನಿ, ಪುಷ್ಪಗಿರಿ, ತಡಿಯಂಡಮೋಳ್ ಬೆಟ್ಟಗಳ ಚಾರಣಕ್ಕೆ ಸೂಕ್ತ ವ್ಯವಸ್ಥೆಗಳನ್ನು ಕಲ್ಪಿಸಬೇಕು, ನಾಲ್ಕುನಾಡು ಅರಮನೆಯನ್ನು ಅಭಿವೃದ್ದಿಪಡಿಸಬೇಕು, ಹಾರಂಗಿಗೆ ಪ್ರವಾಸಿಗರ ಭೇಟಿಗೆ ಮುಕ್ತ ಅವಕಾಶ ನೀಡಬೇಕು, ತಲಕಾವೇರಿ ಭಾಗಮಂಡಲಕ್ಕೆ ತೆರಳಲು ದ್ವಿಪಥ ರಸ್ತೆ ಯೋಜನೆ ಜಾರಿಗೊಳಿಸಬೇಕು; ಆ ಮೂಲಕ ಪ್ರವಾಸೋದ್ಯಮಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ವೇದಿಕೆಯಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆಯ ಜಂಟಿ ಆಯುಕ್ತ ನವೀನ್ ಕುಮಾರ್, ರಾಜ್ಯ ಟೂರಿಸಂ ಸೊಸೈಟಿಯ ಜಂಟಿ ಕಾರ್ಯದರ್ಶಿ ರವೀಂದ್ರ, ಕೆಎಸ್‍ಟಿಡಿಸಿ ಅಧಿಕಾರಿ ಉದಯ್ ಕುಮಾರ್, ಜಿಲ್ಲಾ ಹೋಂ ಸ್ಟೇ ಅಸೋಷಿಯೇಶನ್ ಅಧ್ಯಕ್ಷ ಕರುಂಬಯ್ಯ, ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಎನ್. ಪ್ರಕಾಶ್, ರಿವರ್ ರ್ಯಾಫ್ಟಿಂಗ್ ಅಸೋಷಿಯೇಶನ್ ಅಧ್ಯಕ್ಷ ಕೃಷ್ಣಪ್ಪ ಸೇರಿದಂತೆ ಜಿಲ್ಲೆಯ ವಿವಿಧ ಕಡೆಗಳಲ್ಲಿ ಪ್ರವಾಸೋದ್ಯಮ ಚಟುವಟಿಕೆಯಲ್ಲಿ ತೊಡಗಿಕೊಂಡವರು ಉಪಸ್ಥಿತರಿದ್ದರು.