ಸುಂಟಿಕೊಪ್ಪ, ಜು. 20: ನಾಲ್ವರು ಕೋಲಾರ ಮೂಲದವರು ಬೆಂಗಳೂರಿನಿಂದ ಮಡಿಕೇರಿಯತ್ತ ಪ್ರವಾಸ ಬರುತ್ತಿದ್ದ ಕಾರೊಂದು; ಅಡುಗೆ ಅನಿಲ ಸಿಲಿಂಡರ್ ಸಾಗಿಸುತ್ತಿದ್ದ ಲಾರಿಯೊಂದಕ್ಕೆ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಯುವಕರು ಸಾವಿಗೀಡಾಗಿರುವ ದುರ್ಘಟನೆ ಇಂದು ಬೆಳ್ಳಂಬೆಳಿಗ್ಗೆ ಸುಂಟಿಕೊಪ್ಪ ಬಳಿ ಸಂಭವಿಸಿದೆ.ಬೆಂಗಳೂರಿನ ಟೂರಿಸ್ಟ್ ಕೇಂದ್ರವೊಂದರ ಕಾರು ಚಾಲಕ ಕೋಲಾರ ಮೂಲದ ಕಿರಣ್ ಕುಮಾರ್ (23) ಹಾಗೂ ಬಾಗೆಪಲ್ಲಿಯ ಶ್ರವಣ ಕುಮಾರ್ (25) ಎಂಬಿಬ್ಬರು ಈ ಅವಘಡದಿಂದ ಮೃತರಾಗಿರುವ ದುರ್ದೈವಿಗಳು. ಸುಂಟಿಕೊಪ್ಪ ಸಮೀಪದ ಬಾಳೆಕಾಡು ತೋಟದ ತಿರುವಿನಲ್ಲಿ; ಪ್ರವಾಸಿಗರಿದ್ದ ಕಾರು (ಕೆಎ07-ಎ9166) ಎದುರಿನಿಂದ ಬರುತ್ತಿದ್ದ ಲಾರಿಗೆ (ಕೆಎ 19- ಎಸಿ 0946) ಡಿಕ್ಕಿ ಹೊಡೆದಿದೆ ಎಂದು ಕುಶಾಲನಗರ ಪೊಲೀಸ್ ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಅವರು ಖಚಿತಪಡಿಸಿದ್ದಾರೆ. ಪರಿಣಾಮ ಮುಂದಿನ ಆಸನದಲ್ಲಿ ಕಾರು ಚಾಲಕನ ಬಳಿ ಕುಳಿತುಕೊಂಡಿದ್ದ ಕಿರಣ್ ಕುಮಾರ್ ಹಾಗೂ ಹಿಂದಿನ ಆಸನದಲ್ಲಿ ಕುಳಿತಿದ್ದ ಶ್ರವಣಕುಮಾರ್ ಮಾರಣಾಂತಿಕ ಘಾಸಿಗೊಂಡು ಘಟನೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಮೃತ ಕಿರಣ್ ವೃತ್ತಿಯಲ್ಲಿ ಚಾಲಕನಾಗಿದ್ದು, ಶ್ರವಣ್ ಪ್ರವಾಸಿ ಕೇಂದ್ರದ ಮೇಲ್ವಿಚಾರಕನೆಂದು ಗೊತ್ತಾಗಿದೆ.ಇವರೊಂದಿಗೆ ಕಾರು ಚಾಲಿಸುತ್ತಿದ್ದ ಪುಟ್ಟೇಗೌಡ ಹಾಗೂ ರಾಜು ಎಂಬಿಬ್ಬರು ಕೂಡ ಗಾಯಗೊಂಡು; ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇವರಿಬ್ಬರಿಗೆ ಮಡಿಕೇರಿಯ ಜಿಲ್ಲಾ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಬಳಿಕ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆಗಾಗಿ ಕರೆದೊಯ್ಯಲಾಗಿದೆ.
ವಿಷಯ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿರುವ ಸುಂಟಿಕೊಪ್ಪ ಠಾಣಾಧಿಕಾರಿ ಜಯರಾಂ ಹಾಗೂ ಸಿಬ್ಬಂದಿ ಪುನೀತ್, ಮಂಜುನಾಥ್ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸಲು ಕ್ರಮ ಕೈಗೊಂಡಿದ್ದಾರೆ. ವೃತ್ತ ನಿರೀಕ್ಷಕ ಕುಮಾರ್ ಆರಾಧ್ಯ ಹೆಚ್ಚಿನ ಮಾಹಿತಿಯೊಂದಿಗೆ ಘಟನೆ ಸಂಬಂಧ ಪ್ರಕರಣ ದಾಖಲಿಸಿ ಕೊಂಡು ಮಹಜರು ನಡೆಸಿದ್ದಾರೆ.
ಬೆಳಿಗ್ಗೆ 6.15ರ ಸುಮಾರಿಗೆ ಸಂಭವಿಸಿರುವ ಅವಘಡದ ಬಗ್ಗೆ ಲಾರಿ ಚಾಲಕ ಸುರೇಶ್ ಬಿ. ಪೂಜಾರಿ ನೀಡಿರುವ ದೂರಿನ ಮೇರೆಗೆ ಮೊಕದ್ದಮೆ ದಾಖಲಿಸಿಕೊಂಡಿರುವ ಪೊಲೀಸರು, ಕಾರು ಚಾಲಕ ಕೋಲಾರದ ತಂಬಳ್ಳಿ ನಿವಾಸಿ ಪುಟ್ಟೇಗೌಡ (24) ವಿರುದ್ಧ ಕ್ರಮ ಜರುಗಿಸಿದ್ದಾರೆ.
ಆತನ ಕಾಲಿಗೂ ಪೆಟ್ಟಾಗಿದ್ದು, ಮತ್ತೋರ್ವ ಕಾರು ಪ್ರಯಾಣಿಕ ರಾಜು (22) ಗಂಭೀರ ಗಾಯಗೊಂಡಿದ್ದಾಗಿ ಪೊಲೀಸ್ ಮೂಲಗಳು ತಿಳಿಸಿವೆ. ಎರಡು ವಾಹನಗಳನ್ನು ಸುಂಟಿಕೊಪ್ಪ ಠಾಣೆಯ ವಶಕ್ಕೆ ಪಡೆಯಲಾಗಿದೆ.
ಮಡಿಕೇರಿಯ ಆಸ್ಪತ್ರೆಯಲ್ಲಿ ಮೃತ ಯುವಕರ ಶವಗಳ ಮರಣೋತ್ತರ ಪರೀಕ್ಷೆ ಬಳಿಕ ಸಂಬಂಧಿಗಳಿಗೆ ಪಾರ್ಥಿವ ಶರೀರ ಹಸ್ತಾಂತರಿಸ ಲಾಯಿತು.