ಗೋಣಿಕೊಪ್ಪ ವರದಿ, ಜು. 20 : ಮೈಸೂರು- ಗೊಣಿಕೊಪ್ಪ ಹೆದ್ದಾರಿಯ ತಿತಿಮತಿ ಸಮೀಪದ ಮಜ್ಜಿಗೆಹಳ್ಳ ಎಂಬಲ್ಲಿ ರಸ್ತೆ ಬದಿಯಲ್ಲಿ ನಿಲ್ಲಿಸಿದ್ದ ವಾಹನಗಳ ಮೇಲೆ ಮರ ಬಿದ್ದು ಮೂರು ವಾಹನಗಳು ಜಖಂ ಆಗಿವೆ. ಘಟನೆ ಸಂದರ್ಭ ವಾಹನದಲ್ಲಿ ಯಾರೂ ಇಲ್ಲದ ಕಾರಣ ಅಪಾಯ ತಪ್ಪಿದೆ. ಹೆದ್ದಾರಿ ಮದ್ಯೆ ಮರ ಬಿದ್ದ ಕಾರಣ ಸುಮಾರು 3 ಗಂಟೆಗಳ ಕಾಲ ರಸ್ತೆ ಸಂಚಾರ ಸ್ಥಗಿತಗೊಂಡಿತ್ತು. ಸಾಕಾನೆಗಳ ಸಹಕಾರದಲ್ಲಿ ಮರ ತೆರವುಗೊಳಿಸಿ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.
1 ಜೀಪ್, ಕಾರು ಹಾಗೂ ಟಾಟಾ ಏಸ್ ಗೂಡ್ಸ್ ವಾಹನ ಹಾನಿಗೊಳಗಾಗಿವೆ. ಸಾಯಂಕಾಲ ಸುಮಾರು 3.30 ಗಂಟೆಗೆ ಘಟನೆ ನಡೆದಿದೆ. ಸ್ಥಳೀಯ ಆದಿವಾಸಿ ಯೋರ್ವರ ಸಾವಿಗೆ ಬಂದಿದ್ದಾಗ ರಸ್ತೆ ಬದಿಯಲ್ಲಿ ವಾಹನ ನಿಲ್ಲಿಸಿ ತೆರಳಿದ್ದರು. ಈ ಸಂದರ್ಭ ಮರ ಮುರಿದು ಬಿದ್ದು ಹಾನಿ ಉಂಟಾಗಿದೆ. ಮತ್ತಿಗೋಡು ವನ್ಯಜೀವಿ ವಿಭಾಗದ ಅರಣ್ಯದಿಂದ ಮರ ಬಿದ್ದಿರುವದರಿಂದ ಪರಿಹಾರ ನೀಡಬೇಕು ಎಂದು ವಾಹನ ಚಾಲಕರು ಪ್ರತಿಭಟನೆ ನಡೆಸಿದರು. ಅಧಿಕಾರಿಗಳೊಂದಿಗೆ ವಾಗ್ವಾದ ನಡೆಸಿದರು. ಪೊನ್ನಂಪೇಟೆ ಠಾಣಾಧಿಕಾರಿ ಮಹೇಶ್ ಹಾಗೂ ಸಿಬ್ಬಂದಿಗಳು ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದರು.
ಸಂಜೆ 6.45 ಸುಮಾರಿಗೆ ವಾಹನಗಳು ಸಂಚರಿಸಲು ಅವಕಾಶ ನೀಡಲಾಯಿತು. ಮೈಸೂರು ಹೆದ್ದಾರಿಯಾದ ಕಾರಣ ವಾಹನಗಳು ಸಾಲು ಸಾಲಾಗಿ ನಿಂತಿದ್ದವು.
- ಸುದ್ದಿಪುತ್ರ / ಟಿ.ಎಲ್.ಎಸ್./ ಡಿ.ಎಂ.ಆರ್.