ಸೋಮವಾರಪೇಟೆ, ಜು.18: ಸೋಮವಾರಪೇಟೆ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ನೀಡಲಾಗುವ ವಾರ್ಷಿಕ ಪ್ರಶಸ್ತಿ ಪ್ರಕಟಗೊಂಡಿದ್ದು, ‘ಶಕ್ತಿ’ಗೆ ಎರಡು ಪ್ರಶಸ್ತಿ ಲಭಿಸಿದೆ.
ತಾಲೂಕು ಸಂಘದ ಮಾಜೀ ಅಧ್ಯಕ್ಷ ತೇಲಪಂಡ ಕವನ್ ಕಾರ್ಯಪ್ಪ ಅವರು ತಮ್ಮ ತಂದೆ ತಾಯಿ ತೇಲಪಂಡ ಸೋಮಣ್ಣ ಮತ್ತು ಶಾರದ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಮಾನವೀಯ ಮೌಲ್ಯವುಳ್ಳ ವರದಿಗೆ ‘ಶಕ್ತಿ’ಯ ಸೋಮವಾರಪೇಟೆ ವರದಿಗಾರ ವಿಜಯ್ ಹಾನಗಲ್ ಬರೆದಿರುವ ‘ಕುಟುಂಬದ ಸಂಕಷ್ಟವನ್ನು ಪರಿಚಯಿಸಿದ ಆ ಒಂದು ಸಾವು’ ವರದಿ ಆಯ್ಕೆಯಾಗಿದೆ.
ಕುಶಾಲನಗರದ ಪತ್ರಕರ್ತ ಎಂ.ಎನ್. ಚಂದ್ರಮೋಹನ್ ಅವರು ತಮ್ಮ ತಂದೆ ತಾಯಿ ಎಂ. ನಾರಾಯಣ ಮತ್ತು ಎಂ. ಪದ್ಮಾವತಿ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ತನಿಖಾ ವರದಿ ಪ್ರಶಸ್ತಿಗೆ ಕೂಡಿಗೆಯ ಶಕ್ತಿ ಪತ್ರಿಕೆ ವರದಿಗಾರ ಕೆ.ಕೆ. ನಾಗರಾಜ ಶೆಟ್ಟಿ ಬರೆದ ‘ಹರಿದು ಹಂಚಿ ಹೋಗುತ್ತಿರುವ ಕೃಷಿ ಕ್ಷೇತ್ರದ ಜಾಗ’ ವರದಿ ಭಾಜನವಾಗಿದೆ.
ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಹೆಚ್.ಆರ್. ಹರೀಶ್‍ಕುಮಾರ್ ಅವರು ತಮ್ಮ ತಂದೆ ಹೆಚ್.ಎಸ್. ರಾಮೇಗೌಡ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಗ್ರಾಮೀಣ ವರದಿ ಪ್ರಶಸ್ತಿಗೆ ಸುಂಟಿಕೊಪ್ಪದ ವಿಜಯಕರ್ನಾಟಕ ವರದಿಗಾರ ಬಿ.ಕೆ. ಶಶಿಕುಮಾರ್ ರೈ ಬರೆದಿರುವ ‘ಭೂ ಒಡಲು ಸೇರಿದ ಐತಿಹಾಸಿಕ ಹಾಲೇರಿ ಗ್ರಾಮ’ ವರದಿ ಆಯ್ಕೆಯಾಗಿದೆ.
ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಅವರು ತಮ್ಮ ತಂದೆ ತಾಯಿ ಬಿ.ಕೆ. ಸುಬ್ಬಯ್ಯ ಮತ್ತು ಜಯಮ್ಮ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಅರಣ್ಯ, ಪರಿಸರ-ವನ್ಯಜೀವಿ ವಿಭಾಗದ ಪ್ರಶಸ್ತಿ, ಸೋಮವಾರಪೇಟೆಯ ಪ್ರಜಾಸತ್ಯ ಪತ್ರಿಕೆಯ ವರದಿಗಾರ ಹಿರಿಕರ ರವಿ ಬರೆದಿರುವ ‘ಹೊಟ್ಟೆ ಪಾಡಿಗಾಗಿ ಆನೆ- ಮಾನವ ಸಂಘರ್ಷ ತಾರಕಕ್ಕೆ’ ವರದಿಗೆ ಲಭಿಸಿದೆ.
ಪತ್ರಕರ್ತರ ರಾಷ್ಟ್ರೀಯ ಮಂಡಳಿ ಸದಸ್ಯ ಎಸ್.ಎ. ಮುರುಳೀಧರ್ ಅವರು ತಮ್ಮ ಸಹೋದರ ಗಣೇಶ್ ಅವರ ಹೆಸರಿನಲ್ಲಿ ಸ್ಥಾಪಿಸಿರುವ ಅತ್ಯುತ್ತಮ ಕ್ರೀಡಾ ವರದಿ ಪ್ರಶಸ್ತಿಗೆ ಸುಂಟಿಕೊಪ್ಪದ ಪ್ರಜಾವಾಣಿ ವರದಿಗಾರ ಎಂ.ಎಸ್. ಸುನಿಲ್ ಬರೆದಿರುವ ‘ಓಟದ ಸ್ಪರ್ಧೆಯಲ್ಲಿ ಕಿಶೋರ್ ಮಿಂಚು’ ವರದಿ ಆಯ್ಕೆಯಾಗಿದೆ.
ತಾ. 20ರಂದು ಅಪರಾಹ್ನ 12 ಗಂಟೆಗೆ ಸೋಮವಾರಪೇಟೆಯ ಪತ್ರಿಕಾಭವನದಲ್ಲಿ ನಡೆಯಲಿರುವ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುವದು ಎಂದು ಸಂಘದ ತಾಲೂಕು ಪ್ರಧಾನ ಕಾರ್ಯದರ್ಶಿ ವಿಜಯ್ ಹಾನಗಲ್ ತಿಳಿಸಿದ್ದಾರೆ.