ಮಡಿಕೇರಿ, ಜು. 18: ಮಡಿಕೇರಿಯಲ್ಲಿ 54 ವರ್ಷಗಳ ಹಿಂದೆ ತೋಟಗಾರಿಕಾ ಬೆಳೆಗಳ ಮಾರಾಟದ ಆಶಯದೊಂದಿಗೆ ಆರಂಭ ಗೊಂಡಿರುವ ಕರ್ನಾಟಕದ 106ನೇ ಮಡಿಕೇರಿ ಹಾಪ್ಕಾಮ್ಸ್ ಘಟಕಕ್ಕೆ ಇದೀಗ ಸ್ವಂತ ಕಟ್ಟಡದ ಯೋಗ ಲಭಿಸುವಂತಾಗಿದೆ. ನಗರದ ಅಂಚೆ ಕಚೇರಿ ಎದುರಿನ ನಿವೇಶನದಲ್ಲಿ ಕಟ್ಟಡಕ್ಕೆ ವರ್ಷಗಳ ಹಿಂದೆಯೇ ಭೂಮಿ ಪೂಜೆ ನಡೆಸಲಾಗಿತ್ತು.ಕಳೆದ ವರ್ಷದ ಮಳೆಗಾಲದ ತೀವ್ರತೆ ನಡುವೆ ಕೆಲಸ ನಿಂತು ಹೋಗಿತ್ತು. ಪ್ರಸಕ್ತ ಪುತ್ತೂರು ನಿರ್ಮಿತಿ ಕೇಂದ್ರದಿಂದ ಕಾಮಗಾರಿ ಆರಂಭಗೊಂಡಿದ್ದು, ಮೊದಲ ಹಂತದಲ್ಲಿ ನೆಲ ಅಂತಸ್ತು ಸಂಕೀರ್ಣ ಆರಂಭದೊಂದಿಗೆ ಡಿಸೆಂಬರ್ ಒಳಗಾಗಿ ಈ ಕಾಮಗಾರಿ ಪೂರ್ಣ ಗೊಳಿಸಲು ತೀರ್ಮಾನಿಸಲಾಗಿದೆ.1965ರಲ್ಲಿ ಮಡಿಕೇರಿ ಹಾಪ್ಕಾಮ್ಸ್ಗೆ ಐದು ದಶಕದ ಹಿಂದೆ ಅವಕಾಶ ಲಭಿಸಿದ್ದು, ಮಾಜೀ ರಾಜ್ಯಸಭಾ ಸದಸ್ಯ ಎಫ್.ಎಂ. ಖಾನ್ ನೇತೃತ್ವದಲ್ಲಿ ಒಂದಿಷ್ಟು ಹಿರಿಯರು ಈ ಸಂಸ್ಥೆ ಪ್ರಾರಂಭಕ್ಕೆ ಕಾರಣರಾಗಿದ್ದರು. ಆ ದಿನಗಳಲ್ಲಿ ತೋಟಗಾರಿಕಾ ಇಲಾಖೆಯ ಜಿಲ್ಲಾ ಉಪ ನಿರ್ದೇಶಕರೇ ಅಧ್ಯಕ್ಷರುಗಳಾಗಿ ಕಾರ್ಯ ನಿರ್ವಹಿ¸ Àತೊಡಗಿದ್ದರು.(ಮೊದಲ ಪುಟದಿಂದ) ವರ್ಷಗಳು ಉರುಳಿದಂತೆ ತೋಟದ ಬೆಳೆಗಾರರು ಸಕ್ರೀಯ ಸದಸ್ಯರಾಗುವದರೊಂದಿಗೆ; ಮಡಿಕೇರಿ ಹಾಪ್ಕಾಮ್ಸ್ ಒಂದು ಸಾವಿರಕ್ಕೂ ಅಧಿಕ ಪ್ರತಿನಿಧಿಗಳಿಂದ ಕೂಡಿದ ಸಂಸ್ಥೆಯಾಗಿ ರೂಪುಗೊಂಡಿತ್ತು. ಈ ನಡುವೆ 2002ರಲ್ಲಿ ನಾಪೋಕ್ಲುವಿನ ಬೆಳೆಗಾರ ಬಿದ್ದಾಟಂಡ ರಮೇಶ್ ಚಂಗಪ್ಪ ಅಧ್ಯಕ್ಷರಾಗಿ ಆಯ್ಕೆ ಗೊಂಡಿದ್ದರು.
ಆ ಬಳಿಕ ಕಳೆದ ಹದಿನೇಳು ವರ್ಷಗಳಿಂದ ಸತತ ಅಧ್ಯಕ್ಷರಾಗಿ ಪುನರಾಯ್ಕೆಗೊಳ್ಳುತ್ತಾ; ಈ ಸಂಸ್ಥೆ ಇಂದು ವಾರ್ಷಿಕ ರೂ. ಒಂದು ಕೋಟಿ ವಹಿವಾಟು ಹೊಂದು ವಂತಾಗಿದೆ. ಅಲ್ಲದೆ ಮಡಿಕೇರಿ ಮಾತ್ರವಲ್ಲದೆ ಸೋಮವಾರಪೇಟೆ ಹಾಗೂ ಗೋಣಿಕೊಪ್ಪಗಳಲ್ಲಿ ತನ್ನ ಉಪ ಶಾಖೆಗಳನ್ನು ವಿಸ್ತರಿಸಿಕೊಂಡಿದೆ.
ರೂ. 6 ಕೋಟಿ ಯೋಜನೆ: ಮಡಿಕೇರಿ ಹಾಪ್ ಕಾಮ್ಸ್ ಆಡಳಿತ ಮಂಡಳಿಯ ಆಶಯದಂತೆ; ಅಂಚೆ ಕಚೇರಿ ಬಳಿ 36 ಸೆಂಟ್ ನಿವೇಶನದಲ್ಲಿ ಆಧುನಿಕ ಹಾಪ್ ಕಾಮ್ಸ್ ಸಂಕೀರ್ಣ ರೂಪಿಸಲು ಉದ್ದೇಶಿಸಿರುವದಾಗಿ ಹಾಲೀ ಅಧ್ಯಕ್ಷ ರಮೇಶ್ ಚಂಗಪ್ಪ ‘ಶಕ್ತಿ’ಯೊಂದಿಗೆ ತಿಳಿಸಿದ್ದಾರೆ. ಆ ದಿಸೆಯಲ್ಲಿ ಕರ್ನಾಟಕ ರಾಜ್ಯ ಮಾರ್ಕೆಟಿಂಗ್ ಫೆಡರೇಷನ್ನಿಂದ ಮೊದಲ ಹಂತದಲ್ಲಿ ರೂ. 1.45 ಕೋಟಿಯನ್ನು ಬಿಡುಗಡೆಗೊಳಿಸಿದ್ದು, ಕೆಲಸ ಆರಂಭಗೊಂಡಿದೆ ಎಂದು ವಿವರಿಸಿದ್ದಾರೆ.
ಅಲ್ಲದೆ ಮುಂದಿನ ಜೂನ್ ವೇಳೆಗೆ ಮೊದಲ ಅಂತಸ್ತು ಕಟ್ಟಡ ಪೂರ್ಣಗೊಳಿಸುವ ಆಶಯವಿದ್ದು, ಈ ಸಂಕೀರ್ಣದಲ್ಲಿ ತೋಟಗಾರಿಕಾ ಉತ್ಪನ್ನಗಳ ಹೈಟೆಕ್ ಮಾರಾಟ ಮಳಿಗೆ ಸಹಿತ ಇತರ ತರಕಾರಿ, ಹಣ್ಣು, ಜೇನು ಮುಂತಾದ ಮಾರಾಟ ಮಳಿಗೆಗಳು ಆರಂಭಗೊಳ್ಳಲಿದೆ ಎಂದು ಮಾಹಿತಿ ನೀಡಿದ್ದಾರೆ.
ಮಾತ್ರವಲ್ಲದೆ ಇಲ್ಲಿ ಖರೀದಿಸುವ ಗ್ರಾಹಕರಿಗೆ ಒಂದೇ ಸೂರಿನಡಿ ಎಲ್ಲವೂ ಲಭಿಸುವ ದಿಸೆಯಲ್ಲಿ ಕಾರ್ಯನಿರ್ವಹಣೆಯ ಉದ್ದೇಶ ಹೊಂದಿರುವದಾಗಿ ತಿಳಿಸಿದ ರಮೇಶ್ ಚಂಗಪ್ಪ, ಯಾವದೇ ಕೃಷಿಕ ಸದಸ್ಯತ್ವ ಪಡೆಯಲು ಮುಕ್ತ ಅವಕಾಶ ಇರುವದಾಗಿ ಮಾರ್ನುಡಿದರು.
ಮಣ್ಣು ಕುಸಿತ-ಕ್ರಮ: ಪ್ರಸಕ್ತ ಹಾಪ್ ಕಾಮ್ಸ್ ನಿವೇಶನದ ಒಂದು ಬದಿಯಲ್ಲಿ ಖಾಸಗಿ ವ್ಯಕ್ತಿಯೋರ್ವ ಬರೆಯನ್ನು ಜೆಸಿಬಿಯಿಂದ ಅಗೆಸಿರುವ ಪರಿಣಾಮ ತಮ್ಮ ಜಾಗಕ್ಕೆ ಹಾನಿಯಾಗಿದ್ದು, ಆತ ತಡೆಗೋಡೆ ನಿರ್ಮಿಸುವಂತೆ ಈಗಾಗಲೇ ಜಿಲ್ಲಾಧಿಕಾರಿ ಕಟ್ಟುನಿಟ್ಟಿನ ಆದೇಶ ನೀಡಿರುವದಾಗಿ ಬಹಿರಂಗ ಗೊಳಿಸಿದರು. ಈ ಬಗ್ಗೆ ಸಂಸ್ಥೆಯಿಂದ ಜಿಲ್ಲಾಧಿಕಾರಿ, ನಗರಸಭೆ ಹಾಗೂ ‘ಮೂಡಾ’ಕ್ಕೆ ದೂರು ಸಲ್ಲಿಸಿರುವದಾಗಿ ಸ್ಪಷ್ಟಪಡಿಸಿದರು.
ಹಾಗಾಗಿ ಹಾನಿಗೊಂಡಿರುವ ನಿವೇಶನದ ಸಂಬಂಧಿಸಿದ ಜಾಗ ಹೊರತು ಕೇವಲ ಉಳಿದ ನಿವೇಶನದಲ್ಲಿ ಈಗ ಅನಿವಾರ್ಯವಾಗಿ ಕಾಮಗಾರಿ ಕೈಗೊಳ್ಳಲಾಗಿದೆ ಎಂದು ರಮೇಶ್ ಚಂಗಪ್ಪ ಮಾಹಿತಿ ನೀಡಿದರು.
ಪ್ರಸಕ್ತ ತೋಟಗಾರಿಕಾ ಇಲಾಖೆಯ ಕಟ್ಟಡದಲ್ಲಿ ಹಾಪ್ ಕಾಮ್ಸ್ ಕಾರ್ಯನಿರ್ವಹಿಸುತ್ತಿದ್ದು, ಇದೀಗ ಸ್ವಂತಃ ಕಟ್ಟಡ ಕೆಲಸ ಪೂರ್ಣಗೊಂಡ ಬಳಿಕ ರೈತರ ಬೆಳೆಗಳಿಗೆ ಅಗತ್ಯ ಮಾರುಕಟ್ಟೆಯೊಂದಿಗೆ ನ್ಯಾಯಬೆಲೆ ಕಲ್ಪಿಸಲು ಪ್ರಯತ್ನಿಸುವ ಆಶಯ ಹೊಂದಿರುವದಾಗಿಯೂ ಅವರು ತಿಳಿಸಿದ್ದಾರೆ.