ಸೋಮವಾರಪೇಟೆ, ಜು. 18: ತಾಲೂಕು ಪಂಚಾಯಿತಿಯ 2019-20ನೇ ಸಾಲಿನ ಕ್ರಿಯಾ ಯೋಜನಾ ಸಭೆ ಅಧ್ಯಕ್ಷೆ ಪುಷ್ಪಾ ರಾಜೇಶ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಾಭಾಂಗಣದಲ್ಲಿ ನಡೆಯಿತು.

ಕೃಷಿ ಇಲಾಖೆಯ ವತಿಯಿಂದ ರೂ. 5.25 ವಾರ್ಷಿಕ ಅನುದಾನ ವಿದ್ದು, ತಾಲೂಕಿನ ಶಾಂತಳ್ಳಿ, ಕೊಡ್ಲಿಪೇಟೆ ಹಾಗೂ ಕುಶಾಲನಗರ ಹೋಬಳಿಗಳಲ್ಲಿ ನಡೆಯುವ ಜಾತ್ರಾ ಕಾರ್ಯಕ್ರಮದಲ್ಲಿ ಕೃಷಿ ವಸ್ತು ಪ್ರದರ್ಶನ ಸೇರಿದಂತೆ ರೈತರಿಗೆ ಸಹಾಯಧನ ಮತ್ತು ಸಾಮಗ್ರಿಗಳನ್ನು ಖರೀದಿಸಲು ರೂ. 3.25 ಲಕ್ಷ ಬಳಸಿಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದರು.

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವತಿಯಿಂದ ಹಲವು ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಮತ್ತು ಕಾಮಗಾರಿಗಳನ್ನು ನಡೆಸಲು ಒಟ್ಟು ರೂ. 73.70 ಕೋಟಿ ಆರ್ಥಿಕ ಗುರಿ ನೀಡಲಾಗಿದೆ ಎಂದು ವಿಸ್ತರಣಾಧಿಕಾರಿ ಶ್ರೀಕಾಂತ್ ಹೇಳಿದರು.

ತೋಟಗಾರಿಕಾ ಇಲಾಖೆಯ ವತಿಯಿಂದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸಲು ಮತ್ತು ರೈತರಿಗೆ ತೋಟಗಾರಿಕಾ ಬೆಳೆಗಳ ಮಾಹಿತಿ, ತರಬೇತಿ, ಹಣ್ಣು ಮತ್ತು ತರಕಾರಿಗಳ ಸಂರಕ್ಷಣೆ ಬಗ್ಗೆ ತರಬೇತಿ ಸೇರಿದಂತೆ ಇತರ ಕಾರ್ಯಕ್ರಮಗಳಿಗೆ ರೂ. 8.50 ಕೋಟಿ ಕ್ರಿಯಾ ಯೋಜನೆ ತಯಾರಿಸಿರುವದಾಗಿ ಮುತ್ತಪ್ಪ ಮಾಹಿತಿ ನೀಡಿದರು. ಸಮಾಜ ಕಲ್ಯಾಣ ಇಲಾಖೆಯಲ್ಲಿ ರೂ. 73 ಲಕ್ಷದ ಅನುದಾನದಲ್ಲಿ ಸಾಮಗ್ರಿಗಳನ್ನು ಖರೀದಿಸಲು ತೀರ್ಮಾನಿಸಲಾಗಿದೆ. ವಿದ್ಯಾರ್ಥಿ ನಿಲಯ ನಿರ್ವಹಣೆಗೆ ಬಿಡುಗಡೆಯಾಗುವ ಅನುದಾನದಲ್ಲಿ ಉಳಿಕೆಯಾದರೆ, ವಿದ್ಯಾರ್ಥಿ ನಿಲಯ ಗಳಿಗೆ ಅಗ್ಯವಿರುವ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಕ್ರಮ ವಹಿಸಲಾಗುವದು ಎಂದು ಅಧಿಕಾರಿ ಶೇಖರ್ ಸಭೆಗೆ ತಿಳಿಸಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ನಾಗ ರಾಜಯ್ಯ ಮಾತನಾಡಿ, ಈಗಾಗಲೇ ತಾಲೂಕಿನ 42 ಶಾಲೆಗಳ ಕಟ್ಟಡ ದುರಸ್ತಿಗೆ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆಗೆ ಮನವಿ ಸಲ್ಲಿಸಲಾಗಿದೆ. ತಮ್ಮ ವ್ಯಾಪ್ತಿಯಲ್ಲಿ ದುರಸ್ತಿಯಾಗ ಬೇಕಾದ ಶಾಲಾ ಕಟ್ಟಡದ ಮಾಹಿತಿ ಯನ್ನು ತಾಲೂಕು ಪಂಚಾಯಿತಿ ಸದಸ್ಯರು ನೀಡುವಂತೆ ಮನವಿ ಮಾಡಿ, ರೂ. 49.65 ಕೋಟಿ ಯೋಜನೆ ರೂಪಿಸಲಾಗಿದೆ ಎಂದರು.

ಸರ್ಕಾರಿ ಹೋಮಿಯೋಪತಿ ಮತ್ತು ಆಯುರ್ವೇದ ಆಸ್ಪತ್ರೆಯಲ್ಲಿ ಯೋಗ ಮತ್ತು ನ್ಯಾಚುರೋಪತಿ ವಿಭಾಗಕ್ಕೆ ಹೆಚ್ಚುವರಿ ಚಿಕಿತ್ಸಾ ಕೊಠಡಿಯ ತಳಪಾಯ ನಿರ್ಮಾಣಕ್ಕೆ ರೂ. 6.90 ಲಕ್ಷ ಅನುದಾನ ಬಿಡುಗಡೆಯಾಗಿರುವದಾಗಿ ಇಲಾಖಾಧಿಕಾರಿ ತಿಳಿಸಿದರು.

ಪಶುಪಾಲನ ಮತ್ತು ಪಶು ವೈದ್ಯಕೀಯ ಸೇವೆಗಳ ಇಲಾಖಾ ವತಿಯಿಂದ ತಾಲೂಕಿನ 11 ಗ್ರಾಮಗಳಲ್ಲಿ ಉಚಿತ ಪಶು ಆರೋಗ್ಯ ತಪಾಸಣಾ ಶಿಬಿರ, ಔಷಧಿ ಖರೀದಿ, ಎಲ್ಲ ಪಶು ವೈದ್ಯಕೀಯ ಕೇಂದ್ರಗಳಲ್ಲಿ ಘನ ಮತ್ತು ದ್ರವ ತ್ಯಾಜ್ಯವಸ್ತು ವಿಲೇವಾರಿಗಾಗಿ ಅವಶ್ಯ ರಾಸಾಯನಿಕ ವಸ್ತುಗಳನ್ನು ಖರೀದಿಸಲು ರೂ. 282.42 ಲಕ್ಷ ನಿಗದಿಗೊಳಿಸಿರುವದಾಗಿ ವೈದ್ಯಾಧಿಕಾರಿ ಬಾದಾಮಿ ತಿಳಿಸಿದರು.

ವೇದಿಕೆಯಲ್ಲಿ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಎಂ.ಬಿ. ಅಭಿಮನ್ಯುಕುಮಾರ್, ಸ್ಥಾಯಿ ಸಮಿತಿ ಅಧ್ಯಕ್ಷೆ ಹೆಚ್.ಎನ್. ತಂಗಮ್ಮ ಹಾಗೂ ಕಾರ್ಯನಿರ್ವಹಣಾಧಿಕಾರಿ ಸುನಿಲ್ ಕುಮಾರ್ ಹಾಗೂ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.