ಗೋಣಿಕೊಪ್ಪ ವರದಿ, ಜು. 18: ಗಿರಿಜನರಿಗಾಗಿ ಆಯೋಜಿಸಿದ್ದ ಆಧಾರ್ ನೋಂದಣಿ ಅಭಿಯಾನಕ್ಕೆ ನೋಂದಣಿ ತಂಡವೇ ಬಾರದ ಕಾರಣ ಕಾದು ಕಾದು ಸುಸ್ತಾದ ನಿಟ್ಟೂರು ಭಾಗದ ಗಿರಿಜನರು ನಿರಾಸೆಯಿಂದ ಮನೆಗೆ ಹಿಂತಿರುಗಿದರು.

ಗುರುವಾರ ಅಲ್ಲಿನ ಆಶ್ರಮ ಶಾಲೆಯಲ್ಲಿ ಜಿಲ್ಲಾಡಳಿತದಿಂದ ಹಾಡಿ ನಿವಾಸಿಗಳಿಗೆ ಆಯೋಜಿಸಿದ್ದ ಆಧಾರ್ ನೋಂದಣಿ ಅಭಿಯಾನದಲ್ಲಿ ಬೆಳಗ್ಗೆಯಿಂದಲೇ ಹಾಡಿ ಜನರು ಪಾಲ್ಗೊಂಡಿದ್ದರು. ಮದ್ಯಾಹ್ನದವರೆಗೂ ಕಾದು ನಂತರ ಮನೆಗೆ ತೆರಳಿದರು.

ನಿಟ್ಟೂರು, ತಟ್ಟೆಕೆರೆ, ದಾಳಿಂಬೆ ತೋಟ, ಬೆಂಡೆಕುತ್ತಿ, ಕೊಲ್ಲಿಹಾಡಿ ಭಾಗದ ನೂರಾರು ಗಿರಿಜನರು ಆಧಾರ್ ನೋಂದಣಿಗೆ ಆಗಮಿಸಿದ್ದರು.

ಈ ಬಗ್ಗೆ ಮಾಧ್ಯಮದೊಂದಿಗೆ ಪ್ರತಿಕ್ರಿಯಿಸಿರುವ ತಾ.ಪಂ. ಸದಸ್ಯ ಪ್ರಕಾಶ್, ಇಂತಹ ಯೋಜನೆಗಳು ಯಶಸ್ವಿಯಾಗಲು ಮುಂಜಾಗ್ರತೆ ಬೇಕು. ಪ್ರಚಾರ ಮಾಡಿ ಅಭಿಯಾನಕ್ಕೆ ಅಧಿಕಾರಿಗಳೇ ಬಾರದಿದ್ದರೆ ಅಭಿಯಾನದ ಉದ್ದೇಶ ಈಡೇರು ವದಿಲ್ಲ. ಬೆಳಗ್ಗೆಯೇ ಮಾಹಿತಿ ನೀಡಿದ್ದರೆ, ಕೂಲಿ ಕೆಲಸ ಬಿಟ್ಟು ಬಂದಿದ್ದ ಆದಿವಾಸಿ ಕಾರ್ಮಿಕರು ಕೆಲಸಕ್ಕೆ ತೆರಳುತ್ತಿದ್ದರು. ಇದರಿಂದ ಗಿರಿಜನರಿಗೆ ಪ್ರಯೋಜನವಾಗಲಿಲ್ಲ ಎಂದು ನೋವು ಹಂಚಿಕೊಂಡರು.

ಈ ಬಗ್ಗೆ ‘ಶಕ್ತಿ’ ಜಿಲ್ಲಾಧಿಕಾರಿಗಳ ಗಮನ ಸೆಳೆದಾಗ ಪರಿಶೀಲಿಸುವದಾಗಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಭರವಸೆಯಿತ್ತರು.

-ಸುದ್ದಿಪುತ್ರ