ಕುಶಾಲನಗರ, ಜು. 18: ಕುಶಾಲನಗರ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ಅಕ್ರಮವಾಗಿ ಮರ ಸಾಗಾಟ ಆಗುತ್ತಿರುವ ಪ್ರಕರಣಗಳಿಗೆ ಶಾಶ್ವತ ಕಡಿವಾಣ ಹಾಕಲಾಗುವದು ಎಂದು ಮಡಿಕೇರಿ ವಿಭಾಗ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರಭಾಕರನ್ ತಿಳಿಸಿದ್ದಾರೆ.ಕುಶಾಲನಗರ, ಸುಂಟಿಕೊಪ್ಪ ವ್ಯಾಪ್ತಿಯಿಂದ ಕೆಲವು ದುಷ್ಕರ್ಮಿಗಳು ಬೀಟೆ ಮತ್ತಿತರ ಮರಗಳನ್ನು ಕಡಿದು ಕಾರುಗಳಲ್ಲಿ ತುಂಬಿಸಿ ಸಾಗಿಸುತ್ತಿರುವ ಪ್ರಕರಣಗಳ ಬಗ್ಗೆ ಶಕ್ತಿಯೊಂದಿಗೆ ಪ್ರತಿಕ್ರಿಯಿಸಿದ ಅವರು, ಈ ಬಗ್ಗೆ ಜಿಲ್ಲೆಯ ಗಡಿ ಭಾಗಗಳಲ್ಲಿ ಕಟ್ಟೆಚ್ಚರ ವಹಿಸಲು ಅಧಿಕಾರಿ, ಸಿಬ್ಬಂದಿಗಳಿಗೆ ಸೂಚಿಸಲಾಗಿದೆ. ತಾನು ಕೂಡ ದಿನದ 24 ಗಂಟೆಗಳ ಕಾಲ ಗಮನಹರಿ ಸುತ್ತಿದ್ದು, ಮರಗಳನ್ನು ತುಂಬಿದ ವಾಹನಗಳ ಬಗ್ಗೆ ಇಲಾಖೆ ಮೂಲಕ ನಿಗಾವಹಿಸಲಾಗುತ್ತಿದೆ ಎಂದಿದ್ದಾರೆ.ಈಗಾಗಲೇ ಗಡಿಗಳ ಅರಣ್ಯ ತಪಾಸಣಾ ಕೇಂದ್ರಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳನ್ನು ಹೆಚ್ಚಿಸುವದರೊಂದಿಗೆ ಯಾವದೇ ರೀತಿಯ (ಮೊದಲ ಪುಟದಿಂದ) ಪ್ರಕರಣಗಳು ಮರುಕಳಿಸ ದಂತೆ ಎಚ್ಚರ ವಹಿಸಲಾಗುತ್ತಿದೆ. ಕಳೆದ ಕೆಲವು ದಿನಗಳಲ್ಲಿ ಅಕ್ರಮ ಸಾಗಾಟ ಪ್ರಕರಣಗಳನ್ನು ಪತ್ತೆಹಚ್ಚುವ ನಿಟ್ಟಿನಲ್ಲಿ ವಿಶೇಷ ಕಾರ್ಯಾಚರಣೆ ತಂಡದ ಮೂಲಕ ಮಾಲು ಸಮೇತ ವಾಹನ ಗಳನ್ನು ಮತ್ತು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ ಎಂದಿದ್ದಾರೆ. ಅಕ್ರಮವಾಗಿ ಮರ ಸಾಗಿಸುತ್ತಿರುವ ಯಾವದೇ ರೀತಿಯ ಪ್ರಕರಣಗಳು ತಿಳಿದು ಬಂದಲ್ಲಿ ತಕ್ಷಣ ಸಾರ್ವಜನಿಕರು ಅರಣ್ಯ ಇಲಾಖೆಗೆ ಮಾಹಿತಿ ನೀಡಿ ಸಹಕರಿಸುವಂತೆ ಅವರು ಕೋರಿದ್ದಾರೆ.