ಗೋಣಿಕೊಪ್ಪ ವರದಿ, ಜು. 17: ಬಾಳೆಲೆ ವ್ಯಾಪ್ತಿಯಲ್ಲಿ ಆದಾಯ ಪ್ರಮಾಣಪತ್ರ ಪಡೆಯುವವರಿಗೆ ಏಕ ರೀತಿಯ ಆದಾಯ ದಾಖಲಾಗಿರು ವದರಿಂದ ಸ್ಥಳೀಯರು ತೊಂದರೆ ಅನುಭವಿಸುತ್ತಿದ್ದಾರೆ. ಈ ಬಗ್ಗೆ ಸರ್ಕಾರ ಕೂಡಲೇ ಕ್ರಮ ಕೈಗೊಳ್ಳಬೇಕು ಎಂದು ಬಾಳೆಲೆ ಗ್ರಾಮಸ್ಥರು ಒತ್ತಾಯಿಸಿದರು.
ಬಾಳೆಲೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಕಾಂಡೇರ ಕುಸುಮ ಚಂದ್ರಶೇಖರ್ ಅಧ್ಯಕ್ಷತೆಯಲ್ಲಿ ಪಂಚಾಯಿತಿ ಸಭಾಂಗಣದಲ್ಲಿ ಆಯೋಜಿಸಿದ್ದ ಗ್ರಾಮ ಸಭೆಯಲ್ಲಿ ಗ್ರಾಮಸ್ಥರು ಒತ್ತಾಯಿಸಿ, ಆದಾಯ ಕಡಿಮೆ, ಹೆಚ್ಚು ಇರುವರಿಗೂ ಒಂದೇ ರೀತಿಯ ಆದಾಯವನ್ನು ಆದಾಯ ಪ್ರಮಾಣಪತ್ರದಲ್ಲಿ ನಮೂದಿಸಲಾಗಿದೆ. ಇದರಿಂದ ಸರ್ಕಾರದ ಸವಲತ್ತು ಪಡೆದುಕೊಳ್ಳಲು ಆಗುತ್ತಿಲ್ಲ. ವಿಶೇಷ ಚೇತನರಿಗೂ ಕೂಡ ತೊಂದರೆ ಯಾಗುತ್ತಿದೆ ಎಂದು ಗ್ರಾಮಸ್ಥರು ಸಮಸ್ಯೆ ಹೇಳಿಕೊಂಡರು.
7 ಎಕರೆ ಜಾಗವಿರುವವರಿಗೂ ಕೂಡ ರೂ. 1.20 ಲಕ್ಷ ಆದಾಯ ಪ್ರಮಾಣಪತ್ರ ನೀಡಲು ಅವಕಾಶವಿದೆ. ಆದರೆ, ಇದಕ್ಕಿಂತ ಕಡಿಮೆ ಜಾಗವಿರುವವರಿಗೂ ಹಾಗೂ ಜಾಗ ಇಲ್ಲದವರಿಗೂ ಒಂದೇ ರೀತಿಯ ಆದಾಯ ದಾಖಲಿಸಿದೆ. ಇದರಿಂದ ಬಿಪಿಎಲ್ ಪಡಿತರ ಚೀಟಿಯಿಂದ ವಂಚಿತರಾಗುತ್ತಿದ್ದಾರೆ. ತಿದ್ದುಪಡಿ ಮೂಲಕ ಸರಿಪಡಿಸುವಂತೆ ಆಗ್ರಹಿಸಿದರು. ಉಪ ವಿಭಾಗಾಧಿಕಾರಿ ಕಚೇರಿ ಮೂಲಕ ಇದನ್ನು ಸರಿಪಡಿಸಲು ಕ್ರಮ ಕೈಗೊಳ್ಳುವದಾಗಿ ನೋಡೆಲ್ ಅಧಿಕಾರಿ ಲಕ್ಷ್ಮಿಕಾಂತ್ ಹೇಳಿದರು.
ವ್ಯಾಪ್ತಿಯಲ್ಲಿ ನಿರಂತರ ವಿದ್ಯುತ್ ಸಮಸ್ಯೆ ಇದೆ. ಸೆಸ್ಕ್ ಸಿಬ್ಬಂದಿ ಉತ್ತಮ ಸೇವೆ ನೀಡುತ್ತಿಲ್ಲ ಎಂಬ ಆರೋಪ ಕೇಳಿಬಂತು. ಅರಣ್ಯ ಇಲಾಖೆ ಕಾಡಾನೆಗಳನ್ನು ನಿಯಂತ್ರಿಸಲು ವಿಫಲವಾಗಿದೆ. ದೇವನೂರು ಭಾಗಗಳಲ್ಲಿ ನಿರಂತರವಾಗಿ ಬರುತ್ತಿರುವ ಆನೆಗಳನ್ನು ನಿಯಂತ್ರಿಸಲು ಆಗ್ರಹಿಸಲಾಯಿತು. ರಸ್ತೆ ಬದಿಗಳಲ್ಲಿ ಅಪಾಯದ ಸ್ಥಿತಿಯಲ್ಲಿರುವ ಮರಗಳನ್ನು ತೆರವುಗೊಳಿಸುವಂತೆ ಸಭೆ ಒತ್ತಾಯಿಸಿತು. ಏಸು ಕ್ರಿಸ್ತನ ಬಗ್ಗೆ ಕೊಡವ ಭಾಷೆಯಲ್ಲಿ ಬರೆದಿರುವ ಪುಸ್ತಕವನ್ನು ಶಾಲೆಗಳಿಗೆ ಅಂಚೆ ಮೂಲಕ ಕಳುಹಿಸುತ್ತಿರುವ ವ್ಯವಸ್ಥೆಯನ್ನು ಪರಿಶೀಲಿಸುವಂತೆ ಸ್ಥಳೀಯರು ಒತ್ತಾಯಿಸಿದರು. ಧಾರ್ಮಿಕ ವಿಚಾರದಲ್ಲಿ ವಿದ್ಯಾರ್ಥಿ ಗಳಲ್ಲಿ ಈ ರೀತಿಯ ಗೊಂದಲ ಮೂಡಿಸುವದು ಸರಿಯಲ್ಲ. ಯಾರು ಕಳುಹಿಸುತ್ತಿದ್ದಾರೆ ಎಂಬ ಬಗ್ಗೆ ಮಾಹಿತಿ ಇಲ್ಲ. ಈ ಬಗ್ಗೆ ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಲಾಯಿತು. ಈ ಸಂದರ್ಭ ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ಕೊಕ್ಕೇಂಗಡ ರಂಜನ್, ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು, ತಾ.ಪಂ. ಸದಸ್ಯೆ ಸುನಿತಾ, ಪಿ.ಡಿ.ಓ. ಶ್ರೀನಿವಾಸ್ ಉಪಸ್ಥಿತರಿದ್ದರು.