ಗೋಣಿಕೊಪ್ಪಲು, ಜು. 17: ಗೋಣಿಕೊಪ್ಪಲುವಿನ ಬಸ್ ನಿಲ್ದಾಣದ ಸಮೀಪ ಹಾಗೂ ಪ್ರದೇಶದ ಮಾರ್ಕೆಟ್ ಬಳಿಯಲ್ಲಿ ಕಸ ಸಮಸ್ಯೆಯ ಬಗ್ಗೆ ಖುದ್ದು ಕೊಡಗು ಜಿಲ್ಲಾ ಪಂಚಾಯಿತಿಯ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಲಕ್ಷ್ಮಿ ಪ್ರಿಯ ಪಂಚಾಯಿತಿಗೆ ಆಗಮಿಸಿ ಅಧಿಕಾರಿ ಹಾಗೂ ಪಂಚಾಯಿತಿ ಸದಸ್ಯರಿಂದ ಮಾಹಿತಿ ಪಡೆದರು. ಕಸದ ರಾಶಿಯಿಂದ ಜನತೆ ಅನುಭವಿಸುತ್ತಿರುವ ದಿನ ನಿತ್ಯದ ಸಮಸ್ಯೆಯ ಬಗ್ಗೆ ‘ಶಕ್ತಿ’ ಸಮಗ್ರ ವರದಿ ಪ್ರಕಟಿಸಿತ್ತು. ವರದಿ ಹಿನ್ನಲೆಯಲ್ಲಿ ಸಿ.ಇ.ಓ. ಲಕ್ಷ್ಮಿ ಪ್ರಿಯ ಭೇಟಿ ನೀಡಿದ್ದರು.

ಕಸ ಸಮಸ್ಯೆಯ ಬಗ್ಗೆ ಜಿಲ್ಲಾ ಪಂಚಾಯಿತಿಯ ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಸಿ.ಕೆ. ಬೋಪಣ್ಣ ಪರಿಹಾರ ಮಾರ್ಗೋ ಪಾಯದ ಬಗ್ಗೆ ಅಧಿಕಾರಿಗಳ ಗಮನ ಸೆಳೆದರು. ಸದ್ಯದ ಮಟ್ಟಿಗೆ ಮೀನು ಮಾರುಕಟ್ಟೆ ಮುಂಭಾಗವಿರುವ ಪಂಚಾಯ್ತಿಯ ಖಾಲಿ ಜಾಗದಲ್ಲಿ 20 ಅಡಿ ಜಾಗವನ್ನು ಕಸವನ್ನು ಬೇರ್ಪಡಿಸಲು ವ್ಯವಸ್ಥೆ ಮಾಡಬೇಕು. ಹಸಿ ಕಸವನ್ನು ಹಳ್ಳಿಗಟ್ಟುವಿನಲ್ಲಿರುವ ಜಾಗದಲ್ಲಿ ವೈಜ್ಞಾನಿಕ ರೀತಿಯಲ್ಲಿ ವಿಲೇವಾರಿ ಮಾಡುವಂತೆ ಸಲಹೆ ನೀಡಿದರು. ಇದಕ್ಕೆ ಪಂಚಾಯಿತಿಯ ಮೂರನೇ ವಾರ್ಡಿನ ಸದಸ್ಯರಾದ ಎಂ. ಮಂಜುಳ, ಸುರೇಶ್ ರೈ, ಒಪ್ಪಿಗೆ ಸೂಚಿಸಿದರು.

ಸಭೆಗೆ ಪೌರಕಾರ್ಮಿಕರನ್ನು ಬರಮಾಡಿಕೊಂಡ ಸಿಇಒ ಲಕ್ಷ್ಮಿಪ್ರಿಯ ಪೌರಕಾರ್ಮಿಕರ ಸಮಸ್ಯೆಗಳನ್ನು ಆಲಿಸಿದರು. ಈ ಸಂದರ್ಭ ಪೌರ ಕಾರ್ಮಿಕರು ತಮ್ಮ ಸಮಸ್ಯೆಗಳಾದ ಮನೆ,ಕುಡಿಯುವ ನೀರು, ವಿದ್ಯುತ್‍ಚ್ಛಕ್ತಿ, ನೈರ್ಮಲ್ಯದ ಬಗ್ಗೆ ವಿವರಿಸಿದರು. ಪೌರ ಕಾರ್ಮೀಕರ ಸಮಸ್ಯೆಗೆ ಪರಿಹಾರ ಕಲ್ಪಿಸುವಂತೆ ಅಧಿಕಾರಿಗೆ ಸೂಚನೆ ನೀಡಿದರು.

ವಿದ್ಯುತ್ ಬಿಲ್ಲು ಅಧಿಕವಾಗಿದ್ದು ಚೆಸ್ಕಾಂ ಅಧಿಕಾರಿಗಳು ಪಂಚಾಯಿತಿಯೊಂದಿಗೆ ಸಹಕಾರ ನೀಡುತ್ತಿಲ್ಲ ತಮಗೆ ಇಷ್ಟ ಬಂದಂತೆ ಬಿಲ್ಲನ್ನು ನೀಡುತ್ತಿದ್ದಾರೆ. ಈ ಬಗ್ಗೆ ಅಧಿಕಾರಿಗಳನ್ನು ಸಭೆಗೆ ಕರೆಯಿಸಿ ಸ್ಪಷ್ಟ ನಿರ್ದೇಶನ ನೀಡುವಂತೆ ಸದಸ್ಯರಾದ ಮಂಜುಳ,ದ್ಯಾನ್ ಸುಬ್ಬಯ್ಯ ಸಿಇಒ ಗಮನ ಸೆಳೆದರು. ಕೂಡಲೇ ಚೆಸ್ಕಾಂ ಅಧಿಕಾರಿಗಳನ್ನು ಬರಮಾಡಿಕೊಂಡ ಸಿಇಒ ವಿದ್ಯುತ್ ಬಿಲ್ಲಿನ ಬಗ್ಗೆ ಸರಿಯಾದ ಕ್ರಮ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.

ಪಂಚಾಯಿತಿ ಸದಸ್ಯರಾದ ಬಿ.ಎನ್. ಪ್ರಕಾಶ್, ದ್ಯಾನ್ ಸುಬ್ಬಯ್ಯ, ಕೆ.ಪಿ. ಬೋಪಣ್ಣ, ಕುಲ್ಲಚಂಡ ಗಣಪತಿ, ಮಂಜುಳ, ಕಸ ಸಮಸ್ಯೆಯ ಪರಿಹಾರಕ್ಕೆ ಮಾರ್ಗೋಪಾಯ ನೀಡುವಂತೆ ಸಿಇಒಗೆ ಮನವಿ ಮಾಡಿದರು. ಹಳ್ಳಿಗಟ್ಟುವಿನಲ್ಲಿ ಹಸಿ ಕಸ ವಿಲೇವಾರಿ ಮಾಡಲು ತೊಂದರೆ ಎದುರಾದಾಗ ಪೊಲೀಸರ ಸಹಕಾರ ಪಡೆದು ಕಸ ವಿಲೇವಾರಿ ಮಾಡಬೇಕು ಎಂದು ಸೂಚನೆ ನೀಡಿದರು. ಸಭೆಯಲ್ಲಿ ಕೊಡಗು ಜಿ.ಪಂ. ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಗ್ರಾ.ಪಂ. ಅಧ್ಯಕ್ಷೆ ಸೆಲ್ವಿ, ತಾ.ಪಂ. ಅಧ್ಯಕ್ಷೆ ಸ್ಮಿತಾ ಪ್ರಕಾಶ್, ಜಿ.ಪಂ. ಸದಸ್ಯೆ ಭವ್ಯ, ತಾಲೂಕು ಕಾರ್ಯನಿರ್ವಾ ಹಣಾಧಿಕಾರಿಗಳು, ಪಂಚಾಯಿತಿ ಸದಸ್ಯರಾದ ರಾಜಶೇಖರ್, ರತಿ ಅಚ್ಚಪ್ಪ, ಕಾರ್ಯದರ್ಶಿ ಪ್ರಕಾಶ್ ಪಂಚಾಯಿತಿ ಸಿಬ್ಬಂದಿ ಸೇರಿದಂತೆ ಇನ್ನಿತರರು ಹಾಜರಿದ್ದರು.