ಮಡಿಕೇರಿ, ಜು. 17: ಕೊಡಗು ಜಿಲ್ಲೆಯಲ್ಲಿ ಪೊಲೀಸ್ ವರಿಷ್ಠಾಧಿಕಾರಿ ಯಾಗಿ ಹೊಣೆಗಾರಿಕೆ ವಹಿಸಿಕೊಂಡು ತಾ. 18ಕ್ಕೆ (ಇಂದಿಗೆ) ಒಂದು ವರ್ಷ ಪೂರೈಸುತ್ತಿರುವ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನ್ ಡಿ.ಪಿ. ಅವರನ್ನು ‘ಶಕ್ತಿ’ ಸಂದರ್ಶಿಸಿದಾಗ, ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳು ಮತ್ತು ಕೆಳ ಹಂತದ ಉದ್ಯೋಗಿಗಳ ಸಹಕಾರ, ಕೊಡಗಿನ ಜನತೆಯ ಬೆಂಬಲ ಇಲ್ಲಿ ಕರ್ತವ್ಯ ನಿರ್ವಹಿಸಲು ಹೆಚ್ಚಿನ ಸ್ಫೂರ್ತಿ ನೀಡಿದೆ ಎಂದು ನುಡಿದರು.ಕಳೆದ ವರ್ಷ ತೀವ್ರ ಮಳೆಗಾಲದ ನಡುವೆ ಜವಾಬ್ದಾರಿ ವಹಿಸಿ ಕೊಂಡಿದ್ದು, ಆ ಬೆನ್ನಲ್ಲೇ ಎದುರಾಗಿದ್ದ ಪ್ರಾಕೃತಿಕ ವಿಕೋಪ ಸನ್ನಿವೇಶವನ್ನು ನೆನಪಿಸಿಕೊಂಡ ಅವರು, ಪರಿಸ್ಥಿತಿ ಯನ್ನು ಎದುರಿಸುವಲ್ಲಿ ಕೊಡಗಿನ ಜನತೆಯ ಬೆಂಬಲ ಹಾಗೂ ಕೆಳ ಹಂತದ ಎಲ್ಲ ಅಧಿಕಾರಿಗಳು; ಉದ್ಯೋಗಿಗಳ ಶ್ರಮವನ್ನು ಮರೆಯ ಲಾಗದು ಎಂದು ಮಾರ್ನುಡಿದರು.

ಪರಿಣಾಮಕಾರಿ ಸೇವೆ: ಕೊಡಗಿನಲ್ಲಿ ಪ್ರಾಕೃತಿಕ ವಿಕೋಪದ ಸನ್ನಿವೇಶವೂ ಸೇರಿದಂತೆ, ಇಲ್ಲಿ ಯಾವದೇ ಅಕ್ರಮ ಚಟುವಟಿಕೆಗಳು, ಗಾಂಜಾ ದಂಧೆಯಂತಹ ಕೃತ್ಯಗಳನ್ನು ಇಲಾಖೆಯಿಂದ ಪರಿಣಾಮಕಾರಿ ಯಾಗಿ ಹತ್ತಿಕ್ಕುವಲ್ಲಿ; ಜನತೆ ನೀಡುತ್ತಿರುವ ಸುಳಿವಿನಿಂದ ಸಾಧ್ಯವಾಗಿದೆ ಎಂದು ನುಡಿದರು. ಆ ದಿಸೆಯಲ್ಲಿ ಇಲಾಖೆಯ ಉಪ ಅಧೀಕ್ಷಕರು, ವೃತ್ತ ನಿರೀಕ್ಷಕರು, ಠಾಣಾಧಿಕಾರಿಗಳು ಸೇರಿದಂತೆ ಸಿಬ್ಬಂದಿ ಮತ್ತು ಅಪರಾಧ ಪತ್ತೆದಳ ತಂಡದ ಸಹಕಾರದಿಂದ ಕಾನೂನು ಸುವ್ಯವಸ್ಥೆ ಸಾಧ್ಯವಾಗಿದೆ ಎಂದು ಎಸ್ಪಿ ಶ್ಲಾಘಿಸಿದರು.

ಕೊಡಗಿನ ಜನತೆ ಇತರೆಡೆ ಗಳಿಗಿಂತಲೂ ಶಾಂತಿ ಪಾಲನೆಗೆ ಆದ್ಯತೆಯೊಂದಿಗೆ, ಅಪರಾಧ ಕೃತ್ಯಗಳ ಬಗ್ಗೆ ಸುಳಿವು ನೀಡುತ್ತಿದ್ದು, ಒಳ್ಳೆಯ ಕೆಲಸಗಳನ್ನು ಬೆಂಬಲಿಸುತ್ತಿದ್ದಾರೆ ಎಂದು ಬೊಟ್ಟು ಮಾಡಿದ ಡಾ. ಸುಮನ್; ಇಲ್ಲಿನ ಜನಪ್ರತಿನಿಧಿಗಳು, ಜಿಲ್ಲಾಡಳಿತ, ವಿವಿಧ ಇಲಾಖೆಯ ಹಿರಿಯ ಅಧಿಕಾರಿಗಳು ಪೊಲೀಸರು ಮುಕ್ತ ವಾತಾವರಣದಲ್ಲಿ ಕಾರ್ಯ ನಿರ್ವಹಿಸಲು

(ಮೊದಲ ಪುಟದಿಂದ) ಸ್ಫೂರ್ತಿ ಯಾಗಿದ್ದಾಗಿ ವ್ಯಾಖ್ಯಾನಿಸಿದರು. ತಮಗೆ ಕೊಡಗಿನ ಪರಿಸರ, ಇಲ್ಲಿನ ಬೆಟ್ಟಗುಡ್ಡಗಳೊಂದಿಗೆ ವಾತಾವರಣ ತುಂಬಾ ಹಿಡಿಸಿರುವ ದಾಗಿ ಮೆಚ್ಚುಗೆಯ ನುಡಿಯಾಡಿದ ಅವರು, ತಡಿಯಂಡಮೋಳ್ ಬೆಟ್ಟ ಹಾಗೂ ಇತರೆಡೆಗಳಲ್ಲಿ ಸಂಚರಿಸಿ ರುವದಾಗಿ ನೆನಪಿಸಿಕೊಂಡರು.

ಕಾರ್ಯದಲ್ಲಿ ತೃಪ್ತಿ: ದಕ್ಷಿಣ ಕೊಡಗಿನಲ್ಲಿ ಶೋಷಿತರು, ಪರಿಶಿಷ್ಟ ವರ್ಗದ ಯುವ ಜನತೆಗೆ ಜಿಲ್ಲಾಡಳಿತ, ಶ್ರೀ ರಾಮಕೃಷ್ಣ ಆಶ್ರಮದ ಸಹಕಾರದೊಂದಿಗೆ ಆರೋಗ್ಯ, ಶಿಕ್ಷಣ, ಉದ್ಯೋಗ ಸಂಬಂಧ ಕೈಗೊಂಡಿರುವ ಚಟುವಟಿಕೆಗಳು ತೃಪ್ತಿ ತಂದಿವೆ ಎಂದು ನುಡಿದ ಪೊಲೀಸ್ ವರಿಷ್ಠಾಧಿಕಾರಿ; ಈ ಜಿಲ್ಲೆಯಲ್ಲಿ ಕಾರ್ಯನಿರ್ವಹಣೆ ತೃಪ್ತಿದಾಯಕವೆಂದು ಅಭಿಪ್ರಾಯಪಟ್ಟರು.

ಕೊಡಗಿನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಎಲ್ಲರ ಸಹಕಾರದೊಂದಿಗೆ; ಸಂಚಾರ ವ್ಯವಸ್ಥೆ ಸುಧಾರಣೆಯಲ್ಲೂ ಸ್ಪಂದನದಿಂದಾಗಿ ಇಲಾಖೆಯಲ್ಲಿ ಪ್ರತಿಯೊಬ್ಬರಿಗೆ ಹುಮ್ಮಸ್ಸಿನಿಂದ ಕಾರ್ಯನಿರ್ವಹಿಸಲು ಸಾಧ್ಯವಾಗಿದ್ದು, ಮಹಿಳಾ ಸಿಬ್ಬಂದಿ ಕೂಡ ಧೈರ್ಯವಾಗಿ ಹೊಣೆ ಗಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಮೆಚ್ಚುಗೆಯ ನುಡಿಯಾಡಿದರು.