ಮಡಿಕೇರಿ, ಜು. 17: ಪ್ರಧಾನಿ ನರೇಂದ್ರ ಮೋದಿ ಆಶಯದ ‘ಮೇಕ್ ಇನ್ ಇಂಡಿಯಾ’ ಯೋಜನೆಯಡಿ ಬೆಂಗಳೂರಿನ ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜು ಆವಿಷ್ಕಾರಗೊಳಿಸಿರುವ ಉಪಕರಣಗಳನ್ನು; ಜಿಲ್ಲೆಯ ಐದು ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ಅನುಷ್ಠಾನಗೊಳಿಸುವ ಮುಖಾಂತರ ವಿವಿಧ ರೋಗಗಳ ಪರೀಕ್ಷೆ ನಡೆಸಲು ಕ್ರಮ ವಹಿಸುವದಾಗಿ; ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಡಾ. ಕೆ. ಮೋಹನ್ ತಿಳಿಸಿದ್ದಾರೆ.‘ಶಕ್ತಿ’ ಸಂದರ್ಶನದಲ್ಲಿ ಮಾತನಾಡಿದ ಅವರು; ತಾನು ವಿಶ್ವೇಶ್ವರಯ್ಯ ತಾಂತ್ರಿಕ ಕಾಲೇಜಿನ ಓರ್ವ ನಾಮಕರಣ ಸದಸ್ಯರಾಗಿದ್ದು; ಕೊಡಗು ಜಿಲ್ಲಾಧಿಕಾರಿ ಮತ್ತು ಜಿ.ಪಂ. ಮುಖ್ಯಕಾರ್ಯನಿರ್ವಹಣಾಧಿಕಾರಿಗಳ ಮಾರ್ಗದರ್ಶನ ದಲ್ಲಿ ಸಮುದಾಯ ಆರೋಗ್ಯ ಘಟಕಗಳಲ್ಲಿ ರಕ್ತದೊತ್ತಡ, ಮಧುಮೇಹ ಇತ್ಯಾದಿ ಕಾಯಿಲೆಗಳ ತಪಾಸಣೆಗೆ; ಕಾಲೇಜಿನಿಂದ ಆವಿಷ್ಕಾರಗೊಳಿಸಿರುವ ಉಪಕರಣಗಳನ್ನು ಅನುಷ್ಠಾನಕ್ಕೆ ಮುಂದಾಗಿರುವದಾಗಿ ಮಾಹಿತಿ ನೀಡಿದರು.
ಈ ಯೋಜನೆಯಿಂದ ವೈದ್ಯರುಗಳ ಅನುಪಸ್ಥಿತಿಯಲ್ಲಿ ಕೂಡ ಸಮುದಾಯ ಆರೋಗ್ಯ ಕೇಂದ್ರಗಳಲ್ಲಿ ರೂಪಿಸುವ ಪ್ರಯೋಗಾಲಯಗಳಲ್ಲಿ; ದಾದಿಯರು ರೋಗಗಳ ತಪಾಸಣೆ ನಡೆಸಿ; ವರದಿ ನೀಡುವದರೊಂದಿಗೆ; ಆ ವರದಿ ಪರಿಶೀಲಿಸಿ ವೈದ್ಯರು ಔಷಧೋಪಚಾರ ನೀಡಲಿದ್ದಾರೆ ಎಂದು ವಿವರಿಸಿದರು.
ವಿಶ್ವೇಶ್ವರಯ್ಯ ತಾಂತ್ರಿಕ ವಿದ್ಯಾಲಯದ ಕೊಡುಗೆಯನ್ನು ಜಿಲ್ಲೆಗೆ ಬಳಸಿಕೊಳ್ಳುವಲ್ಲಿ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಹಾಗೂ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಲಕ್ಷ್ಮಿಪ್ರಿಯ ವಿಶೇಷ ಕಾಳಜಿ ವಹಿಸಿದ್ದಾಗಿ ತಿಳಿಸಿದ ಅವರು; ಕೊಡಗಿನಲ್ಲಿ ವೈದ್ಯರುಗಳ ಕೊರತೆ ನಡುವೆ ಈ ಮೂಲಕ ಹೆಚ್ಚಿನ ಚಿಕಿತ್ಸೆ ಜನತೆಗೆ ಲಭಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಪೂರ್ವ ತಯಾರಿ : ಈಗಾಗಲೇ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪ ಎದುರಿಸಲು; ಇಲ್ಲಿನ ವೈದ್ಯಕೀಯ ವಿಜ್ಞಾನ ಕಾಲೇಜಿನ ಸಹಕಾರದಿಂದ ಜಿಲ್ಲಾಡಳಿತದ ಮಾರ್ಗದರ್ಶನದಲ್ಲಿ ಸಾಕಷ್ಟು ಪೂರ್ವ ತಯಾರಿ ಮಾಡಿಕೊಳ್ಳಲಾಗಿದೆ ಎಂದು ನೆನಪಿಸಿದ ಡಾ. ಮೋಹನ್; ತುರ್ತು ಸೇವೆಗಾಗಿ ಗಾಲಿಕುರ್ಚಿ; ಆಕ್ಸಿಜನ್ ಸಿಲಿಂಡರ್ಗಳು ಸೇರಿದಂತೆ ಅಗತ್ಯ ಔಷಧಿಗಳನ್ನು ದಾಸ್ತಾನು ಹೊಂದಿರುವದಾಗಿ ತಿಳಿಸಿದರು.
ಈ ದಿಸೆಯಲ್ಲಿ ಜಿಲ್ಲಾಧಿಕಾರಿ ಹಾಗೂ ಜಿ.ಪಂ. ಮುಖ್ಯಾಧಿಕಾರಿ ಸಹಿತ ರೆಡ್ಕ್ರಾಸ್ ಇನ್ನಿತರ ಸಂಘ ಸಂಸ್ಥೆಗಳು ಭಾಗಿಯಾಗಿ ಜಿಲ್ಲಾ ವೈದ್ಯಕೀಯ ಕಾಲೇಜು ಆಸ್ಪತ್ರೆ ಹಾಗೂ ಸೋಮವಾರಪೇಟೆ, ಕುಶಾಲನಗರ, ವೀರಾಜಪೇಟೆ ಆಸ್ಪತ್ರೆಗಳಲ್ಲಿ ತಾಲೂಕು ಹಂತದ ವೈದ್ಯಾಧಿಕಾರಿಗಳು ಮತ್ತು ಸಿಬ್ಬಂದಿ, ಆಶಾ ಕಾರ್ಯಕರ್ತೆಯರು, ಗ್ರಾಮೀಣ ದಾದಿಯರಿಗೆ ತರಬೇತಿ ನೀಡಲಾಗಿದೆ ಎಂದರು.
ಆ ಸಲುವಾಗಿ ಆರೋಗ್ಯ ಇಲಾಖೆಯ ಜಂಟಿ ನಿರ್ದೇಶಕರ ಸಹಿತ ತಜ್ಞ ವೈದ್ಯರಿಂದ ವಿವಿಧ ಹಂತದಲ್ಲಿ ಈಗಾಗಲೇ ಮೂರ್ನಾಲ್ಕು ಬಾರಿ ಪೂರ್ವ ತಯಾರಿಯ ಸಭೆಗಳನ್ನು ನಡೆಸಿ; ಆಕಸ್ಮಿಕ ಎದುರಾಗಬಹುದಾದ ಪರಿಸ್ಥಿತಿ ನಿರ್ವಹಣೆಗೆ ಜಾಗೃತಿ ಮೂಡಿಸಲಾಗಿದೆ ಎಂದ ಅವರು; ಸುಮಾರು 30 ಕಡೆಗಳಲ್ಲಿ (ಮೊದಲ ಪುಟದಿಂದ) 60 ಮಂದಿಗೆ ಏಕಕಾಲ ತುರ್ತು ಚಿಕಿತ್ಸೆಗೆ; ಆರೋಗ್ಯ ಉಪಕರಣಗಳ ಸಹಿತ ಔಷಧೋಪಚಾರಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು.
ರೋಗ ಪತ್ತೆಯಾಗಿಲ್ಲ : ಜಿಲ್ಲೆಯಲ್ಲಿ ಕೆಲವು ಸಮಯದ ಹಿಂದೆ ಶಿರಂಗಾಲ, ತೊರೆನೂರು ವ್ಯಾಪ್ತಿಯಲ್ಲಿ ಕೆಲವರಿಗೆ ಸಾಂಕ್ರಮಿಕ ರೋಗಗಳ ಸೋಂಕು ಕಾಣಿಸಿಕೊಂಡಿದ್ದರೂ; ಎಲ್ಲರೂ ಗುಣಮುಖರಾಗಿದ್ದು; ಪ್ರಸಕ್ತ ಅಂತಹ ಹೆಚ್ 1 ಎನ್1 ಅಥವಾ ಹಂದಿಜ್ವರ, ಡೆಂಗ್ಯೂ ಇತ್ಯಾದಿ ಗೋಚರಿಸಿಲ್ಲ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಸ್ಪಷ್ಟಪಡಿಸಿದರು.
ಈಚೆಗೆ ಚಾಲಕನೊಬ್ಬ ಈ ಸಂಬಂಧ ಸಾವನ್ನಪ್ಪಿರುವ ಕುರಿತು ಸ್ಪಷ್ಟಪಡಿಸಿದ ಅವರು; ಬೇರೆ ಬೇರೆ ಕಡೆಗಳಲ್ಲಿ ಪ್ರವಾಸಿಗಳನ್ನು ಕರೆದೊಯ್ಯುತ್ತಿದ್ದು; ಹೊರ ಜಿಲ್ಲೆಗಳ ಭೇಟಿಯಿಂದ ಕಾಯಿಲೆ ಉಲ್ಬಣಗೊಂಡು ಸಾವನ್ನಪ್ಪಿದ್ದಾಗಿದೆ ಎಂದು ನೆನಪಿಸಿದರು. ಶಿರಂಗಾಲ ವ್ಯಾಪ್ತಿಯಲ್ಲಿ ಈ ಸಂಬಂಧ ನೂತನ ಚಿಕಿತ್ಸಾ ಘಟಕ ಆರಂಭಿಸಿದ್ದು; ಯಾರೂ ಆತಂಕಗೊಳ್ಳುವ ಅಗತ್ಯವಿಲ್ಲವೆಂದು ಅವರು ಧೈರ್ಯ ಹೇಳಿದರು.
ವೈದ್ಯರ ಕೊರತೆ: ಜಿಲ್ಲೆಯ ಸೂರ್ಲಬ್ಬಿ, ಕಾನೂರು, ಬಾಳೆಲೆ, ಬಿರುನಾಣಿ, ಪಾಲಿಬೆಟ್ಟ, ಮಾಲ್ದಾರೆ ವ್ಯಾಪ್ತಿಯ ಪ್ರಾಥಮಿಕ ಆರೋಗ್ಯ ಕೇಂದ್ರಗಳ ಹೊರತಾಗಿ ಮಿಕ್ಕೆಡೆಗಳಲ್ಲಿ ವೈದ್ಯ ಸಿಬ್ಬಂದಿಯ ಕೊರತೆ ಇಲ್ಲವೆಂದು ‘ಶಕ್ತಿ’ಯೊಂದಿಗೆ ಮಾಹಿತಿ ನೀಡಿದ ಅವರು; ಯಾವದೇ ಕಡೆಗಳಲ್ಲಿ ಸಮಸ್ಯೆ ಎದುರಾಗದಂತೆ ವಾರಕ್ಕೆ 3 ದಿವಸ ಅನ್ಯ ಭಾಗದ ವೈದ್ಯರಿಂದ ಚಿಕಿತ್ಸೆ ಕಲ್ಪಿಸುತ್ತಿರುವದಾಗಿ ಭರವಸೆಯಿತ್ತರು.
ಭವಿಷ್ಯದಲ್ಲಿ ಸ್ಥಾಪನೆಗೊಳ್ಳಲಿರುವ ಪ್ರಯೋಗಾಲಯಗಳಿಂದ ಗಿರಿಜನ ಹಾಡಿಗಳ ಜನರೂ ಸೇರಿದಂತೆ ಎಲ್ಲರಿಗೆ ಅಗತ್ಯ ಚಿಕಿತ್ಸೆಗಾಗಿ ಕೇಂದ್ರದ ಜನೌಷಧ ಯೋಜನೆ ಬಳಸಿಕೊಂಡು; ಪ್ರತಿ ಆರೋಗ್ಯ ಕೇಂದ್ರಕ್ಕೆ ತಲಾ ರೂ. 25 ಸಾವಿರದಂತೆ ತುರ್ತು ಔಷಧಿಗಳ ಖರೀದಿಗೆ ನೆರವು ಕಲ್ಪಿಸಿರುವದಾಗಿಯೂ ಸ್ಪಷ್ಟಪಡಿಸಿದರು.