*ಗೋಣಿಕೊಪ್ಪಲು, ಜು. 17: ಸೆಪ್ಟೆಂಬರ್ 5 ರಂದು ನಡೆಯುವ ಶಿಕ್ಷಕರ ದಿನಾಚರಣೆಯನ್ನು ತಾಲೂಕಿನಲ್ಲಿ ಅರ್ಥಪೂರ್ಣವಾಗಿ ಮತ್ತು ವಿಜೃಂಭಣೆಯಿಂದ ನಡೆಸಲು ತೀರ್ಮಾನ ಕೈಗೊಳ್ಳಲಾಯಿತು.

ವೀರಾಜಪೇಟೆ ನೌಕರ ಭವನದಲ್ಲಿ ತಾಲೂಕು ಕಾರ್ಯನಿರ್ವಹಣಾಧಿಕಾರಿ ಹಾಗೂ ತಾಲೂಕು ಶಿಕ್ಷಕರ ದಿನಾಚರಣೆ ಸಮಿತಿಯ ಅಧ್ಯಕ್ಷ ಹೆಚ್.ಎ. ಷಣ್ಮುಗಂ ಅಧ್ಯಕ್ಷತೆಯಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಸಮಿತಿ ಆಚರಣೆಯ ಬಗ್ಗೆ ಒಮ್ಮತ ನಿರ್ಧಾರ ಕೈಗೊಳ್ಳಲಾಯಿತು.

ಕಳೆದ ಬಾರಿ ಪ್ರಕೃತಿ ವಿಕೋಪದ ಹಿನ್ನೆಲೆ ಶಿಕ್ಷಕರ ದಿನಾಚರಣೆಯನ್ನು ಅತೀ ಸರಳವಾಗಿ ಆಚರಿಸಲಾಯಿತು. ಈ ಬಾರಿ ಆಚರಣೆಗೆ ಮೆರುಗು ತುಂಬಿ ವಿಶೇಷವಾಗಿ ಆಚರಿಸಲು ಅಗತ್ಯ ತಯಾರಿ ಮಾಡಿಕೊಳ್ಳುವಂತೆ ಸಭೆ ತೀರ್ಮಾನಿಸಿತು.

ಮುಂಚಿತವಾಗಿ ಆಚರಣೆಗೆ ಅಗತ್ಯ ತಯಾರಿ ಮಾಡಿಕೊಂಡು ಅರ್ಥಪೂರ್ಣವಾಗಿ ಆಚರಿಸಲು ಶಿಕ್ಷಕರು, ಸಮಿತಿ ಪದಾಧಿಕಾರಿಗಳು ಕೈಜೋಡಿಸಬೇಕು ಎಂದು ತಹಶೀಲ್ದಾರ್ ಹಾಗೂ ಆಚರಣಾ ಸಮಿತಿ ಉಪಾಧ್ಯಕ್ಷ ಪುರಂದರ ಮಾಹಿತಿ ನೀಡಿದರು.

ಕಳೆದ ಬಾರಿ ಸರಳವಾಗಿ ಆಚರಣೆ ಮಾಡಿದ ಕಾರ್ಯಕ್ರಮ ಈ ಬಾರಿ ಸುಮಾರು ಒಂದೂವರೆ ಲಕ್ಷ ವೆಚ್ಚದಲ್ಲಿ ಕಾರ್ಯಕ್ರಮ ಆಯೋಜಿಸಲು ಯೋಜನೆ ರೂಪಿಸಲಾಗಿದೆ ಎಂದು ಕಲ್ಯಾಣ ಸಮಿತಿ ಕಾರ್ಯದರ್ಶಿ ಎಂ.ಕೆ. ನಳಿನಾಕ್ಷಿ ಮಾಹಿತಿ ನೀಡಿದರು.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಸಮಿತಿ ಕಾರ್ಯದರ್ಶಿ ಶ್ರೀಶೈಲಾ ಬೆಳಗಿ ಮಾತನಾಡಿ ಶಿಕ್ಷಕರ ದಿನಾಚರಣೆಯನ್ನು ಶಿಸ್ತುಬದ್ದವಾಗಿ ನಡೆಯಲು ಎಲ್ಲರ ಸಹಕಾರ ಅಗತ್ಯ. ಪ್ರತಿಯೊಂದು ಸಮಿತಿಯು ತಮ್ಮ ವ್ಯಾಪ್ತಿಗೆ ಬರುವ ಕಾರ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಬೇಕೆಂದು ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕರಿಗೆ ಸನ್ಮಾನ ಮಾಡುವ ಬಗ್ಗೆ ತೀರ್ಮಾನ ಕೈಗೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಭೋಜನ ವ್ಯವಸ್ಥೆಗೆ ಜಿಲ್ಲಾ ಪ್ರಶಸ್ತಿ ವಿಜೇತ ಮಂಚಳ್ಳಿ ಶಾಲೆಯ ಮುಖ್ಯ ಶಿಕ್ಷಕ ಕೆ.ಎಂ. ಸೋಮಯ್ಯ ವ್ಯವಸ್ಥೆ ಕಲ್ಪಿಸುವದಾಗಿ ಈ ಸಂದರ್ಭ ಸಭೆಗೆ ತಿಳಿಸಿದರು.

ಸಭೆಯಲ್ಲಿ ಶಿಕ್ಷಕರ ಕಲ್ಯಾಣ ಸಮಿತಿ ಅಧ್ಯಕ್ಷರಾದ ಕುಂಬೇರ ಮನು, ಸಂಘಟನಾ ಕಾರ್ಯದರ್ಶಿ ಬಿ.ಟಿ ದೇವರಾಜ್, ನೌಕರರ ಸಂಘದ ಅಧ್ಯಕ್ಷ ಗುರುರಾಜ್, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಈ. ಸುರೇಂದ್ರ, ಅನುದಾನಿತ ನೌಕರರ ಸಂಘದ ಜಿಲ್ಲಾಧ್ಯಕ್ಷ ಟಿ.ಎ. ಪ್ರಭುಕುಮಾರ್, ತಾಲೂಕು ಅಧ್ಯಕ್ಷ ಎಂ.ಕೆ. ರೋಹಿತ್, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷ ಮಹೇಶ್, ಕಾರ್ಯದರ್ಶಿ ಚಂದನ್, ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ಕೆ.ಆರ್. ಸುಬ್ಬಯ್ಯ, ಎ.ವಿ. ಮಂಜುನಾಥ್, ಪ್ರೌಢಶಾಲಾ ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಶಿವರಾಮ್, ಕಾರ್ಯದರ್ಶಿ ಲೊಕೇಶ್, ಪರಿಶಿಷ್ಟ ಜಾತಿ ಮತ್ತು ಪಂಗಡ ಶಿಕ್ಷಕರ ಕ್ಷೇಮಾಭಿವೃದ್ದಿ ಸಂಘದ ಅಧ್ಯಕ್ಷ ಗಿಡ್ಡಯ್ಯ, ಕಾರ್ಯದರ್ಶಿ ರಂಗನಾಥ್, ಪ್ರಾಥಮಿಕ ಶಾಲಾ ಮುಖ್ಯೋಪಾ ಧ್ಯಾಯರ ಜಿಲ್ಲಾ ಕಾರ್ಯದರ್ಶಿ ಸೀತಾ, ತಾಲೂಕು ಅಧ್ಯಕ್ಷ ವಿಜಯಕುಮಾರ್, ಸುರೇಶ್, ಬಿ.ಆರ್.ಪಿ.ಗಳಾದ ಉತ್ತಪ್ಪ ಸೇರಿದಂತೆ ಸಿ.ಆರ್.ಪಿಗಳು, ಶಿಕ್ಷಕರು ಹಾಜರಿದ್ದರು.