*ಗೋಣಿಕೊಪ್ಪಲು, ಜು. 17: ಅನಾಮಧೇಯ ವ್ಯಕ್ತಿಗಳಿಂದ ಬಾಳೆಲೆ ವಿಜಯಲಕ್ಷ್ಮಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲೆಯೂ ಸೇರಿದಂತೆ ಜಿಲ್ಲೆಯ ವಿವಿಧ ಶಾಲೆಗಳಿಗೆ ಪೂರೈಕೆಯಾಗಿರುವ ಕ್ರೈಸ್ತಧರ್ಮದ ಬಗೆಗಿನ ಕೃತಿಗಳ ಬಗ್ಗೆ ಬಿಇಓ ಹಾಗೂ ಡಿಡಿಪಿಐ ತಾ. 25ರ ಒಳಗೆ ಸೂಕ್ತ ಕ್ರಮಕೈಗೊಳ್ಳದಿದ್ದರೆ ಬಾಳೆಲೆ ಬಂದ್ ನಡೆಸಿ ತೀವ್ರ ಪ್ರತಿಭಟನೆ ನಡೆಸಲಾಗುವದು ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್.ಪೃಥ್ಯು ಎಚ್ಚರಿಸಿದರು.
ಬಾಳೆಲೆ ವಿಜಯಲಕ್ಚ್ಮಿ ಪದವಿ ಪೂರ್ವ ಕಾಲೇಜಿನ ಸಭಾಂಗಣದಲ್ಲಿ ನಡೆದ ವಿವಿಧ ಸಂಘಟನೆಗಳ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಅವರು ಒಂದು ಧರ್ಮವನ್ನು ವಿಜೃಂಭಿಸಿ, ಮತ್ತೊಂದು ಧರ್ಮವನ್ನು ಹೀಯಾಳಿಸಿ ಕೊಡವ ಮತ್ತು ಕನ್ನಡ ಭಾಷೆಯಲ್ಲಿ ಯೋಹಾನನು ಬರೆದ ಸುವಾರ್ತೆ, ಸತ್ಯಮೇವ ಜಯತೆ, ದೇವಡ ಪುದಿಯ ಒಪ್ಪಂದ (ಕೊಡವ ಭಾಷೆ ಕೃತಿ) ಎನ್ನುವ ಮೂರು ಗ್ರಂಥಗಳನ್ನು ಶಾಲೆಗಳಿಗೆ ಅಂಚೆ ಮೂಲಕ ಕಳಿಸಲಾಗಿದೆ. ಇದರಿಂದ ಧಾರ್ಮಿಕ ಸೌಹಾರ್ದತೆಯ ಕೇಂದ್ರವಾಗಿರುವ ಶಾಲೆಗಳಲ್ಲಿ ಕೋಮುವಾದವನ್ನು ಸೃಷ್ಟಿ ಮಾಡಿದಂತಾಗುತ್ತದೆ. ಯಾವದೇ ಧರ್ಮದ ಬಗ್ಗೆ ಅರಿವಿಲ್ಲದ ಮಕ್ಕಳ ಮನಸ್ಸಿನಲ್ಲಿ ಧಾರ್ಮಿಕ ಕೋಮುವಾದವನ್ನು ಸೃಷ್ಟಿಸುವದು ಆರೋಗ್ಯಕರ ಬೆಳೆವಣಿಗೆಯಲ್ಲ. ಈ ಪುಸ್ತಕಗಳನ್ನು ಒದಗಿಸಿರುವದÀರ ಹಿಂದೆ ಶಿಕ್ಷಣಾಧಿಕಾರಿಗಳ ಕೈವಾಡವಿರುವ ಬಗ್ಗೆ ಅನುಮಾನಗಳಿವೆ. ಈ ಬಗ್ಗೆ ಶಿಕ್ಷಣ ಇಲಾಖೆ ಸೂಕ್ತ ತನಿಖೆ ನಡೆಸಿ ಕಾನೂನು ಕ್ರಮ ಕೈಗೊಳ್ಳಬೇಕು. ಕೋಮು ಸೌಹಾರ್ಧತೆಗೆ ಹೆಸರಾಗಿರುವ ಕೊಡಗಿನಲ್ಲಿ ಶಾಂತಿಯನ್ನು ಕದಡುವದಕ್ಕೆ ಅವಕಾಶ ಮಾಡಿ ಕೊಡಬಾರದು ಎಂದು ತಿಳಿಸಿದರು.
ಸ್ಥಳೀಯ ವಿದ್ಯಾಸಂಸ್ಥೆ ಅಧ್ಯಕ್ಷ ಅಳಮೇಂಗಡ ಬೋಸ್ ಮಂದಣ್ಣ ಮಾತನಾಡಿ, ವಿದ್ಯಾಸಂಸ್ಥೆಗಳಲ್ಲಿ ಯಾವದೇ ಧಾರ್ಮಿಕ ಭಾವನೆ ನುಸುಳದಂತೆ ನೋಡಿಕೊಳ್ಳ ಲಾಗುತ್ತಿದೆ. ಈ ದೇಶದಲ್ಲಿ ತ್ಯಾಗ ಬಲಿದಾನದ ಮೂಲಕ ರಾಷ್ಟ್ರಕಟ್ಟಿದ ಅನೇಕ ಮಹಾತ್ಮರಿದ್ದಾರೆ. ಅಂಥವರ ಪುಸ್ತಕಗಳನ್ನು ಶಾಲೆಗಳಿಗೆ ನೀಡುವದರ ಬದಲು ಕೋಮು ಭಾವನೆ ಕೆರಳಿಸುವ ಗ್ರಂಥಗಳನ್ನು ನೀಡಿರುವದು ಖಂಡನೀಯ ಎಂದರು.
ಕಾರ್ಯದರ್ಶಿ ಸಿ.ಎಸ್. ಕೃಷ್ಣಗಣಪತಿ ಮಾತನಾಡಿ ಧಾರ್ಮಿಕ ಭಾವನೆಗಳು ಮನದೊಳಗಿರಲಿ. ಅದನ್ನು ಬೀದಿಗೆ ತರುವದು ಬೇಡ. ಭಾರತ ಸರ್ವ ಧರ್ಮದ ಶಾಂತಿಯ ಧಾಮ. ಇಂತಹ ಕಡೆ ಮಕ್ಕಳಲ್ಲಿ ಧಾರ್ಮಿಕ ಭಾವನೆಯನ್ನು ಕದಡಬಾರದು. ಈ ಪುಸ್ತಕದ ಪ್ರಕಾಶಕರ ವಿರುದ್ಧ ಪೊಲೀಸ್ ಠಾಣೆ ದೂರು ನೀಡಿ ಮೊಕದ್ದಮೆ ದಾಖಲಿ ಸಬೇಕು ಎಂದು ಒತ್ತಾಯಿಸಿದರು.
ಸ್ಥಳೀಯ ಗ್ರಾಮ ಪಂಚಾಯಿತಿ ಸದಸ್ಯ ಪಿ.ಬಿ.ಸುಕೇಶ್, ನಿಟ್ಟೂರು ಗ್ರಾಮ ಪಂಚಾಯಿತಿ ಸದಸ್ಯ ಚೆಕ್ಕೇರ ಅಯ್ಯಪ್ಪ, ಪ್ರಾಂಶುಪಾಲ ಡಾ.ಜೆ. ಸೋಮಣ್ಣ, ಉಪನ್ಯಾಸಕ ಕೆ.ಜಿ. ಅಶ್ವಿನಿಕುಮಾರ್ ಮಾತನಾಡಿದರು. ನಿಟ್ಟೂರು ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ಮೇಚಂಡ ಸೋಮಯ್ಯ, ಸ್ಥಳೀಯ ವಿದ್ಯಾಸಂಸ್ಥೆ ಆಡಳಿತ ಮಂಡಳಿ ಕೋಶಾಧಿಕಾರಿ ಅಡ್ಡೇಂಗಡ ದೇವಯ್ಯ, ನಿರ್ದೇಶಕ ಅಡ್ಡೇಂಗಡ ಅರುಣ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಅಡ್ಡೇಂಗಡ ರಾಖಿ ನಾಣಯ್ಯ, ತಾ.ಪಂ. ಸದಸ್ಯೆ ಸುನಿತಾ, ಬಾಳೆಲೆ ಗ್ರಾ.ಪಂ. ಉಪಾಧ್ಯಕ್ಷ ರಂಜನ್ ಮಹೇಶ್ ಕುಮಾರ್ ಹಾಜರಿದ್ದರು. ಶಾಲೆಗೆ ಪೂರೈಕೆಯಾಗಿದ್ದ ವಿವಾದಿತ ಧಾರ್ಮಿಕ ಗ್ರಂಥಗಳನ್ನು ಮುಖ್ಯ ಶಿಕ್ಷಕ ಕೆ. ಚಂದ್ರಶೇಖರ್ ಅವರಿಂದ ಜಿಲ್ಲಾ ಪಂಚಾಯಿತಿ ಸದಸ್ಯ ಬಿ.ಎನ್. ಪೃಥ್ಯು ಪಡೆದುಕೊಂಡರು.
ಚಿತ್ರ ವರದಿ: ಎನ್.ಎನ್.ದಿನೇಶ್