ವೀರಾಜಪೇಟೆ, ಜು. 17: ಜಗತ್ತಿನ ಅತ್ಯಂತ ಪುರಾತನ ಸೇವಾ ಸಂಸ್ಥೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ರೋಟರಿಗೆ ಮಹಿಳೆಯರನ್ನು ಹೆಚ್ಚಿನ ಸಂಖ್ಯೆಯಲ್ಲಿ ಸದಸ್ಯೆಯರನ್ನಾಗಿಸುವ ಅಗತ್ಯವಿದೆ ಎಂದು ರೋಟರಿ ಜಿಲ್ಲೆ ಸಲಹೆಗಾರ, ಮಾಜಿ ರಾಜ್ಯಪಾಲ ಡಾ. ಶಿವಣ್ಣ ಹೇಳಿದರು.
ವೀರಾಜಪೇಟೆ ರೋಟರಿ ಕ್ಲಬ್‍ನ 50ನೇ ಅಧ್ಯಕ್ಷರಾಗಿ ಕೆ.ಹೆಚ್. ಆದಿತ್ಯ ಮತ್ತು ಕಾರ್ಯದರ್ಶಿಯಾಗಿ ಭರತ್ ರಾಮ್ ರೈ ಅವರ ಪದಗ್ರಹಣ ನೆರವೇರಿಸಿ ಮಾತನಾಡಿದ ಶಿವಣ್ಣ, ಜಗತ್ತಿನಲ್ಲಿಯೇ ರೋಟರಿಯು 104 ವರ್ಷಗಳ ಇತಿಹಾಸದೊಂದಿಗೆ ಅತ್ಯಂತ ಹಳೆಯ ಸಾಮಾಜಿಕ ಸೇವಾ ಸಂಸ್ಥೆಯಾಗಿ ಗುರುತಿಸಿಕೊಂಡಿದೆ. ರೋಟರಿಗೆ ಜಾಗತಿಕವಾಗಿ 35 ಸಾವಿರ ಕ್ಲಬ್‍ಗಳೊಂದಿಗೆ 1.25 ಮಿಲಿಯನ್ ಸದಸ್ಯರಿದ್ದಾರೆ. ಜಾಗತಿಕ ಲೆಕ್ಕಾಚಾರದಂತೆ ಭಾರತದಿಂದ ಶೇ. 15 ರಷ್ಟು ರೋಟರಿ ಸದಸ್ಯರು ವಿಶ್ವಮಟ್ಟದಲ್ಲಿದ್ದಾರೆ. ಜಾಗತಿಕವಾಗಿ ರೋಟರಿಯಲ್ಲಿ ಶೇ. 22 ರಷ್ಟು ಮಹಿಳಾ ಸದಸ್ಯೆಯರಿದ್ದು ಈ ಸಂಖ್ಯೆ ಮುಂದಿನ ವರ್ಷಗಳಲ್ಲಿ ಹೆಚ್ಚಾಗ ಬೇಕಾಗಿದ್ದು, ರೋಟರಿ ಸಂಸ್ಥೆಗಳು ಮಹಿಳಾ ಸದಸ್ಯೆಯರನ್ನು ಸೇರ್ಪಡೆ ಗೊಳಿಸಲು ಗಮನ ಹರಿಸಬೇಕೆಂದು ಕರೆ ನೀಡಿದರು.
ಪೋಲಿಯೋವನ್ನು ವಿಶ್ವ ದಿಂದಲೇ ನಿರ್ಮೂಲನೆ ಮಾಡ ಬೇಕೆಂದು ಪಣ ತೊಟ್ಟಿರುವ ರೋಟರಿ ಸಂಸ್ಥೆಯು ಹಲವಾರು ವರ್ಷಗಳಿಂದ ಪೋಲಿಯೋ ನಿರ್ಮೂಲನಾ ಆಂದೋಲನದಲ್ಲಿ ಮುಖ್ಯಪಾತ್ರ ವಹಿಸಿದೆ. ಸರ್ಕಾರದ ವಿವಿಧ ಇಲಾಖೆಗಳೂ ಈ ನಿಟ್ಟಿನಲ್ಲಿ ರೋಟರಿಯೊಂದಿಗೆ ಕೈಜೋಡಿಸಿದ ಪರಿಣಾಮವೇ ಪೋಲಿಯೋ ಬಹುತೇಕ ನಿರ್ಮೂಲನೆಯಾಗುವ ಹಂತದಲ್ಲಿದೆ ಎಂದು ಶಿವಣ್ಣ ಮಾಹಿತಿ ನೀಡಿದರು.
ರೋಟರಿ ಸಂಸ್ಥೆಗಳು ಯೋಜನೆಗಳನ್ನು ಜಾರಿಗೊಳಿಸುವ ಸಂದರ್ಭ ಸೂಕ್ತ ಫಲಾನುಭವಿಗಳಿಗೆ ಯೋಜನೆಯ ಸೌಲಭ್ಯ ತಲಪುವಂತೆ ಗಮನ ಹರಿಸುವದು ಮುಖ್ಯ ಎಂದು ಕಿವಿಮಾತು ಹೇಳಿದರು.
ಸರ್ಕಾರದಿಂದ ನಡೆಯುವ ಉತ್ತಮ ಕಾರ್ಯಗಳನ್ನು ಗುರುತಿಸಿ ಜನರಿಗೆ ತಲಪಿಸುವಲ್ಲಿ ರೋಟರಿ ಸದಸ್ಯರು ಮುಂದಾಗುವಂತೆ ಕರೆ ನೀಡಿದ ಶಿವಣ್ಣ, ಸರ್ಕಾರದ ಲೋಪಗಳೇ ಹೆಚ್ಚು ಚರ್ಚೆಗೀಡಾಗುವ ದಿನಗಳಲ್ಲಿ ಉತ್ತಮ ಕಾರ್ಯಗಳನ್ನು ತಿಳಿಸುವದರೊಂದಿಗೆ ಸರ್ಕಾರದ ಯೋಜನೆಗಳಿಗೆ ಪ್ರೋತ್ಸಾಹ ನೀಡುವಂತೆ ಸಲಹೆ ಮಾಡಿದರು.
ರೋಟರಿ ವಲಯ 6 ರ ಸಹಾಯಕ ರಾಜ್ಯಪಾಲ ಪಿ. ನಾಗೇಶ್ ಮಾತನಾಡಿ, ಜಿಲ್ಲಾ ರೋಟರಿಯಲ್ಲಿ ಜೀವನ್ ಸಂಧ್ಯಾ ಮತ್ತು ಸೇವ್ ಎ ಲೈಫ್ ಎಂಬ ಯೋಜನೆಗಳಿದ್ದು, ಇವುಗಳನ್ನು ಯಶಸ್ವಿಯಾಗಿ ಜಾರಿಗೊಳಿಸುವಲ್ಲಿ ಸರ್ವ ಸದಸ್ಯರೂ ಗಮನ ನೀಡುವಂತೆ ಮನವಿ ಮಾಡಿದರು. ಹೊಸ ಸದಸ್ಯರನ್ನು ಹೆಚ್ಚಾಗಿ ರೋಟರಿಗೆ ಸೇರ್ಪಡೆಗೊಳಿ ಸುವಂತೆಯೂ ಮನವಿ ಮಾಡಿದ ನಾಗೇಶ್, ಚಿಗುರು ಪ್ರಕೃತಿಯಲ್ಲಿ ಬೆಳವಣಿಗೆಯ ಸಂಕೇತ ಹೇಗೋ ಹಾಗೇ ಹೊಸ ಸದಸ್ಯರು ರೋಟರಿಯ ಬೆಳವಣಿಗೆಗೆ ಮುಖ್ಯ ಎಂದು ವಿಶ್ಲೇಷಿಸಿದರು.
ವಲಯ 6 ರ ಕಾರ್ಯದರ್ಶಿ ಅನಿಲ್ ಎಚ್.ಟಿ. ಮಾತನಾಡಿ, ಕೊಡಗು ಜಿಲ್ಲೆಯಿಂದ 1983-84ನೇ ಸಾಲಿನಲ್ಲಿ ಜಿಲ್ಲಾ ರೋಟರಿಗೆ ವೀರಾಜಪೇಟೆ ರೋಟರಿಯಿಂದ ಬಿದ್ದಂಡ ಮೇದಪ್ಪ ಚಂಗಪ್ಪ ಅವರ ಮೂಲಕ ಮೊದಲ ರಾಜ್ಯಪಾಲರನ್ನು ನೀಡಲಾಯಿತು ಎಂದು ಸ್ಮರಿಸಿ ದರಲ್ಲದೆ, ಜಿಲ್ಲೆಯ ಹಿರಿಯ ರೋಟರಿ ಕ್ಲಬ್ ಆಗಿರುವ ವೀರಾಜಪೇಟೆ ರೋಟರಿಯ ಹಿರಿಯ ಸದಸ್ಯರ ಮಾರ್ಗದರ್ಶನದಿಂದಾಗಿ ಶಿಸ್ತನ್ನು ಈ ಸಂಸ್ಥೆ ಕಾಪಾಡಿಕೊಂಡಿದೆ ಎಂದು ಶ್ಲಾಘಿಸಿದರು.
ವೀರಾಜಪೇಟೆ ರೋಟರಿಯು ಕುಟುಂಬದ ಮಹಿಳೆಯರನ್ನು ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ತೊಡಗಿಸಿ ಕೊಳ್ಳುವದರೊಂದಿಗೆ ರೋಟರಿ ಒಂದು ಪರಿವಾರದಂತೆ ಎಂಬ ಮಾತನ್ನು ಸಾರ್ಥಕಗೊಳಿಸಿದೆ ಎಂದು ಅನಿಲ್ ಹೆಮ್ಮೆ ವ್ಯಕ್ತಪಡಿಸಿದರು.
ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಕೆ.ಹೆಚ್. ಆದಿತ್ಯ ಮಾತನಾಡಿ, ಜನಪರವಾದ ವಿವಿಧ ಸೇವಾ ಯೋಜನೆಗಳನ್ನು ವೀರಾಜಪೇಟೆ ವ್ಯಾಪ್ತಿಯಲ್ಲಿ ಮುಂದಿನ 1 ವರ್ಷದ ಕಾಲ ಹಮ್ಮಿಕೊಂಡಿದ್ದು ರೋಟರಿಯನ್ನು ಮತ್ತಷ್ಟು ಜನಸ್ಮೇಹಿಯಾಗಿಸಲಾಗುತ್ತದೆ ಎಂದು ಭರವಸೆ ನೀಡಿದರು.
ರೋಟರಿಯ ಜೋನಲ್ ಲೆಫ್ಟಿನೆಂಟ್ ಡಾ. ಎಸ್.ವಿ. ನರಸಿಂಹನ್, ನಿಕಟಪೂರ್ವ ಅಧ್ಯಕ್ಷ ರವಿ, ನಿಕಟಪೂರ್ವ ಕಾರ್ಯದರ್ಶಿ ಚೇತನ್ ಮುತ್ತಣ್ಣ ವೇದಿಕೆಯಲ್ಲಿದ್ದರು. ನೂತನ ಕಾರ್ಯದರ್ಶಿ ಭರತ್ ರಾಮ್ ರೈ ವಂದಿಸಿದರು.
ಅರಮೇರಿ ಕಳಂಚೇರಿ ಮಠಾಧೀಶ ಶಾಂತಮಲ್ಲಿ ಕಾರ್ಜುನ ಸ್ವಾಮೀಜಿ, ರೋಟರಿ ಪ್ರಮುಖರಾದ ಕ್ರೆಜ್ವಲ್ ಕೋಟ್ಸ್, ಎನ್. ಮೋಹನ್ ಅಯ್ಯಪ್ಪ, ಡಾ. ಲವಿನ್ ಚಂಗಪ್ಪ, ಬಿ.ಸಿ. ಸುಬ್ಬಯ್ಯ, , ಶಾಂತರಾಮ್ ಕಾಮತ್, ಬಿ.ಬಿ. ಮಾದಪ್ಪ, ಪ್ರಥ್ವಿ ಮಾದಯ್ಯ ಸೇರಿದಂತೆ ವಲಯ 6 ರ ವಿವಿಧ ರೋಟರಿ ಕ್ಲಬ್‍ಗಳ ಪದಾಧಿಕಾರಿಗಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.