ಸೋಮವಾರಪೇಟೆ, ಜು.17: ‘ಮಳೆ’ನಾಡು ಕೊಡಗಿನಲ್ಲಿ ಪ್ರಸಕ್ತ ವರ್ಷ ಮಳೆಯ ಕಣ್ಣಾಮುಚ್ಚಾಲೆ ಮುಂದುವರೆದಿದ್ದು, ಕೃಷಿ ಕಾರ್ಯಕ್ಕೆ ತೀವ್ರ ಹಿನ್ನಡೆಯಾಗಿದೆ. ಗುಡ್ಡಗಾಡು ಭಾಗದಲ್ಲಿ ಕೃಷಿ ಕಾರ್ಯಗಳು ಒಂದಿಷ್ಟು ಚಟುವಟಿಕೆಯಿಂದ ಕೂಡಿದ್ದರೆ, ಸಮತಟ್ಟು ಪ್ರದೇಶದಲ್ಲಿ ಸ್ಥಗಿತಗೊಂಡಿದೆ. ಪರಿಣಾಮ ಅನ್ನದಾತರು ಮಳೆಯನ್ನು ಧರೆಗೆ ಆಹ್ವಾನಿಸುತ್ತಿದ್ದಾರೆ.ತಾಲೂಕಿನ ಗುಡ್ಡಗಾಡು ಪ್ರದೇಶವಾದ ಶಾಂತಳ್ಳಿ ಹೋಬಳಿ ಸೇರಿದಂತೆ ಪಶ್ಚಿಮ ಭಾಗದಲ್ಲಿ ಸಾಧಾರಣ ಮಳೆಯಾಗಿದ್ದು, ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ನಡೆಯುತ್ತಿದ್ದರೆ, ಪೂರ್ವ ಭಾಗದ ಸಮತಟ್ಟು ಪ್ರದೇಶವಾದ ಮದಲಾಪುರ, ಕೂಡಿಗೆ, ಯಲಕನೂರು, ಹುದುಗೂರು ಸೇರಿದಂತೆ ಇನ್ನಿತರ ಭಾಗದಲ್ಲಿ ಸಂಪೂರ್ಣ ಸ್ಥಗಿತಗೊಂಡಿದೆ.ಈ ವ್ಯಾಪ್ತಿಯಲ್ಲಿ ಸದ್ಯ ಮಳೆ ಮಾಯವಾಗಿದೆ. ಕಳೆದ 15 ದಿನಗಳ ಹಿಂದೆ ಸುರಿದ ಮಳೆಯಿಂದ ಹರ್ಷಗೊಂಡಿದ್ದ ಕೃಷಿಕರು ತಮ್ಮ ಗದ್ದೆ, ಹೊಲಗಳನ್ನು ಉಳುಮೆ ಮಾಡಿದ್ದರು. ಮಳೆಯನ್ನೇ ನಂಬಿಕೊಂಡು ಬಿತ್ತನೆಗೆ ಸಿದ್ಧತೆಯನ್ನೂ ಕೈಗೊಂಡಿದ್ದರು.

ಆದರೆ ಕಳೆದ ಒಂದು ವಾರದಿಂದ ಮಳೆ ಮಾಯವಾಗಿದ್ದು, ಉಳುಮೆ ಮಾಡಿರುವ ಗದ್ದೆಗಳು ಒಣಗುತ್ತಿವೆ. ಈ ಭಾಗದಲ್ಲಿ ಮುಸುಕಿನ ಜೋಳವನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದ್ದು, ಪ್ರಸಕ್ತ ವರ್ಷ (ಮೊದಲ ಪುಟದಿಂದ) ಹಲವಷ್ಟು ಗದ್ದೆಗಳನ್ನು ಇನ್ನೂ ಉಳುಮೆ ಮಾಡದೇ ಹಾಗೆಯೇ ಬಿಡಲಾಗಿದೆ.

ಇನ್ನು ಭತ್ತದ ಬೆಳೆಯನ್ನೂ ಈ ವ್ಯಾಪ್ತಿಯಲ್ಲಿ ಬೆಳೆಯಲಾಗುತ್ತಿದ್ದು, ಆರಂಭದ ಮಳೆಯಿಂದಾಗಿ ಗದ್ದೆಗಳಲ್ಲಿ ಸಸಿಮಡಿ ತಯಾರಿ ಮಾಡಲಾಗಿದೆ. ಆ ನಂತರದ ದಿನಗಳಲ್ಲಿ ಮಳೆ ಕಣ್ಮರೆಯಾದ ಹಿನ್ನೆಲೆ ಗದ್ದೆಗಳಲ್ಲಿ ಸಸಿಮಡಿಗಳು ಸೊರಗುತ್ತಿವೆ.

ಹಾರಂಗಿ ಜಲಾನಯನ ವ್ಯಾಪ್ತಿಗೆ ಬರುವ ಮದಲಾಪುರ, ಹುದುಗೂರು ಸೇರಿದಂತೆ ಸುತ್ತಮುತ್ತಲ ಪ್ರದೇಶದಲ್ಲಿ ಕೃಷಿ ಕಾರ್ಯ ಸದ್ಯ ಸ್ಥಗಿತಗೊಂಡಿದ್ದು, ಹಾರಂಗಿ ನಾಲೆಯ ನೀರಿಗಾಗಿ ಕಾಯುವಂತಾಗಿದೆ.

ಇನ್ನು ಒಂದು ವಾರದಲ್ಲಿ ಮಳೆ ಬರದೇ ಹೋದರೆ ಈ ಭಾಗದ ಕೃಷಿಕರ ಪಾಡು ಇನ್ನಷ್ಟು ಸಂಕಷ್ಟಕ್ಕೆ ಸಿಲುಕುವದು ಖಚಿತ. ಈಗಾಗಲೇ ಬೆಳೆಯುತ್ತಿರುವ ಸಸಿಮಡಿಗಳು ನಾಶವಾಗಲಿವೆ. ಗದ್ದೆಗಳು ಇನ್ನಷ್ಟು ಒಣಗಲಿದ್ದು, ಜೋಳದ ಕೃಷಿಯೂ ನೀರಿಲ್ಲದೆ ಸೊರಗಲಿದೆ. ನೀರಿನ ಸೌಲಭ್ಯವಿರುವ ಕೆಲ ರೈತರು ಸ್ಪಿಂಕ್ಲರ್ ಮೂಲಕ ಗದ್ದೆಗಳಿಗೆ ನೀರು ಹಾಯಿಸುತ್ತಿದ್ದು, ನೀರಿನ ಸೌಕರ್ಯ ಇಲ್ಲದ ರೈತರು ಆಗಸದತ್ತ ದೃಷ್ಟಿ ನೆಟ್ಟಿದ್ದಾರೆ.

ಹಾರಂಗಿ ಜಲಾನಯನ ವ್ಯಾಪ್ತಿಯಲ್ಲಿ 1800 ಹೆಕ್ಟೇರ್ ಕೃಷಿ ಭೂಮಿಯಿದ್ದು, ಈ ಭಾಗದ ರೈತರು ಹೆಚ್ಚು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮದಲಾಪುರ, ಹುದುಗೂರು, ಹೆಬ್ಬಾಲೆ, ತೊರೆನೂರು, ಶಿರಂಗಾಲ, ಕೂಡಿಗೆ ವ್ಯಾಪ್ತಿಯಲ್ಲಿ ಭತ್ತ ಮತ್ತು ಜೋಳವನ್ನು ಸಮಪ್ರಮಾಣದಲ್ಲಿ ಬೆಳೆಯಲಾಗುತ್ತಿದೆ.

ಇದೀಗ ಕೃಷಿ ಕಾರ್ಯಗಳಿಗೆ ಸಂಕ್ರಮಣ ಕಾಲವಾಗಿದ್ದು, ಮಳೆಯ ಆಗಮನದ ನಿರೀಕ್ಷೆ ಇಮ್ಮಡಿಯಾಗಿದೆ. ಮುಂದಿನ ಒಂದು ವಾರದೊಳಗೆ ಮಳೆಯಾಗದಿದ್ದರೆ ಈ ಭಾಗದ ಕೃಷಿ ಕ್ಷೇತ್ರಕ್ಕೆ ದೊಡ್ಡ ಹೊಡೆತ ಬೀಳಲಿದೆ. ಈಗಾಗಲೇ ಬಹುತೇಕ ರೈತರು ಸಸಿಮಡಿಗಳನ್ನು ತಯಾರಿಸಿದ್ದು, ಉಳುಮೆ ಮಾಡಿರುವ ಗದ್ದೆಯಲ್ಲಿ ನೀರು ಶೇಖರಣೆಗೊಳ್ಳುವದಕ್ಕೆ ಕಾಯುತ್ತಿದ್ದಾರೆ.

ಹಾರಂಗಿ ಜಲಾಶಯದಿಂದ ನಾಲೆಯ ಮೂಲಕ ನೀರು ಹರಿಯಬಿಟ್ಟರೆ ನಮ್ಮ ಕೃಷಿ ಉಳಿಯುತ್ತದೆ. ಮುಖ್ಯ ನಾಲೆಯಿಂದ ಕಿರುನಾಲೆಗಳ ಮೂಲಕ ನೀರು ಬಂದರೆ ಸಸಿಮಡಿಗಳನ್ನು ಉಳಿಸಿಕೊಂಡು, ಗದ್ದೆ ನಾಟಿ ಮಾಡಬಹುದಾಗಿದೆ. ಜಲಾಶಯದಿಂದ ನೀರು ಕೊಟ್ಟರೆ ಹೆಚ್ಚಿನ ಅನುಕೂಲವಾಗುತ್ತದೆ ಈ ಭಾಗದಲ್ಲಿ ಬಹುತೇಕ ರೈತರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದು, ಮುಂದಿನ ಒಂದು ವಾರದೊಳಗೆ ಮಳೆ ಬೀಳಬೇಕಿದೆ. ಹವಾಮಾನ ಇಲಾಖೆಯ ಅಂದಾಜಿನ ಪ್ರಕಾರ ಒಂದೆರಡು ದಿನದಲ್ಲಿ ಮಳೆಯಾಗುವ ಸಾಧ್ಯತೆಯಿದ್ದು, ಕೃಷಿ ಕ್ಷೇತ್ರ ಚೇತರಿಸಿಕೊಳ್ಳುವ ನಿರೀಕ್ಷೆಯಿದೆ ಎಂದು ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಡಾ. ರಾಜಶೇಖರ್ ತಿಳಿಸಿದ್ದಾರೆ. - ವಿಜಯ್ ಹಾನಗಲ್