ಚೆಟ್ಟಳ್ಳಿ, ಜು. 16: ಚೆಟ್ಟಳ್ಳಿ ಆರ್‍ಎಸ್‍ಎಸ್ ಶಾಖೆಯ ವತಿಯಿಂದ ಚೆಟ್ಟಳ್ಳಿ ಪಂಚಾಯಿತಿ ಸಭಾಂಗಣದಲ್ಲಿ ಸಂಜೆ 6 ಗಂಟೆಗೆ ಗುರುಪೂಜಾ ಉತ್ಸವ ನೆರವೇರಿತು.

ಮಂಗಳೂರು ವಿಭಾಗ ಸಂಘ ಚಾಲಕ ವಾದಿರಾಜ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ, ಸಮಾಜದಲ್ಲಿ ಇಂದು ಗುಲಾಮಿ ಮಾನಸಿಕತೆಯನ್ನು ಅಳವಡಿಸಿಕೊಳ್ಳುತ್ತಿದ್ದು, ಅದನ್ನು ಹೋಗಲಾಡಿಸಬೇಕೆಂದರು. ಹಿಂದೆ ವಿದೇಶಿಯರು ಭಾರತಕ್ಕೆ ತಕ್ಕಡಿ ಹಿಡಿದು ವ್ಯಾಪಾರಕ್ಕೆ ಬಂದವರು ನಂತರದಲ್ಲಿ ನಮ್ಮನ್ನೆ ಗುಲಾಮರನ್ನಾಗಿಸಿ ತಕ್ಕಡಿಯಲ್ಲಿ ತೂಗುವ ಪರಿಸ್ಥಿತಿ ನಿರ್ಮಾಣವಾಗಿತ್ತು. ಅಂದು ದೇಶಕ್ಕೋಸ್ಕರ ಪ್ರಾಣತೆತ್ತು ಹೋರಾಡಿದವ ರಿಂದ ಇಂದು ರಾಜಕೀಯ ಸ್ವಾತಂತ್ರ್ಯದೆಡೆಗೆ ಸಾಗುತ್ತಿದೆ. ಸ್ವಾಭಿಮಾನಿ ಸಮಾಜದ ಅವಶ್ಯಕತೆ ಇವೆ ಎಂಬ ಕಾರಣಕ್ಕಾಗಿ ಹಿಂದೂ ಸಮಾಜ, ಸಂಘಟನೆಯಾಗಬೇಕೆಂದು ಡಾ. ಕೇಶವ ಬಲಿರಾಂ ಹೆಗಡೆವಾರ್ ಅವರ ಕನಸಾಗಿತ್ತು ಎಂದರು. ಅದಕ್ಕಾಗಿ ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಸ್ಥಾಪಿಸಿ 92 ವರ್ಷಗಳಲ್ಲಿ ಇಂದು 59 ಸಾವಿರ ಶಾಖೆಯಿದ್ದು, ಗುರಿ, ಉದ್ದೇಶದೊಂದಿಗೆ ಸ್ವಯಂಸೇವಕರು ನಿತ್ಯವೂ ಸೇವೆ ಸಲ್ಲಿಸುತ್ತಾರೆ ಎಂದರು.

ಕ್ಯಾಪ್ಟನ್ ಮುಳ್ಳಂಡ ಪಿ. ತಿಮ್ಮಯ್ಯ ಮಾತನಾಡಿ, ವಿದ್ಯೆಗಿಂತ ದೇಶ ಸೇವೆ ಮುಖ್ಯ ಎಂದೆನಿಸಿ ಸೇನೆಗೆ ಸೇರಿ ಹಲವು ಯುದ್ಧದಲ್ಲಿ ಭಾಗವಹಿಸಿದೆ. ಶಿಸ್ತು, ಗುರಿ, ಉದ್ದೇಶ ಇದ್ದಾಗ ಮಾತ್ರ ಬದುಕಿನಲ್ಲಿ ಸಾಧಿಸಲು ಸಾಧ್ಯವೆಂದರು.

ಕಾರ್ಯಕ್ರಮದಲ್ಲಿ ಸಂಘದ ಕಾರ್ಯಕರ್ತರಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಸಂಘಟನೆಯ ಕಾರ್ಯಕರ್ತರು ಭಾಗವಹಿಸಿದ್ದರು.