ಸಿದ್ದಾಪುರ, ಜು. 16: ಹೆಚ್ 1ಎನ್1 ಸೋಂಕು ತಗುಲಿ ಸಾವನಪ್ಪಿದ ಸಿದ್ದಾಪುರದ ಟ್ಯಾಕ್ಸಿ ಚಾಲಕ ಪಿ.ಸಿ ರಾಜು ಅಂತ್ಯ ಕ್ರಿಯೆ ಮಂಗಳವಾರ ದಂದು ನಡೆಯಿತು. ಕಳೆದೆರಡು ವಾರಗಳ ಹಿಂದೆ ರಾಜು ಹೆಚ್1ಎನ್1 ಸೋಂಕು ತಗುಲಿದ್ದು ಈ ಹಿನ್ನೆಲೆಯಲ್ಲಿ ಸಿದ್ದಾಪುರ ಹಾಗೂ ಅಮ್ಮತ್ತಿಯಲ್ಲಿ ಚಿಕಿತ್ಸೆ ಪಡೆದು ಕೊಂಡಿದ್ದರು. ನಂತರ ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆಯುತ್ತಿದ್ದರು. ಚಿಕಿತ್ಸೆ ಫಲಕಾರಿ ಯಾಗದೆ ಸೋಮವಾರ ದಂದು ಸಾವನಪ್ಪಿದ್ದರು. ಮೃತರ ಅಂತ್ಯಕ್ರಿಯೆ ಸಿದ್ದಾಪುರದ ಹಿಂದು ರುದ್ರ ಭೂಮಿಯಲ್ಲಿ ನಡೆಯಿತು.
ಕಳೆದ 20 ವರ್ಷಗಳಿಂದ ಚಾಲಕನಾಗಿದ್ದು ಯಾವದೇ ಅಪಘಾತಗಳನ್ನು ಮಾಡದೇ ಇರುವ ಹಿನ್ನೆಲೆಯಲ್ಲಿ ರಾಜುವನ್ನು ಜಿಲ್ಲಾ ಕಾರು ಚಾಲಕರ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಗಿತ್ತು. ಆರ್ಥಿಕ ಸ್ಥಿತಿ ಹದಗೆಟ್ಟ ಹಿನ್ನೆಲೆಯಲ್ಲಿ ಆಸ್ಪತ್ರೆಯ ಖರ್ಚು ವೆಚ್ಚ ಭರಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಮೃತದೇಹವನ್ನು ಆಸ್ಪತ್ರೆಯಿಂದ ಮೃತರ ಕುಟುಂಬಕ್ಕೆ ಹಸ್ತಾಂತರಿಸಲು ತಡವಾಗಿತ್ತು ಎಂದು ತಿಳಿದುಬಂದಿದೆ.
ಪ್ರತಿಭಟನೆ: ಹೆಚ್1 ಎನ್1 ಗ್ರಾಮದಲ್ಲಿ ವ್ಯಕ್ತಿಯನ್ನು ಬಲಿತೆಗೆದು ಕೊಂಡಿದ್ದರೂ ಕೂಡ ಜಿಲ್ಲಾ ಆರೋಗ್ಯ ಇಲಾಖೆ ಹಾಗೂ ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರಗಳು ಯಾವದೇ ಮಾಹಿತಿ ನೀಡುವ ಕಾರ್ಯ ಕೈಗೊಳ್ಳದೆ, ಸಮಸ್ಯೆಯನ್ನು ಮರೆಮಾಚಿದ್ದಾರೆ. ಅಲ್ಲದೆ ಗ್ರಾಮದಲ್ಲಿ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದೇ, ನಿವಾಸಿಗಳಲ್ಲಿ ಜಾಗೃತಿ ಮೂಡಿಸುವ ಗೋಜಿಗೆ ಹೋಗದೇ ಆರೋಗ್ಯ ಇಲಾಖೆ ದಿವ್ಯ ಮೌನ ವಹಿಸಿದೆ ಎಂದು ಆರೋಪಿಸಿದ ಸ್ಥಳೀಯರು ಹಾಗೂ ಮೃತನ ಸಂಬಂಧಿಕರು, ಸಂಘ-ಸಂಸ್ಥೆಗಳು ನಡೆಸಿದರು.
ಜಿಲ್ಲಾ ಆರೋಗ್ಯ ಅಧಿಕಾರಿ ಸ್ಥಳಕ್ಕೆ ಭೇಟಿ ನೀಡಬೇಕೆಂದು ಪಟ್ಟು ಹಿಡಿದು ಘೋಷಣೆಯನ್ನು ಕೂಗಿದರು.
ಪ್ರತಿಭಟನಾಕಾರರ ಒತ್ತಾಯಕ್ಕೆ ಮಣಿದು ಸ್ಥಳಕ್ಕೆ ಭೇಟಿ ನೀಡಿ ಪ್ರತಿಭಟನಾಕಾರರೊಂದಿಗೆ ಮಾತನಾಡಿದ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಮೋಹನ್ ಮುಂದಿನ ದಿನಗಳಲ್ಲಿ ಸಿದ್ದಾಪುರ ವ್ಯಾಪ್ತಿಯಲ್ಲಿ ಸಾಂಕ್ರಾಮಿಕ ರೋಗ ತಪಾಸಣೆ ಶಿಬಿರವನ್ನು ಹಮ್ಮಿಕೊಳ್ಳುವದಾಗಿ ಮಾಹಿತಿ ನೀಡಿದರು. ಸಿದ್ದಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹೆಚ್ಚುವರಿ ವೈದ್ಯರು, ತುರ್ತು ಚಿಕಿತ್ಸಾ ವಾಹನ, ವಿದ್ಯುತ್ ಇತ್ಯಾದಿ ಸಮಸ್ಯೆ ಗಳನ್ನು ಈಗಾಗಲೇ ಪರಿಹರಿಸಲಾಗಿದೆ ಎಂದರು.
ಸಾರ್ವಜನಿಕರಲ್ಲಿ ಆತಂಕ ಸೃಷ್ಟಿ ಮಾಡಿದ ಪ್ರಕರಣ ನಡೆದರೂ ಕೂಡ ಸ್ಥಳೀಯ ಗ್ರಾ.ಪಂ. ಗ್ರಾಮದಲ್ಲಿ ಯಾವದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳಲಿಲ್ಲ ಹಾಗೂ ಜಾಗೃತಿ ಮೂಡಿಸಲಿಲ್ಲ ಎಂದು ಆರೋಪಿಸಿ ಸಿದ್ದಾಪುರ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಯನ್ನು ಪ್ರತಿಭಟನಾಕಾರರು ತರಾಟೆಗೆ ತೆಗೆದುಕೊಂಡರು.