ಸುಂಟಿಕೊಪ್ಪ, ಜ. 16: ಗದ್ದೆಹಳ್ಳ ಬಸ್ ನಿಲ್ದಾಣದಲ್ಲಿ ಪುಂಡ ಪೋಕರಿಗಳ ಹಾವಳಿ ಹೆಚ್ಚಾಗಿದ್ದು ಮಹಿಳೆಯರು, ವಿದ್ಯಾರ್ಥಿನಿಯರು ನಿಲ್ಲದಂತಹ ಪರಿಸ್ಥಿತಿ ಎದುರಾಗಿದೆ.

ಪ್ರತಿದಿನ ಬೆಳಿಗ್ಗೆ ಮತ್ತು ಸಂಜೆ ವೇಳೆ ಈ ಭಾಗದಲ್ಲಿ ಯುವಕರ ಗುಂಪು ಬಸ್ ತಂಗುದಾಣದಲ್ಲಿ ಮೊಬೈಲ್‍ನಲ್ಲಿ ಆಟವಾಡುತ್ತಾ, ಧೂಮಪಾನ ಮಾಡುತ್ತಾ, ಬೊಬ್ಬೆ ಕೇಕೇ ಹಾಕುತ್ತಾ ಕಿರಿಕಿರಿ ಉಂಟುಮಾಡುತ್ತಿದ್ದಾರೆ. ಮಳೆ ಬಂದಾಗ ರಕ್ಷಣೆ ಪಡೆಯಲು ತಂಗುದಾಣದೊಳಗೆ ಮಹಿಳೆಯರು, ಯುವತಿಯರು ಬಂದರೆ ಅವರನ್ನು ಚುಡಾಯಿಸುತ್ತಿದ್ದಾರೆ ಎಂದು ಗ್ರಾಮಸ್ಥರು ಆರೋಪಿಸಿದ್ದಾರೆ. ತಂಗುದಾಣದ ಅಕ್ಕಪಕ್ಕದಲ್ಲಿರುವ ಮನೆಯವರಿಗೂ ಇದರಿಂದ ತೊಂದರೆ ಉಂಟಾಗಿದೆ. ಅಲ್ಲದೇ ಇಲ್ಲಿನ ಮಾರುಕಟ್ಟೆ ರಸ್ತೆಯಲ್ಲಿರುವ ಸರ್ಕಾರಿ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ಜನತಾ ಕಾಲೋನಿಯ ಯುವಕನೊಬ್ಬ ಮದ್ಯಪಾನ ಮಾಡಿ ಕಲ್ಲಿನಿಂದ ಹೊಡೆಯುತ್ತಾ ತೊಂದರೆ ನೀಡುತ್ತಿದ್ದಾನೆ. ಕೂಡಲೇ ಪೊಲೀಸ್ ಇಲಾಖೆ ಕ್ರಮ ಕೈಗೊಂಡು ಪುಂಡ ಪೋಕರಿಗಳ ಹಾವಳಿಯನ್ನು ತಪ್ಪಿಸುವಂತೆ ಈ ಭಾಗದ ಗ್ರಾಮಸ್ಥರು ಮನವಿ ಮಾಡಿಕೊಂಡಿದ್ದಾರೆ. - ರಾಜು ರೈ