ಚೆಟ್ಟಳ್ಳಿ, ಜು. 15: ಕೊಡಗಿನಲ್ಲಿ ಮಳೆ ಇಲ್ಲದೆ ರೈತರು ಕಂಗಾಲಾಗಿರುವ ಹಿನ್ನೆಲೆಯಲ್ಲಿ ಚೆಟ್ಟಳ್ಳಿಯ ಜನಪರ ಹೋರಾಟ ಸಮಿತಿಯ ಸಂಚಾಲಕ ತಾಲೂಕು ಪಂಚಾಯಿತಿ ಸದಸ್ಯ ಹಾಗೂ ಚೆಟ್ಟಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಬಲ್ಲಾರಂಡ ಮಣಿಉತ್ತಪ್ಪ ಮಳೆ ದೇವರಾದ ಪಾಡಿ ಇಗ್ಗುತಪ್ಪ ನೆಲೆಯಲ್ಲಿ ಮಳೆಗಾಗಿ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿದರು. ಮಧ್ಯಾಹ್ನ 1ಗಂಟೆಗೆ ಭಾಗಮಂಡಲದ ಭಗಂಡೇಶ್ವರ ನೆಲೆಯಲ್ಲಿ ಪ್ರಾರ್ಥಿಸಿ ನಂತರ2.30ಕ್ಕೆ ಕೊಡಗಿನ ಕುಲದೇವಿ ತಲಕಾವೇರಿಯ ಮೂಲ ನೆಲೆಗೆ ತೆರಳಿ ಪೂಜೆ ಸಲ್ಲಿಸಿ ಉರುಳು ಸೇವೆ ಮಾಡಿದರು.
ಈ ಸಂದರ್ಭ ಚೆಟ್ಟಳ್ಳಿ ಸಹಕಾರ ಸಂಘದ ಆಡಳಿತ ಮಂಡಳಿ ಸದಸ್ಯರು, ಸಿಬ್ಬಂದಿಗಳು ಹಾಗೂ ಸ್ಥಳೀಯರು ಹಾಜರಿದ್ದರು. ಉತ್ತಮ ಮಳೆಯಾಗಿ ರೈತರ ಸಂಕಷ್ಟ ದೂರವಾಗಬೇಕೆಂದು ಪ್ರಾರ್ಥಿಸಿದ್ದಾಗಿ ಮಣಿ ಉತ್ತಪ್ಪ ತಿಳಿಸಿದರು.