ಯಡಿಯೂರಪ್ಪ ಇಲ್ಲಿಗೆ:ಸಂತೋಷ್ ಜೀ ದಿಲ್ಲಿಗೆ
ಬೆಂಗಳೂರು, ಜು. 15: ಸಂಘಪರಿವಾರದಿಂದ ಪಕ್ಷದ ಕೆಲಸಕ್ಕಾಗಿ ನಿಯೋಜಿತರಾಗಿದ್ದ ಸಂತೋಷ್ ಅವರನ್ನು ಇದೀಗ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಯನ್ನಾಗಿ ನೇಮಕ ಮಾಡಲಾಗಿದ್ದು, ಆ ಮೂಲಕ ಯಡಿಯೂರಪ್ಪ ಇಲ್ಲಿಗೆ, ಸಂತೋಷ್ ದಿಲ್ಲಿಗೆ ಎಂಬ ಸೂತ್ರ ಜಾರಿಗೆ ಬಂದಿದೆ.
ಇದುವರೆಗೆ ಸಂಘಟನೆಯ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಯಾಗಿದ್ದ ರಾಮಲಾಲ್ ಅವರನ್ನು ಸಂಘಪರಿವಾರದ ಕೆಲಸಕ್ಕಾಗಿ ವಾಪಸ್ ಕರೆಸಲಾಗಿದ್ದು, ಇದರಿಂದ ತೆರವಾದ ಸ್ಥಾನವನ್ನು ಸಂತೋಷ್ ಅವರಿಗೆ ನೀಡುವ ಮೂಲಕ ಬಿಜೆಪಿಯ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಷಾ ಒಂದೇ ಕಲ್ಲಿಗೆ ಎರಡು ಹಕ್ಕಿ ಹೊಡೆದಿದ್ದಾರೆ.
ಇದುವರೆಗೂ ಸಂಘಟನೆಯ ಜಂಟಿ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯ ನಿರ್ವಹಿಸುತ್ತಿದ್ದ ಸಂತೋಷ್ ಅವರನ್ನು ಇದೀಗ ರಾಮಲಾಲ್ ಅವರ ಜಾಗಕ್ಕೆ ನೇಮಕ ಮಾಡಿರುವ ಅಮಿತ್ ಷಾ, ಆ ಮೂಲಕ ಕರ್ನಾಟಕದ ರಾಜಕೀಯ ಚಿತ್ರ ಬದಲಾಗಲಿದೆ ಎಂಬ ಸ್ಪಷ್ಟ ಸಂದೇಶ ನೀಡಿದ್ದಾರೆ.
ಮೊದಲನೆಯದಾಗಿ, ಕೈ ಚಳಕದ ಲಾಭ ಪಡೆದು ತಾವಾಡುತ್ತಿರುವ ಆಟ ಗುರಿ ತಲಪಲಿದೆ ಎಂಬದನ್ನು ನಿಕ್ಕಿಮಾಡಿಕೊಂಡಿರುವ ಅಮಿತ್ ಷಾ, ಅದೇ ಕಾಲಕ್ಕೆ ಸಿಎಂ ಹುದ್ದೆಯ ಮೇಲೆ ಬಂದು ಕೂರುವ ಯಡಿಯೂರಪ್ಪ ಅವರಿಗೆ ಯಾವ ಅಡ್ಡಿಯೂ ಆಗಬಾರದು ಎಂಬ ಕಾರಣಕ್ಕಾಗಿ ಸಂತೋಷ್ ಅವರನ್ನು ದಿಲ್ಲಿ ನೆಲೆಗೆ ತಲಪಿಸಿದ್ದಾರೆ.
ರಾಜ್ಯ ಬಿಜೆಪಿಯಲ್ಲಿ ಯಡಿಯೂರಪ್ಪ ಹಾಗೂ ಸಂತೋಷ್ ಪಾರಂಪರಿಕ ಎದುರಾಳಿಗಳಂತಾಗಿದ್ದು, ಸಮ್ಮಿಶ್ರ ಸರ್ಕಾರ ಬೀಳಿಸಿ ಯಡಿಯೂರಪ್ಪ ಮುಖ್ಯಮಂತ್ರಿಯಾದ ಮೇಲೂ ಸಂತೋಷ್ ಇಲ್ಲೇ ಇದ್ದರೆ ರಾಜ್ಯ ಬಿಜೆಪಿಯಲ್ಲಿ ಮತ್ತೆ ಭಿನ್ನಮತ ಎಂಬುದು ಅಮಿತ್ ಷಾ ಲೆಕ್ಕಾಚಾರ.
ಹಿಂದಿನಿಂದಲೂ ಸಂತೋಷ್ ಅವರನ್ನು ವಿರೋಧಿಸುತ್ತಲೇ ಬಂದಿದ್ದ ಯಡಿಯೂರಪ್ಪ ಹಲವು ಬಾರಿ ಪಕ್ಷದ ವರಿಷ್ಠರ ಬಳಿ ಸಂತೋಷ್ ಅವರ ವಿರುದ್ಧ ತಕರಾರು ತೆಗೆದುಕೊಂಡು ಹೋಗುತ್ತಲೇ ಇದ್ದರು. ಈಶ್ವರಪ್ಪ ಅವರ ನೇತೃತ್ವದಲ್ಲಿ ಸಂಗೊಳ್ಳಿ ರಾಯಣ್ಣ ಬ್ರಿಗೇಡ್ ತಲೆ ಎತ್ತುವಾಗ ಸಂತೋಷ್ ಅವರಿಂದ ಪರೋಕ್ಷ ಬೆಂಬಲವಿತ್ತು. ಆ ಸಂದರ್ಭ ಹೈಕಮಾಂಡ್ನಿಂದ ಅರುಣ್ಕುಮಾರ್ ಅವರನ್ನು ಕಳಿಸಲಾಗಿತ್ತಾದರೂ, ಅವರು ನಿರೀಕ್ಷಿತ ಮಟ್ಟದಲ್ಲಿ ಅವರು ಕಾರ್ಯನಿರ್ವಹಿಸಲಿಲ್ಲ.
ಈ ಮಧ್ಯೆ ಸದ್ಯದ ಆಪರೇಷನ್ ಕಮಲ ಕಾರ್ಯಾಚರಣೆ ಯಶಸ್ವಿಯಾಗುವ ಲಕ್ಷಣಗಳು ಕಂಡು ಬರುತ್ತಿದ್ದಂತೆಯೇ ಯಡಿಯೂರಪ್ಪ ಅವರು, ರಾಜ್ಯದಲ್ಲಿ ನೇತೃತ್ವ ವಹಿಸಬೇಕಾದ ಹಿನ್ನೆಲೆ ಸಂತೋಷ್ ಅವರನ್ನು ಇಲ್ಲಿಂದ ದಿಲ್ಲಿಗೆ ಕಳುಹಿಸಲಾಗುತ್ತಿದೆ ಎನ್ನಲಾಗಿದೆ. ಯಡಿಯೂರಪ್ಪ ಅವರ ಸತತ ವಾದ ಹಾಗೂ ತಾವೇ ತರಿಸಿದ ವರದಿಯ ಆಧಾರದ ಮೇಲೆ ವಿರುದ್ಧ ಧ್ರುವಗಳಂತಿರುವ ಯಡಿಯೂರಪ್ಪ ಹಾಗೂ ಸಂತೋಷ್ ಒಂದೇ ಕಡೆ ಇರುವದು ಭಿನ್ನಮತಕ್ಕೆ ಕಾರಣವಾಗುತ್ತದೆ ಎಂಬ ನಿರ್ಧಾರಕ್ಕೆ ಅಮಿತ್ ಬಂದಿದ್ದಾರೆ.