ಮಡಿಕೇರಿ, ಜು. 14: ಕೊಡಗು ಜಿಲ್ಲೆಯಲ್ಲಿ ವರ್ಷದಿಂದ ವರ್ಷಕ್ಕೆ ಗ್ರಾಮೀಣ ಪ್ರದೇಶಗಳಲ್ಲಿ ಮಕ್ಕಳ ಸಂಖ್ಯೆ ಇಳಿಮುಖಗೊಂಡು; ವಿದ್ಯಾರ್ಥಿಗಳ ಕೊರತೆಯಿಂದ ಸರಕಾರಿ ಶಾಲೆಗಳು ಬಾಗಿಲು ಮುಚ್ಚಿ ಕೊಳ್ಳುವಂತಾಗಿದೆ. ಕಳೆದ ಶೈಕ್ಷಣಿಕ ವರ್ಷವೊಂದರಲ್ಲಿಯೇ ಕೊಡಗಿನ ಹನ್ನೊಂದು ಸರಕಾರಿ ಶಾಲೆಗಳು ಪ್ರಾಕೃತಿಕವಿಕೋಪದ ಕಾರಣ ದೊಂದಿಗೆ ಬಾಗಿಲಿಗೆ ಬೀಗ ಹಾಕಿಕೊಂಡಿವೆ.2018-19ನೇ ವರ್ಷದಲ್ಲಿ ಮಡಿಕೇರಿ ತಾಲೂಕಿನ 2ನೇ ಮೊಣ್ಣಂಗೇರಿ, ಮದೆ, ಅರೆಕಲ್ಲು ಶಾಲೆಗಳು ಮಕ್ಕಳಿಲ್ಲದೆ ಮುಚ್ಚಿ ಹೋಗಿವೆ. ಇನ್ನು ಸೋಮವಾರಪೇಟೆ ತಾಲೂಕಿನ ಹಂಡ್ಲಿಯ ಮುಳ್ಳೂರು ಕಾಲೋನಿ ಶಾಲೆ, ಮಾದಾಪುರ ಸಮೀಪದ ಗರ್ವಾಲೆ ಹಿರಿಯ ಪ್ರಾಥಮಿಕ ಶಾಲೆ, ದೊಡ್ಡಮನೆ ಸರಕಾರಿ ಶಾಲೆ, ಶಾಂತಳ್ಳಿ ವ್ಯಾಪ್ತಿಯ ಕೊಪ್ಪ, ದೊಡ್ಡತೋಳೂರು, ಕುಮಾರಳ್ಳಿ, ಗೌಡಳ್ಳಿಯ ಹಿರಿಕರ ಶಾಲೆಗಳು ಮುಚ್ಚಿದ್ದಾಗಿದೆ.ಅಂತೆಯೇ ನಂಜರಾಯ ಪಟ್ಟಣದ ವ್ಯಾಪ್ತಿಯಲ್ಲಿ ಅತ್ತೂರು ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ವೀರಾಜಪೇಟೆ ತಾಲೂಕು ಚನ್ನನ ಕೋಟೆ ವ್ಯಾಪ್ತಿಯ ಮಾರ್ಗೊಲ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಬಂದ್ ಆಗಿ ಹೋಗಿವೆ.
2017-2018: ಈ ಹಿಂದಿನ ಸಾಲಿನಲ್ಲಿ ಮಡಿಕೇರಿ ತಾಲೂಕಿನಲ್ಲಿ ಭಾಗಮಂಡಲ ಸಮೀಪದ ಕೊಪ್ಪದ ಬಾಣೆ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ, ಚೇರಂಬಾಣೆ ಸಮೀಪದ ಅರ್ವತ್ತೊಕ್ಲುವಿನ ಕಿರಿಯ ಪ್ರಾಥಮಿಕ ಶಾಲೆ, ಸಂಪಾಜೆ ವ್ಯಾಪ್ತಿಯ ಕಲ್ಲಳ್ಳ ಪ್ರಾಥಮಿಕ ಶಾಲೆ ಸ್ಥಗಿತಗೊಂಡಿವೆ.
ಸೋಮವಾರಪೇಟೆ ತಾಲೂಕು: ಇದೇ ಅವಧಿಗೆ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆ ವ್ಯಾಪ್ತಿಯ ಕೆಳಕೊಡ್ಲಿ ಸರಕಾರಿ ಕಿರಿಯ ಪ್ರಾಥಮಿಕ ಶಾಲೆಯೊಂದಿಗೆ; ಶಾಂತಳ್ಳಿ ವ್ಯಾಪ್ತಿಯ ಮಲ್ಲಿಕಾರ್ಜುನ ಹಿರಿಯ ಪ್ರಾಥಮಿಕ ಶಾಲೆ, ಕುಂದಳ್ಳಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಯೊಂದಿಗೆ,
(ಮೊದಲ ಪುಟದಿಂದ) ಶಾಂತಳ್ಳಿಯ ಖಾಸಗಿ ಶಿಕ್ಷಣ ಸಂಸ್ಥೆಯ ಪ್ರಸಾದ್ ಪ್ರೌಢಶಾಲೆ ಮುಚ್ಚಿ ಹೋಗಿವೆ.
2016-2017ನೇ ವರ್ಷ: ಈ ಶೈಕ್ಷಣಿಕ ವರ್ಷದಲ್ಲಿ ಜಿಲ್ಲೆಯ ನಾಲ್ಕು ಶಾಲೆಗಳು ಮುಚ್ಚಿ ಹೋಗಿವೆ. ಆ ಪೈಕಿ ಮಡಿಕೇರಿ ತಾಲೂಕಿನ ಹಮ್ಮಿಯಾಲ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಜಿಲ್ಲಾ ಕೇಂದ್ರ ಮಡಿಕೇರಿ ಭಗವತಿ ನಗರದ ಕಿರಿಯ ಪ್ರಾಥಮಿಕ ಶಾಲೆ ಬಂದ್ ಆಗಿವೆ. ಅಲ್ಲದೆ ಸೋಮವಾರಪೇಟೆ ತಾಲೂಕಿನ ಹಂಡ್ಲಿ ಪಕ್ಕದ ಹಿತ್ತಲಕೇರಿ ಹಾಗೂ ಬಾಚಳ್ಳಿ ಅಬ್ಬಿಮಠ ಸರಕಾರಿ ಶಾಲೆಗಳು ಮುಚ್ಚಲಾಗಿವೆ.
ಆ ಹಿಂದೆ ಸೋಮವಾರಪೇಟೆ ತಾಲೂಕಿನ ಹಂಡ್ಲಿ ವ್ಯಾಪ್ತಿಯ ಮನಗಳ್ಳಿ ಹಾಗೂ ಕೂತಿ ಸರಕಾರಿ ಶಾಲೆಗಳು ಮುಚ್ಚಿದ್ದು, ಆ ಮುನ್ನ ಗೋಣಿಕೊಪ್ಪಲು ಸರಕಾರಿ ಹಿರಿಯ ಪ್ರಾಥಮಿಕ ಶಾಲೆ, ಕುಂಜಿಲಗೇರಿ ಕಿರಿಯ ಪ್ರಾಥಮಿಕ ಶಾಲೆ, ಮಡಿಕೇರಿ ಸಮೀಪದ ಒಂದನೇ ಮೊಣ್ಣಂಗೇರಿ ಶಾಲೆ, ಬಾಳೆಲೆಯ ಕೊಲ್ಲಿಹಾಡಿ ಶಾಲೆ, ಮಾಯಮುಡಿ ಪಕ್ಕದ ಮರಿಯಮ್ಮನ ಕಾಲೋನಿಯ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಮುಚ್ಚಿದ್ದಾಗಿದೆ. ಹೀಗೆ ವರ್ಷದಿಂದ ವರ್ಷಕ್ಕೆ ಆರೆಂಟು ವರ್ಷದೊಳಗೆ 29 ಶಾಲೆಗಳು ಇತಿಹಾಸದ ಪುಟ ಸೇರುವಂತಾಗಿದೆ.
ಸಂಖ್ಯೆ ಇಳಿಕೆ: ಸಾರ್ವಜನಿಕ ಶಿಕ್ಷಣ ಇಲಾಖೆಯ ಲೆಕ್ಕಾಚಾರ ಪ್ರಕಾರ ಜಿಲ್ಲೆಯಲ್ಲಿ ಗ್ರಾಮೀಣ ಜನಸಂಖ್ಯೆ ಇಳಿಮುಖದೊಂದಿಗೆ ಮಕ್ಕಳ ಸಂಖ್ಯೆ ಕಡಿಮೆಯಾಗುತ್ತಿದ್ದು, ಅನಿವಾರ್ಯ ವಾಗಿ ಖಾಸಗಿ ಶಾಲೆಗಳತ್ತ ಮುಖ ಮಾಡಿದ್ದಾಗಿದೆ.
ಹಾಜರಾತಿ ಇಳಿಕೆ: 2010-11ನೇ ಸಾಲಿಗೆ ಜಿಲ್ಲೆಯಲ್ಲಿ 91,708 ಮಕ್ಕಳು ಸರಕಾರಿ ಶಾಲೆಗಳಲ್ಲಿ ದಾಖಲಾಗಿದ್ದು, ಅನಂತರದಲ್ಲಿ 89,689 ಹಾಜರಾತಿ ತಲಪಿದೆ. 2012-13ಕ್ಕೆ 87,413 ಹಾಗೂ ಬಳಿಕ 84,139ಕ್ಕೆ ಇಳಿದಿದೆ. 2014-15ನೇ ಸಾಲಿನಲ್ಲಿ 83,928 ಮಕ್ಕಳು, ಅನಂತರದ ವರ್ಷ 2,406ಕ್ಕೆ ಮಕ್ಕಳ ಇಳಿಮುಖ ಗೋಚರಿಸಿದೆ.
ಮೂರು ವರ್ಷಗಳ ಹಿಂದೆ ಶೈಕ್ಷಣಿಕ ವರ್ಷಕ್ಕೆ 80,676 ಮಕ್ಕಳಿದ್ದರೆ, ಹಿಂದಿನ ವರ್ಷ ಈ ಸಂಖ್ಯೆ 78,141ಕ್ಕೆ ಕುಸಿದಿದೆ. ಪ್ರಸಕ್ತ ಶೈಕ್ಷಣಿಕ ಪ್ರವೇಶಾತಿ ಸಂದರ್ಭ ಜಿಲ್ಲೆಯಲ್ಲಿ ಮಕ್ಕಳ ಸಂಖ್ಯೆ 76,430ಕ್ಕೆ ತಲಪಿದೆ. ಕೇವಲ ಎಂಟು ಶೈಕ್ಷಣಿಕ ವರ್ಷಗಳಲ್ಲಿ ಕೊಡಗಿನಲ್ಲಿ ಸರಿಸುಮಾರು 15,278 ಮಕ್ಕಳ ಇಳಿಮುಖ ಗೋಚರಿಸಿದೆ.
ಮಚ್ಚಾಡೋ ಅಚ್ಚರಿ: ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಮಚ್ಚಾಡೋ ಅವರೇ ಹೇಳುವಂತೆ, ತಾವು ಈ ಹಿಂದೆ ಜಿಲ್ಲೆಯಲ್ಲಿ ಕೆಲಸ ನಿರ್ವ ಹಿಸಿದ್ದು, ಕೇವಲ ಆರೆಂಟು ವರ್ಷಗಳ ಅಂತರದಲ್ಲಿ ಸುಮಾರು 30 ಸಾವಿರದಷ್ಟು ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿರುವದು ಅರಿವಿಗೆ ಬಂದಿರುವದಾಗಿ ಪ್ರತಿಕ್ರಿಯಿ ಸಿದ್ದಾರೆ.
ಒಂದು ವೇಳೆ ಹೆತ್ತವರು ಸರಕಾರಿ ಶಾಲೆಗಳನ್ನು ಹೊರತಾಗಿ, ತಮ್ಮ ಮಕ್ಕಳನ್ನು ಖಾಸಗಿ ಶಾಲೆಗಳಿಗೆ ಸೇರಿಸುತ್ತಿದ್ದರೂ, ಖಾಸಗಿ ಶಾಲೆಗಳ ಮಕ್ಕಳ ಸಂಖ್ಯೆ ಏರಿಕೆಯಾಗಬೇಕಿತ್ತು ಎಂದು ಪ್ರಶ್ನೆ ಮುಂದಿಟ್ಟಿದ್ದಾರೆ. ಇದೊಂದು ಅಚ್ಚರಿ ಹಾಗೂ ಆತಂಕದ ಬೆಳವಣಿಗೆ ಎಂದು ಅಭಿಪ್ರಾಯಪಟ್ಟಿದ್ದಾರೆ.
-ಶ್ರೀಸುತ