ಮಡಿಕೇರಿ, ಜು. 14: ಕೊಡಗು ಜಿಲ್ಲೆಯಲ್ಲಿ ಮಳೆಗಾಲ ಎದುರಿಸುವ ದಿಸೆಯಲ್ಲಿ; ಮುಂಜಾಗ್ರತಾ ಕ್ರಮವಾಗಿ ಹೆಚ್ಚುವರಿ ‘ಲೈನ್ಮೆನ್’ಗಳನ್ನು ರಾಜ್ಯ ಸರಕಾರದಿಂದ ನಿಯೋಜಿಸಿರುವ ಬಗ್ಗೆ ‘ಚೆಸ್ಕಾಂ’ ಅಧಿಕಾರಿಗಳೇ ಹೇಳಿಕೆ ನೀಡಿದ್ದರೂ; ಎಲ್ಲಿಯೂ ಈ ಸಿಬ್ಬಂದಿ ಕಾಣುತ್ತಿಲ್ಲ. ಇಂತಹ ಸಿಬ್ಬಂದಿ ಹೆಸರಿನಲ್ಲಿ ಲೆಕ್ಕ ತೋರಿಸಿ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳು ಹಣ ದುರುಪಯೋಗದಲ್ಲಿ ತೊಡಗಿದ್ದಾರೆ ಎಂದು ಬಾಳೆಲೆ ಗ್ರಾಮಸ್ಥರು ಆರೋಪಿಸಿದ್ದಾರೆ.ಬಾಳೆಲೆ ಗ್ರಾಮ ಪಂಚಾಯಿತಿಯಲ್ಲಿ ತಾ. 11 ರಂದು ಜಿ.ಪಂ. ಅಧ್ಯಕ್ಷ ಬಿ.ಎ. ಹರೀಶ್ ಸಮ್ಮುಖ ಜರುಗಿದ ಸಾರ್ವಜನಿಕ ಕುಂದು ಕೊರತೆ ಸಭೆಯಲ್ಲಿ ಅಡ್ಡೇಂಗಡ ಅರುಣ್ ಹಾಗೂ ರಾಖೇಶ್ ಮತ್ತಿತರರು ಮೇಲಿನ ಗಂಭೀರ ಆರೋಪ ಮಾಡಿದರು. ಬಾಳೆಲೆ ವ್ಯಾಪ್ತಿಯಲ್ಲಿ ಗಿರಿಜನ ಹಾಡಿಗಳು ಸೇರಿದಂತೆ ಇತರೆಡೆ ವಿದ್ಯುತ್ ಸಮಸ್ಯೆಯಿಂದ ಕುಡಿಯುವ ನೀರಿಗೂ ತೊಂದರೆ ಆಗಿದೆ ಎಂದು ಗಮನ ಸೆಳೆದರು. ಕೇಂದ್ರ ಸರಕಾರದ ಸೌಭಾಗ್ಯ ವಿದ್ಯುತ್ ಯೋಜನೆ ಇನ್ನೂ ಜನತೆಗೆ ಈ ಅಧಿಕಾರಿಗಳಿಂದ ತಲಪಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.ಬಿಸಿಯೂಟಕ್ಕೂ ತೊಂದರೆ : ಮಧ್ಯಾಹ್ನದ ವೇಳೆಯಲ್ಲಿ ಈ ವ್ಯಾಪ್ತಿಯ ಶಾಲೆಗಳಲ್ಲಿ ಮಕ್ಕಳಿಗೆ ಬಿಸಿ ಊಟಕ್ಕೂ ನೀರಿಲ್ಲದೆ
(ಮೊದಲ ಪುಟದಿಂದ) ಮೂರು ದಿನ ತೊಂದರೆ ಅನುಭವಿಸ ಬೇಕಾಯಿತು ಎಂದು ಸಭೆಯಲ್ಲಿ ವಿದ್ಯಾರ್ಥಿಗಳ ಪೋಷಕರು ಎದುರಾಗಿದ್ದ ಈ ಸಂಕಷ್ಟಕ್ಕಾಗಿ ಚೆಸ್ಕಾಂ ಅಧಿಕಾರಿಯನ್ನು ವರ್ಗಾಯಿಸ ಬೇಕೆಂದು ಸಭೆಯಲ್ಲಿ ಆಗ್ರಹ ಕೇಳಿಬಂತು.
ಗ್ರಾ.ಪಂ. ಸದಸ್ಯ ಸುಖೇಶ್ ಭೀಮಯ್ಯ, ಜಿ.ಪಂ. ಮಾಜಿ ಸದಸ್ಯ ರಂಜನ್ ಚಂಗಪ್ಪ ಮತ್ತಿತರರು ವಿದ್ಯುತ್ ಸಮಸ್ಯೆಯಿಂದ ಬ್ಯಾಂಕ್ ಕೂಡ ಕಾರ್ಯನಿರ್ವಹಿಸದಾಗಿದೆ ಎಂದು ಬೊಟ್ಟು ಮಾಡಿದರು.
ರೈತರಿಗೆ ತೊಂದರೆ: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಜಿಲ್ಲೆಯ ರೈತರಿಗೆ ತೊಂದರೆಯಾಗಿದೆ; ಜಮ್ಮಾಭೂಮಿಯ ಜಂಟಿ ಖಾತೆಯಿಂದಾಗಿ; ಅನೇಕರಿಗೆ ನೆರವು ಲಭಿಸುತ್ತಿಲ್ಲ ಎಂದು ಗಮನ ಸೆಳೆದರು. ಗದ್ದೆ ಇಲ್ಲದ ಸಣ್ಣ ಕೃಷಿಕರಿಗೆ ಭೂ ಕಂದಾಯ ದಾಖಲೆಯ (ಆರ್ಟಿಸಿ) ಕೊರತೆಯಿಂದ ಯಾವ ಸೌಲಭ್ಯ ದೊರಕದಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.
ಗಾಂಜಾದಂಧೆ : ಬಾಳೆಲೆ ಸುತ್ತಮುತ್ತ ಯುವಕರನ್ನು ಗಾಂಜಾದಂಧೆ ಮೂಲಕ ದಿಕ್ಕು ತಪ್ಪಿಸಲಾಗುತ್ತಿದ್ದು; ದಂಧೆಕೋರರು ಹೆಗ್ಗಡದೇವನಕೋಟೆ ಹಾಗೂ ಇತರೆಡೆಗಳಿಂದ ಗಾಂಜಾ ತರುತ್ತಿರುವದಾಗಿ ಗ್ರಾಮಸ್ಥರು ಗಂಭೀರ ಆರೋಪಿಸಿದರು. ಈ ಬಗ್ಗೆ ಪ್ರತಿಕ್ರಿಯಿಸಿದ ಪೊಲೀಸರು; ಕೆಲವೆಡೆ ನಾಗರಿಕರು ದಂಧೆಕೋರರ ಕೃತ್ಯವನ್ನು ಬೆಂಬಲಿಸುತ್ತಿದ್ದಾರೆ ಎಂದು ದೂಷಿಸಿದರು. ಈ ವೇಳೆ ಕೆರಳಿದ ಗ್ರಾಮಸ್ಥರು ಅಕ್ರಮ ಚಟುವಟಿಕೆ ಯಾರೇ ನಡೆಸಿದರೂ ಕಾನೂನು ಕ್ರಮ ಜರುಗಿಸಿ ಎಂದು ಪಟ್ಟು ಹಿಡಿದರು.
ಅಪರಿಚಿತ ಪೊಲೀಸ್ ವಶ: ಬಾಳೆಲೆಯ ಕುಂಬಾರಕಟ್ಟೆ ಹಾಡಿಯಲ್ಲಿ ಅಪರಿಚಿತನೊಬ್ಬ ಕಾಣಿಸಿಕೊಂಡಿ ದ್ದಾಗ; ಆತ ದ್ವಿಚಕ್ರ ವಾಹನ ಕಳವು ಹಾಗೂ ಯಾವದೇ ಕೊಲೆ ಪ್ರಕರಣ ದಲ್ಲಿ ಭಾಗಿಯಾಗಿರುವ ಶಂಕೆ ಯೊಂದಿಗೆ ಸಾರ್ವಜನಿಕರು ಪೊಲೀಸ್ ವಶಕ್ಕೆ ಒಪ್ಪಿಸಿದ್ದಾಗಿ ಸಭೆಯಲ್ಲಿ ಚರ್ಚೆ ನಡೆಯಿತು. ಆ ಬಗ್ಗೆ ನಿಖರ ಮಾಹಿತಿ ತಮಗಿಲ್ಲವೆಂದು ಬಾಳೆಲೆ ಉಪಠಾಣೆ ಸಿಬ್ಬಂದಿ ಸಮಜಾಯಿಷಿಕೆ ನೀಡಿದರು.
ಕನಿಷ್ಟ ಸೌಲಭ್ಯ ಕೊಡಿ : ಬಾಳೆಲೆ ಗ್ರಾ.ಪಂ. ವ್ಯಾಪ್ತಿಯ ಕನಿಷ್ಟ ಸಮಸ್ಯೆ ಗಳಾದ ವಿದ್ಯುತ್, ಬಿಎಸ್ಎನ್ಎಲ್, ಕುಡಿಯುವ ನೀರಿನ ಬವಣೆ ನೀಗಿಸಲು ಕ್ರಮ ಕೈಗೊಳ್ಳುವಂತೆ ಗ್ರಾಮಸ್ಥರು ಜಿ.ಪಂ. ಅಧ್ಯಕ್ಷರನ್ನು ಒತ್ತಾಯಿಸಿದರು.
ಬಾಳೆಲೆಯ ಹದಗೆಟ್ಟಿರುವ ಗ್ರಾಮ ಸಂಪರ್ಕ ರಸ್ತೆಗಳು, ಚರಂಡಿ, ಕೃಷಿ ಹಾನಿ ಪರಿಹಾರ, ವನ್ಯಮೃಗ ಹಾವಳಿ ಇನ್ನಿತರ ಸಮಸ್ಯೆಗಳ ಬಗ್ಗೆ ಎಳೆ ಎಳೆಯಾಗಿ ವಿವರಿಸಿದ ಗ್ರಾಮಸ್ಥರು; ಜಿಲ್ಲಾ ಪಂಚಾಯಿತಿಯಿಂದ ಸೂಕ್ತ ಪರಿಹಾರಕ್ಕೂ ಬೇಡಿಕೆ ಇರಿಸಿದರು. ಗ್ರಾಮಸ್ಥರ ಬೇಡಿಕೆಗೆ ಕ್ಷೇತ್ರದ ಜಿ.ಪಂ. ಸದಸ್ಯ ಬಾನಂಡ ಪ್ರಥ್ಯು ಧ್ವನಿಗೂಡಿಸಿ ದರಲ್ಲದೆ, 10 ದಿನಗಳ ಕಾಲಾವಕಾಶ ಬಳಿಕ ಪ್ರತಿಭಟನೆ ಹಾದಿ ಹಿಡಿಯುವ ದಾಗಿ ಮುನ್ಸೂಚನೆ ನೀಡಿದರು.
ಅಂತಿಮವಾಗಿ ಜಿ.ಪಂ. ಆಡಳಿತ ಪ್ರಮುಖರು ಗ್ರಾಮಸ್ಥರ ಸಮಸ್ಯೆಗೆ ಅಧಿಕಾರಿಗಳು ಸ್ಪಂದಿಸದಿದ್ದರೆ ತಕ್ಕ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಸುವ ಮೂಲಕ ಸಭೆಗೆ ತೆರೆ ಎಳೆದರು. ಗ್ರಾ.ಪಂ. ಅಧ್ಯಕ್ಷೆ ಕುಸುಮ, ಉಪಾಧ್ಯಕ್ಷ ಷಣ್ಮುಖ ಸೇರಿದಂತೆ ಇತರ ಜನಪ್ರತಿನಿಧಿಗಳು ಹಾಜರಿದ್ದರು.