ಸಿದ್ದಾಪುರ, ಜು 14: ಮಕ್ಕಂದೂರಿನ ಒಂದೇ ಕುಟುಂಬದ ಇಬ್ಬರು ಬಡ ವಿದ್ಯಾರ್ಥಿನಿಯರಿಗೆ ನೋಟ್ ಪುಸ್ತಕ ವಿತರಿಸಿ ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕೆ ನೆಲ್ಯಹುದಿಕೇರಿಯ ಡೊಮಿನಾಸ್ ಯುವಕ ಸಂಘ ನೆರವು ನೀಡಿದೆ.

ಮಕ್ಕಂದೂರು ನಿವಾಸಿಗಳಾದ ಚಂದ್ರ ಹಾಗೂ ಸುಜಾತ ದಂಪತಿಗಳ ಪುತ್ರಿಯರಾದ ಸೃಷ್ಟಿ ಹಾಗೂ ಶಿವರಂಜಿನಿ ಪ್ರಥಮ ಹಾಗೂ ದ್ವಿತೀಯ ಪಿಯುಸಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ತಂದೆ ರೋಗಕ್ಕೆ ತುತ್ತಾಗಿ ಹಾಸಿಗೆ ಹಿಡಿದಿದ್ದು, ತಾಯಿ ದುಡಿದು ಮನೆಯ ಖರ್ಚು ಹಾಗೂ ಪುತ್ರಿಯರ ವಿದ್ಯಾಭ್ಯಾಸವನ್ನು ನೋಡಿಕೊಳ್ಳಬೇಕಾಗಿದೆ. ಇತ್ತೀಚೆಗೆ ಬಡತನದಿಂದಾಗಿ ಮಕ್ಕಳಿಗೆ ಪುಸ್ತಕವನ್ನು ಕೂಡ ಒದಗಿಸಿಕೊಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಈ ಕುರಿತು ಸ್ಥಳೀಯ ವ್ಯಕ್ತಿಯೋರ್ವರು ನೆಲ್ಯಹುದಿಕೇರಿಯ ಡೊಮಿನಾಸ್ ಕ್ಲಬ್‍ನ ಗಮನಕ್ಕೆ ತಂದ ಹಿನ್ನೆಲೆಯಲ್ಲಿ ಸಂಘದ ಸದಸ್ಯರು ವಿದ್ಯಾರ್ಥಿನಿಯರ ವಿದ್ಯಾಭ್ಯಾಸಕ್ಕಾಗಿ ನೋಟ್ ಪುಸ್ತಕ ಹಾಗೂ ಕೊಡೆಗಳನ್ನು ನೀಡಿದರು.