ಮುಂಬೈ, ಜು. 14: ಮುಂಬೈನಲ್ಲಿರುವ ಕರ್ನಾಟಕದ ಬಂಡಾಯ ಅತೃಪ್ತ ಶಾಸಕರು ರಾಜೀನಾಮೆ ಹಿಂಪಡೆಯುವದಿಲ್ಲ. ಎಂಟಿಬಿ ನಾಗರಾಜ್ ಈಗಾಗಲೇ ನಮ್ಮನ್ನು ಸೇರಿಕೊಂಡಿದ್ದಾರೆ. ಸುಧಾಕರ್ ಕೂಡಾ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಶಾಸಕ ಎಸ್ ಟಿ ಸೋಮಶೇಖರ್ ಹೇಳಿದ್ದಾರೆ. ಬಂಡಾಯವೆದ್ದಿರುವ ಕಾಂಗ್ರೆಸ್ ಶಾಸಕರು ಜು. 14 ರಂದು ಮುಂಬೈ ಹೊಟೇಲ್ನಿಂದಲೇ ಸುದ್ದಿಗೋಷ್ಠಿ ನಡೆಸಿದ್ದು, ಇಲ್ಲಿರುವ 12 ಶಾಸಕರು ಯಾವದೇ ಕಾರಣಕ್ಕೂ ರಾಜೀನಾಮೆ ವಾಪಸ್ ಪಡೆಯುವದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಎಂಟಿಬಿ ನಾಗರಾಜ್ ಅವರು ಬಂಡಾಯ ಶಾಸಕರ ಮನವೊಲಿಕೆ ಗಾಗಿ ಮುಂಬೈಗೆ ಬಂದಿದ್ದಾರೆ ಎಂಬ ವರದಿ ಪ್ರಕಟವಾಗಿದೆ. ಆದರೆ ಅವರು ಮನವೊಲಿಕೆಗಾಗಿ ಬಂದಿಲ್ಲ. ಬದಲಾಗಿ ಅವರೂ ನಮ್ಮ ಜೊತೆ ಸೇರಿಕೊಂಡಿದ್ದಾರೆ. ಅವರೊಂದಿಗೆ ರಾಜೀನಾಮೆ ನೀಡಿದ್ದ ಡಾ. ಸುಧಾಕರ್ ದೆಹಲಿಯಲ್ಲಿದ್ದು ಅವರೂ ನಮ್ಮ ಜೊತೆ ಸೇರಿಕೊಳ್ಳಲಿದ್ದಾರೆ ಎಂದು ಹೇಳಿದ್ದಾರೆ.
ರಾಜೀನಾಮೆ ನೀಡಿರುವ ನಮ್ಮ ನಿಲುವನ್ನು ಬದಲಾವಣೆ ಮಾಡುವದಿಲ್ಲ, ಮುಂಬೈನಲ್ಲಿರುವ ಶಾಸಕರ ನಡುವೆ ಗುಂಪುಗಾರಿಕೆ ಇಲ್ಲ, ಯಾವದೇ ಒತ್ತಡಕ್ಕೂ ಮಣಿಯು ವದಿಲ್ಲ, ಯಾರನ್ನೂ ಸಂಪರ್ಕಿಸಲು ತಯಾರಿಲ್ಲ ಎಂದು ಸೋಮಶೇಖರ್ ಹೇಳಿದ್ದಾರೆ. ರಾಜೀನಾಮೆ ನೀಡಿದ ಸಂದರ್ಭ ಡಾ. ಸುಧಾಕರ್ ಮೇಲೆ ನಡೆದಿರುವ ಹಲ್ಲೆ ಖಂಡನೀಯ ಎಂದು ಬಂಡಾಯ ಶಾಸಕರು ಹೇಳಿದ್ದಾರೆ.
ಮುಖ್ಯಮಂತ್ರಿಗೆ ಮತ್ತೆ ‘ಟೆನ್ಷನ್’
ಸಿದ್ದರಾಮಯ್ಯ ಆಪ್ತ ಶಾಸಕ ಎಂಟಿಬಿ ನಾಗರಾಜ್ ಮನವೊಲಿಸಲು ನಿನ್ನೆ ಇಡೀ ದಿನ ಕಾಂಗ್ರೆಸ್ ನಾಯಕರು ಕಸರತ್ತು ನಡೆಸಿದ್ದರು. ಆದರೆ, ಇಂದು ಬೆಳಗ್ಗೆ ಎಂಟಿಬಿ ನಾಗರಾಜ್ ಕೂಡಾ ಮುಂಬೈನತ್ತ ಹಾರಿದ್ದಾರೆ.
ಬೆಳಿಗ್ಗೆ 10.30ರಲ್ಲಿ ಹೆಚ್ಎಎಲ್ ವಿಮಾನ ನಿಲ್ದಾಣದ ಮೂಲಕ ವಿಶೇಷ ವಿಮಾನದಲ್ಲಿ ಮುಂಬೈಗೆ ಹಾರಿದ್ದಾರೆ. ಬಿಜೆಪಿ ಹಿರಿಯ ಮುಖಂಡ ಆರ್ ಅಶೋಕ್ ಕೂಡಾ, ಎಂಟಿಬಿ ನಾಗರಾಜ್ ಜೊತೆಗೆ ಒಂದೇ ವಿಮಾನದಲ್ಲಿ
(ಮೊದಲ ಪುಟದಿಂದ) ಪ್ರಯಾಣಿಸಿದ್ದಾರೆ ಎನ್ನಲಾಗುತ್ತಿದೆ.
ಕಾಂಗ್ರೆಸ್ ಪಕ್ಷದ ಮತ್ತೋರ್ವ ಅತೃಪ್ತ ಶಾಸಕ ಮುನಿರತ್ನ ಕೂಡಾ ನಿನ್ನೆ ಮಧ್ಯರಾತ್ರಿಯೇ ಮುಂಬೈ ತಲಪಿದ್ದಾರೆ. ಸದ್ಯ ದೆಹಲಿಯಲ್ಲಿರುವ ಚಿಕ್ಕಬಳ್ಳಾಪುರ ಶಾಸಕ ಡಾ. ಕೆ. ಸುಧಾಕರ್ ಕೂಡಾ ಮುಂಬೈಗೆ ಪ್ರಯಾಣಿಸಲಿದ್ದು, ಅತೃಪ್ತರ ಗುಂಪು ಸೇರಲಿದ್ದಾರೆ. ಇದರಿಂದಾಗಿ ಅತೃಪ್ತರ ಸಂಖ್ಯೆ 10ರಿಂದ 13ಕ್ಕೆ ಏರಿಕೆಯಾಗಿದ್ದು, ಈ ಗುಂಪಿನಲ್ಲಿ ಹೊಸ ಹುರುಪು ಬಂದಂತಾಗಿದೆ.
ಈ ಬೆಳವಣಿಗೆಗಳಿಂದ ಕಂಗಾಲಾಗಿರುವ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರಿಗೆ ಮತ್ತೆ ‘ಟೆನ್ಷನ್’ ಶುರುವಾಗಿದೆ.
ಸೋಮವಾರವೇ ಮತ ಯಾಚಿಸಲಿ
ಬಿಜೆಪಿ ಪಾಳಯದಲ್ಲಿ ಉತ್ಸಾಹ ಇಮ್ಮಡಿಯಾಗಿದ್ದು, ರಾಜಕೀಯ ತಂತ್ರ ಪ್ರತಿತಂತ್ರಗಳ ಕುರಿತು ಮಾಜೀ ಮುಖ್ಯಮಂತ್ರಿ ಯಡಿಯೂರಪ್ಪ ತಮ್ಮ ಆಪ್ತ ಮುಖಂಡರೊಂದಿಗೆ ಚರ್ಚೆ ನಡೆಸಿದರು. ಬಳಿಕ ಅವರು ಪಕ್ಷದ ಮುಖಂಡರೊಡನೆ ಮತ್ತೆ ರೆಸಾರ್ಟ್ನತ್ತ ಹೆಜ್ಜೆ ಹಾಕಿದರು.
ಈ ನಡುವೆ ಮಾತನಾಡಿದ ಯಡಿಯೂರಪ್ಪ ರಾಜ್ಯದ ಮೈತ್ರಿ ಸರ್ಕಾರ ಬಹುಮತ ಕಳೆದು ಕೊಂಡಿದೆ. ಹಾಗಾಗಿ ಸೋಮವಾರವೇ ಸದನದಲ್ಲಿ ವಿಶ್ವಾಸಮತ ಯಾಚನೆ ಮಾಡಬೇಕು ಇಲ್ಲವೇ ಮುಖ್ಯಮಂತ್ರಿ ಕುಮಾರಸ್ವಾಮಿ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.
ಮನವೊಲಿಕೆ- ಸಿದ್ದರಾಮಯ್ಯ
ಕಾಂಗ್ರೆಸ್- ಜೆಡಿಎಸ್ ಸಮ್ಮಿಶ್ರ ಸರ್ಕಾರದ ವಿಶ್ವಾಸಮತಯಾಚನೆ ಮುನ್ನ ಎಲ್ಲಾ ಶಾಸಕರನ್ನು ಮನವೊಲಿಸಲಾಗುವದು ಎಂದು ಸಮ್ಮಿಶ್ರ ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಹೇಳಿದ್ದಾರೆ.
ಪ್ರತಿಯೊಬ್ಬರನ್ನೂ ಸಂಪರ್ಕಿಸಲು ಪ್ರಯತ್ನಿಸಲಾಗುತ್ತಿದೆ. ವಿಶ್ವಾಸ ಮತಯಾಚನೆ ಸಂದರ್ಭದಲ್ಲಿ ಮುಂಬೈನಲ್ಲಿರುವ ಎಲ್ಲಾ ಅತೃಪ್ತ ಶಾಸಕರು ಬೆಂಗಳೂರಿಗೆ ವಾಪಾಸ್ ಆಗಲಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ರಾಮಲಿಂಗಾರೆಡ್ಡಿ ಅವರೊಂದಿಗೂ ಸಂಪರ್ಕದಲ್ಲಿರು ವದಾಗಿ ತಿಳಿಸಿದರು.
ಮನವೊಲಿಕೆ ಕಗ್ಗಂಟು: ಈಶ್ವರ್ ಖಂಡ್ರೆ
ಅತೃಪ್ತ ಶಾಸಕರ ಮನವೊಲಿಸುವ ಕಾರ್ಯ ಕಗ್ಗಂಟಾಗುತ್ತಿದ್ದು ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿರುವದಾಗಿ ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಹೇಳಿದ್ದಾರೆ.
ಪಕ್ಷದ ಹಿರಿಯ ಮುಖಂಡ, ಮಾಜಿ ಸಚಿವ ಹೆಚ್. ಕೆ. ಪಾಟೀಲ್ ಜೊತೆಗೆ ಇಂದು ರಾಮಲಿಂಗಾರೆಡ್ಡಿ ಅವರನ್ನು ಭೇಟಿ ಮಾಡಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರ್ ಖಂಡ್ರೆ, ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದೆ. ಇಂತಹ ಸ್ಥಿತಿಯಲ್ಲಿ ಶಾಸಕ ಸ್ಥಾನಕ್ಕೆ ನೀಡಿರುವ ರಾಜೀನಾಮೆಯನ್ನು ಹಿಂಪಡೆಯ ಬೇಕೆಂದು ರಾಮಲಿಂಗಾರೆಡ್ಡಿ ಅವರ ಬಳಿ ಮನವಿ ಮಾಡಿದ್ದೇವೆ ಎಂದು ತಿಳಿಸಿದರು.