ಮಡಿಕೇರಿ, ಜು. 13: ಜಿಲ್ಲೆಯ ಹಾಡಿಗಳಲ್ಲಿ ಹೆಚ್ಚಿನ ಗಮನಹರಿಸಿ ಐಟಡಿಪಿ ಇಲಾಖಾ ಅಧಿಕಾರಿ ಗಳೊಂದಿಗೆ ಸಮನ್ವಯ ಸಾಧಿಸಿ ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಯಶಸ್ವಿಗೊಳಿಸುವಂತೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಸಲಹೆ ಮಾಡಿದ್ದಾರೆ.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ‘ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ’ದ ಜಿಲ್ಲಾ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಕಾರ್ಯಕ್ರಮದ ಕುರಿತು ಸಾರ್ವಜನಿಕರಲ್ಲಿ ಹೆಚ್ಚಿನ ಅರಿವು ಮೂಡಿಸಿ ಜಿಲ್ಲೆಯಲ್ಲಿ ಕ್ಷಯರೋಗವನ್ನು ಸಂಪೂರ್ಣವಾಗಿ ನಿಯಂತ್ರಿಸಲು ಆರೋಗ್ಯಾಧಿಕಾರಿಗಳಿಗೆ ತಿಳಿಸಿದರು.

ಜಿಲ್ಲೆಯಲ್ಲಿ ಕ್ಷಯರೋಗ ಹೆಚ್ಚು ಕಂಡುಬಂದಿರುವ ಪ್ರದೇಶದ ವ್ಯಾಪ್ತಿಯಲ್ಲಿ ವಾಸಿಸುವ ಜನರ ಕಫದ ಮಾದರಿಯನ್ನು ಸಂಗ್ರಹಿಸಿ ರೋಗ ಪತ್ತೆ ಹಚ್ಚಿ ಕ್ಷಯರೋಗವನ್ನು ನಿಯಂತ್ರಣಕ್ಕೆ ತರುವಂತೆ ಅವರು ಸೂಚಿಸಿದರು.

ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದ ಸಂಪೂರ್ಣ ಮಾಹಿತಿಯನ್ನು ಕಾರ್ಯಕ್ರಮ ಪೂರ್ಣಗೊಂಡ ನಂತರ ಈ ಆಂದೋಲನದ ಪ್ರಗತಿ ಹಾಗೂ ರೋಗ ಪತ್ತೆ ವಿವರವನ್ನು ನೀಡುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗೆ ಸೂಚಿಸಿದರು.

ಜಿಲ್ಲಾ ಕ್ಷಯರೋಗ ನಿಯಂತ್ರಣಾಧಿಕಾರಿ ಡಾ. ಎ.ಸಿ. ಶಿವಕುಮಾರ್ ಅವರು ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಬಗ್ಗೆ ಮಾಹಿತಿ ನೀಡಿ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿ ತಾ. 15 ರಿಂದ ತಾ. 27 ರವರೆಗೆ ಕಾರ್ಯಕ್ರಮ ನಡೆಯಲ್ಲಿದ್ದು, ಪ್ರತಿ ಮನೆಗಳಿಗೆ ಆಶಾ ಕಾರ್ಯಕರ್ತೆ ಹಾಗೂ ಶುಶ್ರೂಕಿಯರು, ಶುಶ್ರೂಷಕರು ಒಳಗೊಂಡ ತಂಡವು ದಿನಕ್ಕೆ ಐವತ್ತು ಮನೆಗಳಿಗೆ ಭೇಟಿ ನೀಡಿ ಕಫದ ಮಾದರಿಯನ್ನು ಸಂಗ್ರಹಿಸಲಿದೆ. ಕ್ಷಯ ಪತ್ತೆಯಾದಲ್ಲಿ ಪರೀಕ್ಷೆ ಗೊಳಪಡಿಸಿ ಹೆಚ್ಚಿನ ಚಿಕಿತ್ಸೆ ನೀಡಲಾಗುವದು ಎಂದು ಅವರು ತಿಳಿಸಿದರು.

ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನದಲ್ಲಿ ಸ್ವಯಂ ಸೇವಾ ಸಂಸ್ಥೆಗಳಾದ ರೋಟರಿ ಮಿಸ್ಟಿ ಹಿಲ್ ಹಾಗೂ ಗ್ರೀನ್ ಡಾಟ್ ಟ್ರಸ್ಟ್ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಮಾಹಿತಿ ನೀಡಿದರು .

ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಕಾರ್ಯಕ್ರಮದ ಹಾಗೂ ಕ್ಷಯರೋಗ ನಿಯಂತ್ರಣ ಮತ್ತು ರೋಗ ಲಕ್ಷಣಗಳ ಕರಪತ್ರಗಳನ್ನು ಜಿಲ್ಲಾಧಿಕಾರಿ ಬಿಡುಗಡೆ ಮಾಡಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕೆ. ಮೋಹನ್ ಅವರು ಸಕ್ರಿಯ ಕ್ಷಯರೋಗ ಪತ್ತೆ ಆಂದೋಲನ ಬಗ್ಗೆ ಹಲವು ಮಾಹಿತಿ ನೀಡಿದರು.

ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕ ಕಾರ್ಯಪ್ಪ, ಜಿಲ್ಲಾ ಸವೇಕ್ಷಣಾಧಿಕಾರಿ ಡಾ. ಎಂ. ಶಿವಕುಮಾರ್, ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಆನಂದ್, ನಗರಸಭೆ ಆಯುಕ್ತ ಎಂ.ಎಲ್. ರಮೇಶ್, ಪದವಿಪೂರ್ವ ಶಿಕ್ಷಣ ಇಲಾಖೆಯ ಉಪ ನಿದೇಶಕ ಕೆಂಚಪ್ಪ, ಕಾರ್ಮಿಕ ಇಲಾಖೆಯ ತಾಲೂಕು ಅಧಿಕಾರಿ ಯತ್ನಟಿ, ರೋಟರಿ ಮಿಸ್ಟಿಹಿಲ್‍ನ ಅಧ್ಯಕ್ಷರು, ಮಾನಸಧಾರ ಸಂಸ್ಥೆಯ ವ್ಯವಸ್ಥಾಪಕ ವಿಶ್ವನಾಥ್, ವೈದ್ಯಾಧಿಕಾರಿಗಳು ಹಾಗೂ ಇತರರು ಇದ್ದರು.