ಮಡಿಕೇರಿ, ಜು.13 : ಕುಶಾಲ ನಗರದ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನ ಹಂಚಿಕೆಗೆ ಸಂಬಂಧಿಸಿದಂತೆ ಆನ್‍ಲೈನ್ ಮೂಲಕ ಈಗಾಗಲೇ ಆಹ್ವಾನಿಸಿರುವ ಎಲ್ಲಾ ಅರ್ಜಿಗಳನ್ನು ರದ್ದುಪಡಿಸಿ, ಕುಶಾಲನಗರ ವ್ಯಾಪ್ತಿಯಲ್ಲಿ ಹಲವಾರು ವರ್ಷಗಳಿಂದ ನೆಲೆಸಿರುವ ನಿವೇಶನ ರಹಿತರಿಗೆ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಮಾಡಿಕೊಡಬೇಕು ಎಂದು ತಾಲೂಕು ಸ್ತ್ರೀಶಕ್ತಿ ಬ್ಲಾಕ್ ವಲಯ ಸೊಸೈಟಿ ಮತ್ತು ಮಾನವ ಹಕ್ಕು ಜನಜಾಗೃತಿ ವೇದಿಕೆ ಆಗ್ರಹಿಸಿದೆ.

ಮಡಿಕೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಮಾಧ್ಯಮ ಸಲಹೆಗಾರ ಕೆ.ಟಿ.ಶ್ರೀನಿವಾಸ್ ಅವರು, ಕುಶಾಲನಗರ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ವಾಸಕ್ಕೆ ಮನೆಗಳು ಇಲ್ಲದ ಹಾಗೂ ಮನೆಗಳಿದ್ದರೂ ವಾಸಕ್ಕೆ ಯೋಗ್ಯವಿಲ್ಲದ ಮನೆಗಳಲ್ಲಿ ನೂರಾರು ಪ.ವರ್ಗದÀ ಕುಟುಂಬಗಳು ಸುಮಾರು 50 ವರ್ಷಗಳಿಂದ ವಾಸವಾಗಿವೆ. ಕೆಲವರು ಸ್ವಂತ ಮನೆ ಇಲ್ಲದೆ ಬಾಡಿಗೆ ಮನೆಯಲ್ಲಿ ವಾಸ ಮಾಡುತ್ತಿದ್ದು, ಮತ್ತೆ ಕೆಲವರು ಕಳೆದ ಬಾರಿಯ ಪ್ರಕೃತಿ ವಿಕೋಪದ ಸಂದರ್ಭ ಬಿರುಕು ಬಿಟ್ಟು ಇಂದೋ ನಾಳೆಯೋ ಬೀಳುವ ಮನೆಗಳಲ್ಲಿದ್ದಾರೆ. ಅಂತಹ ಫಲಾನುಭವಿಗಳನ್ನು ಗುರುತಿಸಿ ನಿವೇಶನಗಳನ್ನು ನೀಡುವದು ಪಟ್ಟಣ ಪಂಚಾಯಿತಿಯ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಆದರೆ ಕುಶಾಲನಗರ ಪಟ್ಟಣ ಪಂಚಾಯಿತಿ ವತಿಯಿಂದ ನಿವೇಶನ ರಹಿತ 150 ಕಡುಬಡವ ಕುಟುಂಬಗಳಿಗೆ ಕುಶಾಲನಗರದ ಗುಂಡೂರಾವ್ ಬಡಾವಣೆಯಲ್ಲಿ ನಿವೇಶನಗಳನ್ನು ನೀಡಲು ಜಾಗ ಕಾಯ್ದರಿಸಿ ಈಗಾಗಲೇ ಆನ್‍ಲೈನ್ ಮೂಲಕ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಇದುವರೆಗೆ ಸುಮಾರು 312 ಅರ್ಜಿಗಳು ಸಲ್ಲಿಕೆಯಾಗಿವೆ. ಈ ರೀತಿ ಅರ್ಜಿ ಸಲ್ಲಿಸಿದವರಲ್ಲಿ ಕುಶಾಲನಗರದಿಂದ ಹೊರ ಭಾಗದಲ್ಲಿರುವವರು, ಹಾಸನ, ಮೈಸೂರು ಜಿಲ್ಲೆಗೆ ಸೇರಿದವರು ಹಾಗೂ ಈಗಾಗಲೇ ಸರಕಾರದ ನಿವೇಶನ ಪಡೆದು ಅದನ್ನು ಮಾರಾಟ ಮಾಡಿ ತೆರಳಿದವರು, ಕೆಲವು ಪ್ರಭಾವಿಗಳು, ಮನೆ ಆಸ್ತಿಪಾಸ್ತಿ ಹೊಂದಿರುವವರೂ ಸೇರಿದ್ದಾರೆ ಎಂದು ದೂರಿದರು.

ಗುಂಡೂರಾವ್ ಬಡಾವಣೆಯಲ್ಲಿ 150 ಕುಟುಂಬಗಳಿಗೆ ತಲಾ 2.50 ಸೆಂಟ್‍ನಂತೆ ನಿವೇಶನ ನೀಡಲು ಪಟ್ಟಣ ಪಂಚಾಯಿತಿ ನಿರ್ಧರಿಸಿದೆ. ಆದರೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯ ಕಾಳಮ್ಮ ಕಾಲೋನಿಯ ಸುಮಾರು 35 ಕುಟುಂಬಗಳು ನಿವೇಶನ ವಿತರಣೆಯ ಮಾಹಿತಿ ಇಲ್ಲದೆ ಅರ್ಜಿ ಸಲ್ಲಿಸುವ ಅವಕಾಶದಿಂದ ವಂಚಿತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದೋ ಈಗಾಗಲೇ ಆನ್‍ಲೈನ್ ಮೂಲಕ ಆಹ್ವಾನಿಸಿರುವ ಅರ್ಜಿಯನ್ನು ಸಂಪೂರ್ಣವಾಗಿ ರದ್ದುಪಡಿಸಿ ಹೊಸದಾಗಿ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿಕೊಡಬೇಕು. ಇಲ್ಲವೇ ಈಗಾಗಲೇ 150 ಮಂದಿಗೆ ವಿತರಿಸಲು ಗುರುತಿಸಲಾಗಿರುವ ತಲಾ 2.50 ಸೆಂಟ್ ಜಾಗದ ಬದಲಾಗಿ ತಲಾ 2 ಸೆಂಟ್‍ನಂತೆ ನಿವೇಶನ ನೀಡಿ ಉಳಿದ 35 ಕುಟುಂಬಗಳಿಗೂ ನಿವೇಶನ ವಿತರಿಸಲು ಕ್ರಮಕೈಗೊಳ್ಳಬೇಕು ಎಂದು ಅವರು ಆಗ್ರಹಿಸಿದರು.

ಒಂದು ವೇಳೆ ನೈಜ ಫಲಾನುಭವಿಗಳಿಗೆ ಯಾವದೇ ರೀತಿಯ ಅನ್ಯಾಯವಾದಲ್ಲಿ ವಿವಿಧ ಸಂಘಸಂಸ್ಥೆಗಳು, ಸ್ತ್ರೀಶಕ್ತಿ ಸಂಘಟನೆಗಳ ಸಹಕಾರದಿಂದ ಹೋರಾಟ ರೂಪಿಸಲಾಗುವದು ಎಂದು ಶ್ರೀನಿವಾಸ್ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಸ್ತ್ರೀಶಕ್ತಿ ಮತ್ತು ಬೀದಿ ಬದಿ ವ್ಯಾಪಾರಿಗಳ ಸಂಘದ ಪದಾಧಿಕಾರಿಗಳಾದ ಎ.ಸಿ.ಕಮಲಾ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು.