ಕೂಡಿಗೆ, ಜು. 12: ಜಿಲ್ಲಾ ಪಂಚಾಯಿತಿ ಮತ್ತು ಮೀನುಗಾರಿಕಾ ಇಲಾಖೆಯ ವತಿಯಿಂದ ಮೀನು ಕೃಷಿಕರ ದಿನಾಚರಣೆ ಹಾರಂಗಿ ಮೀನು ಉತ್ಪಾದಕರ ಸಾಕಾಣಿಕ ಕೇಂದ್ರದಲ್ಲಿ ನಡೆಯಿತು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಾಲೂಕು ಪಂಚಾಯಿತಿ ಸದಸ್ಯ ಗಣೇಶ್ ವಹಿಸಿದ್ದರು. ಮೀನುಗಾರಿಕಾ ಇಲಾಖೆಯ ಸಹಾಯಕ ನಿರ್ದೇಶಕರಾದ ಕೆ.ಟಿ. ದರ್ಶನ್ ಮಾತನಾಡಿ, 19ನೇ ರಾಷ್ಟ್ರೀಯ ಮೀನು ಕೃಷಿಕ ದಿನಾಚರಣೆ ಇದಾಗಿದ್ದು, 1957ರಲ್ಲಿ ಡಾ. ಹಿರಾಲಾಲ್ ಚೌದರಿ ಹಾಗೂ ಕೆ.ಹೆಚ್. ಆಲಿಕನ್ಸಿ ಇವರ ಮೀನು ಉತ್ಪಾದಕರ ಪ್ರಯತ್ನದಿಂದ ಮೀನುಗಳನ್ನು ಸಂವರ್ಧನೆ ಮಾಡಿದ ದಿನ ಜುಲೈ 10. ಈ ದಿನವನ್ನು ಮೀನು ಕೃಷಿಕ ದಿನ ಎಂದು ಆಚರಣೆ ಮಾಡಲಾಗುತ್ತಿದೆ. ದೇಶಾದ್ಯಂತ ಮೀನು ಮರಿಗಳ ಉತ್ಪಾದನೆ ಮತ್ತು ಕೃಷಿಕರಿಗೆ ಬೇಕಾಗುವ ಎಲ್ಲಾ ವ್ಯವಸ್ಥೆಗಳನ್ನು ಮಾಡಿ ಮಾರ್ಗಸೂಚಿಸಿದ ಹಿರಿಯರ ಮಾರ್ಗದರ್ಶನ ನೀಡಿದ್ದಾರೆ. ಅದು ಇಂದಿಗೂ ಮೀನುಗಾರಿಕಾ ಇಲಾಖೆಯಲ್ಲಿ ವಿವಿಧ ತಳಿಗಳ ಮೀನು ಮರಿಗಳನ್ನು ವಿವಿಧ ಹಂತಗಳಲ್ಲಿ ಅಭಿವೃದ್ಧಿ ಪಡಿಸಲಾಗುತ್ತಿದೆ ಎಂದು ಹೇಳಿದರು.

ಮೀನುಗಾರಿಕಾ ಇಲಾಖೆಯ ತಾಲೂಕು ಸಹಾಯಕಿ ನಿರ್ದೇಶಕಿ ಮಿಲನ ಭರತ್ ಮಾತನಾಡಿ, ಮೀನುಗಾರಿಕಾ ಇಲಾಖೆಯ ವತಿಯಿಂದ ಮೀನು ಕೃಷಿಕರಿಗೆ ಸರ್ಕಾರದಿಂದ ಸಿಗುವ ವಿವಿಧ ಸೌಲಭ್ಯ ಮತ್ತು ಅವುಗಳನ್ನು ಸದ್ಬಳಕೆ ಮಾಡಿಕೊಳ್ಳುವ ವಿಧಾನದ ಬಗ್ಗೆ ಸವಿಸ್ತಾರವಾಗಿ ಮಾಹಿತಿ ನೀಡಿದರು. ಮೀನುಗಾರಿಕೆಯಲ್ಲಿ ರೈತರು ಮೀನುಗಳ ಸಂತಾನೋತ್ಪತ್ತಿಯ ಬಗ್ಗೆ ಮೀನು ಕೃಷಿಕರಿಗೆ ಸಂವಾದದ ರೀತಿಯಲ್ಲಿ ತೇಜಸ್ ನಾಣಯ್ಯ ಅವರು ಸವಿಸ್ತಾರವಾಗಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಮೀನುಗಾರಿಕೆ ಮತ್ತು ಸಮಗ್ರ ಕೃಷಿಯಲ್ಲಿ ತೊಡಗಿ ಪ್ರಗತಿಪರ ರೈತ ತೋಳೂರು ಶೆಟ್ಟಳ್ಳಿಯ ಅಶೋಕ್ ಅವರನ್ನು ಇಲಾಖೆಯ ವತಿಯಿಂದ ಸನ್ಮಾನಿಸಿ, ಗೌರವಿಸಲಾಯಿತು.

ಈ ಸಂದರ್ಭ ಹಾರಂಗಿ ಮೀನುಗಾರಿಕಾ ಉತ್ಪಾದನ ಕೇಂದ್ರದ ಸಹಾಯಕ ನಿರ್ದೆಶಕ ಎಸ್.ಎನ್. ಸಚಿನ್ ಸೇರಿದಂತೆ 50 ಕ್ಕೂ ಹೆಚ್ಚು ಮೀನು ಕೃಷಿಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.