ಮಡಿಕೇರಿ, ಜು. 8: ರೆಡ್ಕ್ರಾಸ್ ರಾಜ್ಯಾಧ್ಯಕ್ಷರಾಗಿರುವ ಎಸ್.ನಾಗಣ್ಣ ಮಡಿಕೇರಿ ಬಳಿಯ ಕಾಟಕೇರಿಗೆ ಭೇಟಿ ನೀಡಿ ಹೆದ್ದಾರಿ ಕುಸಿದಿರುವ ಸ್ಥಳ ಪರಿಶೀಲನೆ ನಡೆಸಿದರು.
ಹೆದ್ದಾರಿ ಸೇರಿದಂತೆ ಪ್ರಕೃತಿ ವಿಕೋಪ ಸಂಭವಿಸಿದ್ದ ಕೆಲವು ಸ್ಥಳಗಳಿಗೂ ತೆರಳಿ ಪರಿಶೀಲಿಸಿದ ಬಳಿಕ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರನ್ನೂ ಭೇಟಿಯಾಗಿ ಚರ್ಚಿಸಿದ ರೆಡ್ಕ್ರಾಸ್ ರಾಜ್ಯಾಧ್ಯಕ್ಷ ನಾಗಣ್ಣ, ಈ ಬಾರಿಯೂ ಅಧಿಕ ಮಳೆಯಿಂದಾಗಿ ಅನಾಹುತ ಸಂಭವಿಸಿದಲ್ಲಿ ಜಿಲ್ಲಾಡಳಿತ ಕೈಗೊಳ್ಳುವ ತುರ್ತು ನೆರವಿನ ಕಾರ್ಯಕ್ಕೆ ರೆಡ್ಕ್ರಾಸ್ ಕೂಡ ಅಗತ್ಯ ನೆರವು ನೀಡುವ ಭರವಸೆ ನೀಡಿದರು.
ಕೊಡಗು ರೆಡ್ಕ್ರಾಸ್ ಘಟಕಕ್ಕೆ ಸೂಕ್ತ ಕಚೇರಿ ಕಟ್ಟಡ, ಪರಿಹಾರ ಸಾಮಗ್ರಿ ಸಂಗ್ರಹಿಸಿಡಲು ವಿಶಾಲವಾದ ಗೋದಾಮು ನೀಡುವಂತೆ ಜಿಲ್ಲಾಡಳಿತಕ್ಕೆ ಮನವಿ ಮಾಡಿದರಲ್ಲದೇ, ಮಡಿಕೇರಿಯಲ್ಲಿ ಈಗಾಗಲೇ ಗುರುತಿಸಲ್ಪಟ್ಟಿರುವ ನಿವೇಶನದಲ್ಲಿ ರೆಡ್ಕ್ರಾಸ್ ಕಟ್ಟಡ ನಿರ್ಮಾಣಕ್ಕೆ ಅಗತ್ಯ ಸಹಕಾರ ನೀಡುವಂತೆಯೂ ನಾಗಣ್ಣ ಕೋರಿದರು.
ಈ ಸಂದರ್ಭ ಕೊಡಗು ರೆಡ್ಕ್ರಾಸ್ ಸಭಾಧ್ಯಕ್ಷ ಬಿ.ಕೆ. ರವೀಂದ್ರ ರೈ, ಕಾರ್ಯದರ್ಶಿ ಎಚ್. ಆರ್. ಮುರಳೀಧರ್ ಹಾಜರಿದ್ದರು.