ಮಡಿಕೇರಿ, ಜು. 6 : ವೀರಾಜಪೇಟೆ ಕ್ಷೇತ್ರದ ಕುಂಜಿಲಗೇರಿ ಗ್ರಾಮವನ್ನು ಅಭಿವೃದ್ಧಿಪಡಿಸುವಲ್ಲಿ ಕ್ಷೇತ್ರದ ಶಾಸಕರು ಸಂಪೂರ್ಣವಾಗಿ ನಿರ್ಲಕ್ಷಿಸಿದ್ದಾರೆ ಎಂದು ನಿವೃತ್ತ ಪೊಲೀಸ್ ವರಿಷ್ಠಾಧಿಕಾರಿ ಮುಕ್ಕಾಟಿರ ಎ. ಅಪ್ಪಯ್ಯ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕುಂಜಿಲಗೇರಿ ಗ್ರಾಮದ ಹಲವು ಸಮಸ್ಯೆಗಳ ಬಗ್ಗೆ ತಾನೂ ಸೇರಿದಂತೆ ಗ್ರಾಮಸ್ಥರು ಕಳೆದ ಹಲವು ವರ್ಷಗಳಿಂದ ಶಾಸಕರ ಗಮನಸೆಳೆಯುತ್ತಾ ಬಂದಿದ್ದು, ಅವರು ಮೂರು ಬಾರಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿ ಬಂದರೂ ಗ್ರಾಮದ ರಸ್ತೆ ಮತ್ತು ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸದೆ ನಿರ್ಲಕ್ಷಿಸಿದ್ದಾರೆ ಎಂದರು.

ಕಳೆದ ಸಾಲಿನಲ್ಲಿ ಕೊಡಗಿನ ರಸ್ತೆ ಅಭಿವೃದ್ಧಿಗೆ ರಾಜ್ಯ ಸರಕಾರ ರೂ. 50 ಕೋಟಿಗಳನ್ನು ಮಂಜೂರು ಮಾಡಿದ್ದು, ಈ ಅನುದಾನದ ಪೈಕಿ 2134 ಲಕ್ಷ ರೂ.ಗಳನ್ನು ವೀರಾಜಪೇಟೆ ತಾಲೂಕಿನ ಅಭಿವೃದ್ಧಿಗೆ ಒದಗಿಸ ಲಾಗಿತ್ತು. ಅದರಂತೆ ಕಾಕೋಟುಪರಂಬು ಗ್ರಾ.ಪಂ.ನ ಬೆಳ್ಳುಮಾಡು ಗ್ರಾಮದ ಅಡುಕೋಣಿ ರಸ್ತೆ, ಕುಂಜಿಲಗೇರಿ ಗ್ರಾಮದ ಚೊಟ್ಟೇರ ಮನೆಗಾಗಿ ಭಗವತಿ ದೇವಸ್ಥಾನ ರಸ್ತೆ, ನಾಲ್ಕೇರಿ ಗ್ರಾಮದಿಂದ ಕುಂಜಿಲಗೇರಿ ಗ್ರಾಮಕ್ಕೆ ಸಂಪರ್ಕ ರಸ್ತೆಗೆ ತಲಾ 3 ಲಕ್ಷ, ಬೆಳ್ಳುಮಾಡುವಿನಿಂದ ಕುಂಜಿಲಗೇರಿಗಾಗಿ ಬಾವಲಿ ರಸ್ತೆಗೆ ರೂ. 5 ಲಕ್ಷ, ಕಾಕೋಟುಪರಂಬುವಿ ನಿಂದ ಕುಂಜಿಲಗೇರಿ ಸಂಪರ್ಕ ರಸ್ತೆಗೆ 4 ಲಕ್ಷ, ಕುಂಜಿಲಗೇರಿ ಗ್ರಾಮದ ಈಶ್ವರ ಬೊಟ್ಲಪ್ಪ ದೇವಸ್ಥಾನಕ್ಕೆ ತೆರಳುವ ರಸ್ತೆ ಅಭಿವೃದ್ಧಿಗೆ ರೂ. 2 ಲಕ್ಷ, ಪಾರಾಣೆ ಗ್ರಾಮ ಪಂಚಾಯಿತಿಯಿಂದ ಕುಂಜಿಲಗೇರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹಾಗೂ ಕೋಣಂಗೇರಿ ಗ್ರಾ.ಪಂ.ನ ಬಾವಲಿಯಿಂದ ಪುತ್ತುಮಾಡು ಅಯ್ಯಪ್ಪ ದೇವಸ್ಥಾನಕ್ಕಾಗಿ ಕುಂಜಿಲಗೇರಿಗೆ ತಲುಪುವ ರಸ್ತೆ ಅಭಿವೃದ್ಧಿಗೆ ರೂ. 10 ಲಕ್ಷಗಳನ್ನು ಮೀಸಲಿಡಲಾಗಿತ್ತು. ಈ ಕಾಮಗಾರಿಗಳ ಪೈಕಿ ನಾಲ್ಕೇರಿ-ಕುಂಜಿಲ ರಸ್ತೆ ಮತ್ತು ಕಾಕೋಟುಪರಂಬು- ಕುಂಜಿಲಗೇರಿ ರಸ್ತೆಯನ್ನು ಹೊರತುಪಡಿಸಿದರೆ ಇತರ ಎಲ್ಲಾ ರಸ್ತೆಗಳು ನನ್ನ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಗಳಾಗಿದ್ದು, ತನ್ನ ಮೇಲಿನ ದ್ವೇಷದಿಂದ ಶಾಸಕರು ಎಲ್ಲಾ ಕಾಮಗಾರಿಗಳನ್ನು ನಡೆಸದೆ ನಿರ್ಲಕ್ಷಿಸಿದ್ದಾರೆ ಎಂದು ಅಪ್ಪಯ್ಯ ಬೇಸರ ವ್ಯಕ್ತಪಡಿಸಿದರು.

ಸುಮಾರು 23 ವರ್ಷಗಳ ಹಿಂದೆ ಅಂದಿನ ಶಾಸಕರು ಈಶ್ವರ ಬೊಟ್ಲಪ್ಪ ದೇವರ ಬೆಟ್ಟದ ಮೇಲೆ ನೀರಿನ ಟ್ಯಾಂಕ್ ನಿರ್ಮಿಸಿ ಇಡೀ ಗ್ರಾಮಕ್ಕೆ ಕುಡಿಯುವ ನೀರು ಸರಬರಾಜು ಮಾಡುವ ಯೋಜನೆ ರೂಪಿಸಿದ್ದರೂ, ಅದಕ್ಕೆ ಇಂದಿಗೂ ನೀರು ಹರಿಸಿಲ್ಲ. 2019ರ ಜೂನ್ ತಿಂಗಳವರೆಗೆ ಕುಡಿಯುವ ನೀರು ಸರಬರಾಜು ಮಾಡಿಲ್ಲ. ಇದೀಗ 23 ವರ್ಷಗಳ ಬಳಿಕ ಕುಡಿಯುವ ನೀರಿನ ಯೋಜನೆ ಉದ್ಘಾಟನೆಗೊಂಡಿದ್ದರೂ, ಗ್ರಾಮದ ಬಿಜೆಪಿ ಮುಖಂಡರೊಬ್ಬರ ಪ್ರಭಾವಕ್ಕೆ ಒಳಗಾಗಿ ಶಾಸಕರು ಗ್ರಾಮದ ಎಲ್ಲಾ ಜನರಿಗೆ ನೀರು ಒದಗಿಸುವಲ್ಲಿ ವಿಫಲರಾಗಿದ್ದಾರೆ ಎಂದು ಎಂ.ಎ. ಅಪ್ಪಯ್ಯ ದೂರಿದರು.

ಗ್ರಾಮದ ರಸ್ತೆ ಮತ್ತು ಕುಡಿಯುವ ನೀರಿನ ಯೋಜನೆಗಳನ್ನು ಶಾಸಕರು ಅನುಷ್ಠಾನಗೊಳಿಸದಿದ್ದಲ್ಲಿ ದೊಡ್ಡ ಮಟ್ಟದ ಹೋರಾಟಕ್ಕೆ ಗ್ರಾಮಸ್ಥರು ಅಣಿಯಾಗಬೇಕಾಗುತ್ತದೆ ಎಂದರು. ಸುದ್ದಿಗೋಷ್ಠಿಯಲ್ಲಿ ಗ್ರಾಮದ ನಿವಾಸಿ, ಮಾಜಿ ಸೈನಿಕÀ ಡಿ.ಸಿ. ತಿಮ್ಮಯ್ಯ, ಸಿ.ಎ.ದಿನೇಶ್, ಗ್ರಾಮಸ್ಥರಾದ ಕೆ.ಎಂ.ಅಯ್ಯಪ್ಪ, ಚಿಣ್ಣಪ್ಪ ಹಾಗೂ ಚಂಗಪ್ಪ ಉಪಸ್ಥಿತರಿದ್ದರು.