ಮಡಿಕೇರಿ, ಜು. 6: ಮದೆ ಗ್ರಾಮ ಪಂಚಾಯಿತಿಯ ನೂತನ ಕಟ್ಟಡವನ್ನು ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಅವರು ಉದ್ಘಾಟಿಸಿದರು.
ಜಿಲ್ಲಾ ಪಂಚಾಯಿತಿ, ತಾಲ್ಲೂಕು ಪಂಚಾಯಿತಿ, ಮದೆ ಗ್ರಾ.ಪಂ. ವತಿಯಿಂದ ನಡೆದ ಸಮಾರಂಭದಲ್ಲಿ ಟೇಪ್ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದ ವೀಣಾ ಅಚ್ಚಯ್ಯ ಅವರು ಸರ್ಕಾರದ ಸವಲತ್ತುಗಳನ್ನು ಪಡೆದು ಗ್ರಾಮೀಣಾಭಿವೃದ್ಧಿಗೆ ಶ್ರಮಿಸಬೇಕಿದೆ ಹೇಳಿದರು. ಗ್ರಾಮದ ಅಭಿವೃದ್ಧಿಗೆ ಎಲ್ಲರೂ ಕೈಜೋಡಿಸಿದಾಗ ಪ್ರಗತಿ ಸಾಧಿಸಲು ಸಾಧ್ಯ. ಆ ನಿಟ್ಟಿನಲ್ಲಿ ಗ್ರಾಮೀಣಾಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕಿದೆ. ಕುಡಿಯುವ ನೀರು, ರಸ್ತೆ, ಚರಂಡಿ, ವಿದ್ಯುತ್, ಶಿಕ್ಷಣ, ಆರೋಗ್ಯ ಹೀಗೆ ಮೂಲ ಸೌಲಭ್ಯಕ್ಕೆ ಒತ್ತು ನೀಡಬೇಕಿದೆ ಎಂದು ವೀಣಾ ಅಚ್ಚಯ್ಯ ಅವರು ತಿಳಿಸಿದರು.
ಸರ್ಕಾರದ ವತಿಯಿಂದ ಹಲವು ಗ್ರಾಮೀಣ ಅಭಿವೃದ್ಧಿ ಕಾರ್ಯಕ್ರಮ ಗಳು ನಡೆಯುತ್ತಿವೆ. ಕೃಷಿ, ತೋಟಗಾರಿಕೆ, ಪಶುಪಾಲನೆ, ಮೀನುಗಾರಿಕೆ ಹೀಗೆ ವಿವಿಧ ಕೃಷಿ ಚಟುವಟಿಕೆಗಳಲ್ಲಿ ತೊಡಗಿಸಿ ಕೊಳ್ಳುವದರಿಂದ ಅಭಿವೃದ್ಧಿ ಸಾಧಿಸಲು ಸಾಧ್ಯ ಎಂದರು.
ವಿಧಾನ ಪರಿಷತ್ ಸದಸ್ಯರ ಅನುದಾನದಿಂದ ಮದೆ ಗ್ರಾ.ಪಂ.ಅಭಿವೃದ್ಧಿಗೆ ಅನುದಾನ ನೀಡಲಾಗುವದು ಎಂದು ನುಡಿದರು.
ಕಳೆದ ವರ್ಷ ಸುರಿದ ಭಾರೀ ಮಳೆಯಿಂದ ಇಲ್ಲಿನ ಜನರು ತುಂಬಾ ತೊಂದರೆ ಅನುಭವಿಸಿದ್ದರು. ಇದರಿಂದ ಊರು ಬಿಡುವ ಪರಿಸ್ಥಿತಿ ನಿರ್ಮಾಣವಾಗಿತ್ತು, ಆದರೆ ಯಾರೂ ಸಹ ದೃತಿಗೆಡದೆ ಧೈರ್ಯದಿಂದ ಬದುಕು ಕಟ್ಟಿಕೊಳ್ಳುತ್ತಿದ್ದಾರೆ. ಮಳೆಗಾಲದಲ್ಲಿ ಒಂದೆರಡು ತಿಂಗಳು ತೊಂದರೆಗೆ ಸಿಲುಕಬೇಕಾಗುತ್ತದೆ. ಅದನ್ನು ಎದುರಿಸಿ ಜೀವನ ನಡೆಸಬೇಕು. ಯಾರೂ ಸಹ ಆತಂಕಕ್ಕೆ ಒಳಗಾಗಬಾರದು ಎಂದು ಹೇಳಿದರು.
ಗ್ರಾ.ಪಂ. ಅಧ್ಯಕ್ಷ ಮುದ್ಯನ ಚಂದ್ರಶೇಖರ್ ಮಾತನಾಡಿ, ಗ್ರಾ.ಪಂ. ನೂತನ ಕಟ್ಟಡದ ಬಳಿ ತಡೆಗೋಡೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಬೇಕಾಗಿ ವಿಧಾನ ಪರಿಷತ್ ಸದಸ್ಯರಲ್ಲಿ ಕೋರಿದರು.
ಇದೇ ಸಂದರ್ಭದಲ್ಲಿ ಸ್ಥಳ ದಾನಿಗಳಾದ ಎಸ್.ಜೆ. ಪ್ರಸಾದ್, ಪಂಚಾಯಿತಿ ಅಭಿವೃದ್ಧಿ ಅಧಿಕಾರಿ (ನಿವೃತ್ತ) ಕೆ.ಎಂ. ಬೋಜಮ್ಮ ಮತ್ತು ಗುತ್ತಿಗೆದಾರರನ್ನು ಸನ್ಮಾನಿಸಲಾಯಿತು.
ಜಿ.ಪಂ. ಸದಸ್ಯೆ ಯಾಲದಾಳು ಪದ್ಮಾವತಿ, ಸ್ಥಳ ದಾನಿಗಳಾದ ಎಸ್.ಜೆ. ಪ್ರಸಾದ್ ತಾ.ಪಂ. ಸದಸ್ಯ ಕೊಡಪಾಲು ಗಣಪತಿ ಮಾತನಾಡಿದರು. ಗ್ರಾ.ಪಂ. ಉಪಾಧ್ಯಕ್ಷೆ ಬಿ.ಎಸ್. ರತ್ನ, ಸದಸ್ಯರಾದ ಹುದೇರಿ ರಾಜೇಶ್, ಕೊಂಪುಳಿ ಹೇಮರಾಜ್, ಬಿ.ಜಿ.ಜಾನಕಿ, ಭಟ್ಯನ ಗಣೇಶ್, ಕೆ.ಎ.ಲೀಲಾವತಿ, ನಂಗಾರು ತೇಜಾವತಿ, ಪರಮೇಶ್ವರಿ, ಕಾಳೇರಮ್ಮನ ಬಿ.ಅಯ್ಯಣ್ಣ, ಸವಿತಾ ಆಚಾರಿ, ಪೊನ್ನೇಟಿ ನಿತ್ಯಾಕುಮಾರಿ, ಪ್ರಮುಖರಾದ ಕೊಲ್ಯದ ಗಿರೀಶ್, ಬೆಪ್ಪುರನ ಮೇದಪ್ಪ, ಜಗದೀಶ್, ಧನಂಜಯ, ನಂಜಯ್ಯ, ಇತರರು ಇದ್ದರು. ಗಿರೀಶ್ ತಾಳತ್ತಮನೆ ನಿರೂಪಿಸಿದರು. ಗ್ರಾ.ಪಂ.ಪಿಡಿಒ ಬಿ.ಪಿ.ಬಾಲಕೃಷ್ಣ ಸ್ವಾಗತಿಸಿದರು.