ಸೋಮವಾರಪೇಟೆ, ಜು. 6: ನ್ಯಾಯಾಲಯದ ಆದೇಶದನ್ವಯ ಸರಕು ಸಾಗಾಟ ವಾಹನಗಳಲ್ಲಿ ಹಾಗೂ ವೈಟ್ ಬೋರ್ಡ್ ಹೊಂದಿರುವ ಸಾರ್ವಜನಿಕರ, ವಿದ್ಯಾರ್ಥಿಗಳ ವಿದ್ಯಾರ್ಥಿ ಪೋಷಕರು ಸಾಗಾಣೆ ಯನ್ನು ತಡೆಗಟ್ಟಲು ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಕ್ರಮಕೈಗೊಂಡ ಬೆನ್ನಲ್ಲೇ ತೋಟ ಮಾಲೀಕರು, ವಾಹನ ಚಾಲಕರು ತೊಂದರೆಗೆ ಒಳಗಾಗಿದ್ದಾರೆ.
ಮೊದಲೇ ಕಾರ್ಮಿಕರ ಕೊರತೆ, ಕಡಿಮೆ ಇಳುವರಿ, ಅಧಿಕ ಕೂಲಿ ಸೇರಿದಂತೆ ತೋಟ ನಿರ್ವಹಣೆಯೇ ಕಷ್ಟಸಾಧ್ಯವಾಗಿರುವ ಮಧ್ಯೆ ಇದೀಗ ನ್ಯಾಯಾಲಯದ ಆದೇಶದ ಮೇರೆ ಪೊಲೀಸರು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿರುವದು ಸಮಸ್ಯೆ ಜಟಿಲಗೊಳ್ಳಲು ಕಾರಣವಾಗಿದೆ.
ಗುಡ್ಡಗಾಡು ಪ್ರದೇಶವಾಗಿರುವ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಅರೇಬಿಕಾ ಕಾಫಿ ಅಧಿಕವಾಗಿ ಬೆಳೆಯಲಾಗುತ್ತಿದ್ದು, ವರ್ಷಕ್ಕೆ ಒಂದು ಬಾರಿ ಫಸಲು ನೀಡಿದರೂ ವರ್ಷ ಪೂರ್ತಿ ನಿರ್ವಹಣೆ ಮಾಡಲೇಬೇಕಿದೆ.
ಅರೇಬಿಕಾ ತೋಟದಲ್ಲಿ ವರ್ಷವಿಡೀ ಕೆಲಸಗಳಿದ್ದು, ಸ್ಥಳೀಯವಾಗಿ ಕಾರ್ಮಿಕರ ಕೊರತೆ ಇರುವ ಹಿನ್ನೆಲೆ ಹೊರಭಾಗದಿಂದ ವಾಹನಗಳಲ್ಲಿ ಕಾರ್ಮಿಕರನ್ನು ಸಾಗಿಸಬೇಕಾದ ಪರಿಸ್ಥಿತಿ ಇದೆ. ಪಿಕ್ ಅಪ್, 407 ವ್ಯಾನ್, ಗೂಡ್ಸ್ ಆಟೋ ಸೇರಿದಂತೆ ಇನ್ನಿತರ ವಾಹನಗಳು ಕಾರ್ಮಿಕರ ಸಾಗಾಟಕ್ಕೆ ಬಳಕೆ ಯಾಗುತ್ತಿವೆ. ಬಹುತೇಕ ಪಿಕ್ಅಪ್ಗಳಲ್ಲಿ ಕಾರ್ಮಿಕರನ್ನು ಸಾಗಿಸಲಾಗುತ್ತಿದ್ದು, ಇದೀಗ ಪೊಲೀಸರು ಇಂತಹ ಕ್ರಮಕ್ಕೆ ಬ್ರೇಕ್ ಹಾಕುತ್ತಿದ್ದಾರೆ.
ಕಾಫಿ ತೋಟಗಳ ಮಾಲೀಕರೂ ಎಲ್ಲಾ ರೀತಿಯ ಉಪಯೋಗಕ್ಕೆ ಪಿಕ್ಅಪ್ಗಳನ್ನೇ ಅವಲಂಭಿಸಿದ್ದಾರೆ. ತೋಟದ ಉತ್ಪನ್ನಗಳು,ಮರ, ಸೇರಿದಂತೆ ಎಲ್ಲಾ ರೀತಿಯ ಸರಕುಗಳ ಸಾಗಾಟಕ್ಕೆ ಪಿಕ್ ಅಪ್ ಗಳನ್ನೇ ಬಳಸುತ್ತಿದ್ದು, ತೋಟ ಕೆಲಸಕ್ಕೆ ಇದೇ ವಾಹನದಲ್ಲಿ ಕಾರ್ಮಿಕರನ್ನು ಸಾಗಾಟ ಗೊಳಿಸುತ್ತಿದ್ದರು.
ಹತ್ತರಿಂದ ಹದಿನೈದು ಮಂದಿ ಕಾರ್ಮಿಕರನ್ನು ಒಮ್ಮೆಲೆ ಸಾಗಾಟ ಗೊಳಿಸಲು ಪಿಕ್ ಅಪ್ ಹೆಚ್ಚಿನ ಅನುಕೂಲ ಕಲ್ಪಿಸಿತ್ತು. ಇದರೊಂದಿಗೆ ಸ್ವಂತ ವಾಹನ ಹೊಂದಿಲ್ಲದ ಮಾಲೀಕರು ಪಿಕ್ಅಪ್ಗೆ ಬಾಡಿಗೆ ನೀಡಿ ಕಾರ್ಮಿಕರನ್ನು ಕರೆತರುತ್ತಿದ್ದರು.
ಆದರೆ ಇತ್ತೀಚೆಗೆ ಪೊಲೀಸರು ಇಂತಹ ವಾಹನಗಳಲ್ಲಿ ಸಾರ್ವಜನಿಕರ ಸಾಗಾಟಕ್ಕೆ ತಡೆಯೊಡ್ಡಿರುವದರಿಂದ ತೋಟ ಮಾಲೀಕರು, ವಾಹನ ಚಾಲಕರು, ಕಾರ್ಮಿಕರು ಸಂಕಷ್ಟ ಎದುರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ.
ಈಗಾಗಲೇ ಸೋಮವಾರಪೇಟೆ ಪೊಲೀಸರು 8 ಪಿಕ್ಅ¥ ಗಳ ವಿರುದ್ಧ ಮೊಕದ್ದಮೆ ದಾಖಲಿಸಿಕೊಂಡಿದ್ದು, ಚಾಲಕರ ವಾಹನ ಚಾಲನಾ ಪರವಾನಗಿಯನ್ನು ಅಮಾನತ್ತುಗೊಳಿಸಲು ಆರ್.ಟಿ.ಓ. ಕಚೇರಿಗೆ ಶಿಪಾರಸ್ಸು ಮಾಡಿದ್ದಾರೆ.
ಈ ಮಧ್ಯೆ ವಾಹನ ಚಾಲಕರು,ಮಾಲೀಕರು, ತೋಟ ಮಾಲೀಕರು, ಆಟೋ ಚಾಲಕರುಗಳು ಪೊಲೀಸ್ ಠಾಣೆಗೆ ತೆರಳಿ ಕಾನೂನಿನಿಂದ ಕೊಂಚ ಸಡಿಲಿಕೆ ನೀಡುವಂತೆ ಮನವಿ ಮಾಡಿದ್ದಾರೆ.
ಇದರೊಂದಿಗೆ ಸೋಮವಾರಪೇಟೆ ಪಟ್ಟಣ ವ್ಯಾಪ್ತಿಯಲ್ಲಿ ಮಾರುತಿ ಓಮ್ನಿ ಕಾರು, ಆಟೋಗಳಲ್ಲಿ ಪರವಾನಗಿಗಿಂತ ಹೆಚ್ಚಿನ ಮಕ್ಕಳನ್ನು ಸಾಗಾಟಗೊಳಿಸುವ ಪ್ರಕರಣಗಳನ್ನು ಪತ್ತೆಹಚ್ಚುತ್ತಿದ್ದು, ಅವುಗಳ ವಿರುದ್ಧವೂ ಕ್ರಮ ಜರುಗಿಸುತ್ತಿದ್ದಾರೆ. ಇದರಿಂದಾಗಿ ಶಾಲಾ ವಿದ್ಯಾರ್ಥಿಗಳಿಗೆ, ಪೋಷಕರಿಗೆ ಸಂಕಷ್ಟ ಎದುರಾಗಿದೆ. ಇತ್ತ ಇದನ್ನೇ ನಂಬಿಕೊಂಡಿರುವ ಚಾಲಕರ ಪರಿಸ್ಥಿತಿ ಡೋಲಾಯಮಾನವಾಗಿದೆ.