ಮಡಿಕೇರಿ, ಜು. 6: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಕರ್ನಾಟಕದ ಜನತೆ ಬಹುಮತದೊಂದಿಗೆ ಬಿಜೆಪಿಯ 105 ಶಾಸಕರನ್ನು ಗೆಲ್ಲಿಸಿದ್ದರೂ, ಕಳೆದ ಒಂದು ವರ್ಷದಿಂದ ಅಧರ್ಮದ ಹಾದಿಯಲ್ಲಿರುವ ಅಸ್ಥಿರ ಸರಕಾರ ಇಂದು ಕಾಂಗ್ರೆಸ್ ಹಾಗೂ ಜೆಡಿಎಸ್‍ನ ಬಹುತೇಕ ಶಾಸಕರಿಗೆ ಬೇಡವೆನಿಸಿದೆ. ಹೀಗಾಗಿ ಈ ಅಸ್ಥಿರ ಸರಕಾರ ಹೋಗಿ ರಾಜ್ಯದ ಜನತೆಯ ಆಶಯಗಳಿಗೆ ಸ್ಪಂದಿಸುವಂತಹ ಸ್ಥಿರ ಸರಕಾರ ಬರಬೇಕಿದೆ ಎಂದು ಬಿಜೆಪಿ ಮೇಲ್ಮನೆ ಸದಸ್ಯೆ ತೇಜಸ್ವಿನಿ ರಮೇಶ್ ಪ್ರತಿಪಾದಿಸಿದ್ದಾರೆ.

ಬಿಜೆಪಿ ಸದಸ್ಯತ್ವ ಅಭಿಯಾನದಲ್ಲಿ ಭಾಗವಹಿಸಲು ನಗರಕ್ಕೆ ಆಗಮಿಸಿದ ಅವರು, ‘ಶಕ್ತಿ’ಯೊಂದಿಗೆ ಮಾತನಾಡುತ್ತಾ, ವಿಧಾನಸಭೆ ಹಾಗೂ ಲೋಕಸಭೆಯ ಚುನಾವಣೆಗಳಲ್ಲಿ ರಾಜ್ಯದ ಜನತೆ ಬಿಜೆಪಿಯನ್ನು ಬೆಂಬಲಿಸಿದ್ದರೂ, ಜನಾದೇಶವನ್ನು ಧಿಕ್ಕರಿಸಿ ಅಪವಿತ್ರ ಮೈತ್ರಿಯೊಂದಿಗೆ 37 ಶಾಸಕರನ್ನು ಹೊಂದಿರುವ ಜೆಡಿಎಸ್ ವಾಮಮಾರ್ಗದಿಂದ ಅಧಿಕಾರದಲ್ಲಿ ಇದೆ ಎಂದು ಟೀಕಿಸಿದರು.

ಪತನ ಸನ್ನಿಹಿತ : ಅಪ್ಪಚ್ಚುರಂಜನ್ : ಕರ್ನಾಟಕ ಸರಕಾರ ಡಿಸೆಂಬರ್ ಒಳಗೆ ಬೀಳಲಿದೆ ಎಂದು ವಾರದ ಹಿಂದೆಯೇ ತಿಳಿಸಿದ್ದಾಗಿ ನೆನಪಿಸಿದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಈ ಸರಕಾರ ಪತನಗೊಳ್ಳುವ ಕಾಲ ಸನ್ನಿಹಿತವಾಗಿದೆ ಎಂದರು.

ಒಳ್ಳೆಯ ಸುದ್ದಿ ಲಭಿಸಲಿದೆ : ಇನ್ನೋರ್ವ ಮೇಲ್ಮನೆÀ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ ಪ್ರತಿಕ್ರಿಯಿಸಿತ್ತಾ, ಶೀಘ್ರವೇ ರಾಜ್ಯದ ಜನತೆಗೆ ಒಳ್ಳೆಯ ಸುದ್ಧಿ ಲಭಿಸಲಿದೆ ಎಂದು ನಗೆ ಬೀರಿದರು.