ಶ್ರೀಮಂಗಲ, ಜು. 5: ದಕ್ಷಿಣ ಕೊಡಗಿನ ಶ್ರೀಮಂಗಲ, ಬಿರುನಾಣಿ, ಟಿ. ಶೆಟ್ಟಿಗೇರಿ, ಬಿ.ಶೆಟ್ಟಿಗೇರಿ, ಹುದಿಕೇರಿ ವ್ಯಾಪ್ತಿಗೆ ಕಳೆದ ಮೂರು ದಿನಗಳಿಂದ ಧಾರಾಕಾರ ಮಳೆಯಾಗಿದ್ದು ಗುರುವಾರ ರಾತ್ರಿ ಮತ್ತು ಶುಕ್ರವಾರ ಸಂಜೆಯವರೆಗೂ ಮಳೆ ಮುಂದುವರೆದಿದೆ. ಜೂನ್ ತಿಂಗಳಲ್ಲಿ ವಾಡಿಕೆಯ ಮಳೆಯಾಗದೆ ಕ್ಷೀಣವಾಗಿದ್ದ ಮುಂಗಾರು ಈ ವ್ಯಾಪ್ತಿಯಲ್ಲಿ ಕಳೆದ ಮೂರು ದಿನಗಳಿಂದ ಬಿರುಸು ತೋರಿಸುತ್ತಿದೆ.

ಕಳೆದ ಮೂರು ದಿನಗಳಿಂದ ಬಿರುನಾಣಿ ವ್ಯಾಪ್ತಿಗೆ 11 ಇಂಚು (275ಮಿ.ಮೀ.) ಮಳೆಯಾಗಿದೆ ಈ ವರ್ಷ ಇದುವರೆಗೆ 44 ಇಂಚು (1100 ಮಿ.ಮೀ) ಮಳೆಯಾಗಿದ್ದು ಕಳೆದ ವರ್ಷ ಇದೇ ಅವಧಿಗೆ 103 ಇಂಚು (2575ಮಿ.ಮೀ.) ಮಳೆಯಾಗಿತ್ತು.

ಈ ವ್ಯಾಪ್ತಿಯ ಬ್ರಹ್ಮಗಿರಿ ಬೆಟ್ಟ ಪ್ರದೇಶಕ್ಕೆ ಧಾರಕಾರ ಮಳೆ ಹಿನ್ನೆಲೆ ಇಲ್ಲಿ ಹುಟ್ಟಿ ಹರಿಯುವ ಲಕ್ಷ್ಮಣತೀರ್ಥ, ಕಕ್ಕಟ್ ಹೊಳೆ, ಕೊಂಗಣ ಪೊಳೆ ನದಿ ನೀರಿನ ಮಟ್ಟ ಹೆಚ್ಚಾಗಿದೆ.

ಧಾರಕಾರ ಮಳೆ ಹಾಗೂ ಗಾಳಿ ಇರುವ ಹಿನ್ನೆಲೆ ಬಿರುನಾಣಿ, ಪರಕಟಗೇರಿ, ತೆರಾಲು, ಬಾಡಗರಕೇರಿ ಸೇರಿದಂತೆ ಶ್ರೀಮಂಗಲ ವ್ಯಾಪ್ತಿಯ ಗ್ರಾಮೀಣ ಪ್ರದೇಶಗಳಿಗೆ ಗುರುವಾರ ರಾತ್ರಿ ವಿದ್ಯುತ್ ಕಡಿತ ಉಂಟಾಗಿತ್ತು.

ಹುದಿಕೇರಿ- ಬಿರುನಾಣಿ ನೂತನ ಸಂಪರ್ಕ ರಸ್ತೆ ನಡುವೆ ಮರ ಬಿದ್ದ ಪರಿಣಾಮ ಗ್ರಾಮಸ್ಥರು ಮರ ತೆರವುಗೊಳಿಸಿ ಸಂಚಾರಕ್ಕೆ ಅನುವು ಮಾಡಿದರು.

ಪೊನ್ನಂಪೇಟೆ, ಕಾನೂರು, ಬಲ್ಯಮಂಡೂರು ವ್ಯಾಪ್ತಿಗೂ ಕಳೆದ 24 ಗಂಟೆಯಲ್ಲಿ ಉತ್ತಮ ಮಳೆಯಾಗಿದೆ. ಕಳೆದ 24 ಗಂಟೆಯಲ್ಲಿ ಪೊನ್ನಂಪೇಟೆಗೆ 3 ಇಂಚು (75ಮಿ.ಮೀ.) ಮಳೆಯಾಗಿದೆ. ಬಾಳೆಲೆ, ನಿಟ್ಟೂರು, ರಾಜಾಪುರ, ಕೊಟ್ಟಗೇರಿ ವ್ಯಾಪ್ತಿಯಲ್ಲಿ ಸಾಧಾರಣ ಮಳೆಯಾಗಿದೆ.