ಕೂಡಿಗೆ, ಜು. 5: ಕೂಡುಮಂಗಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲುಗುಂದ ಗ್ರಾಮದ (ಹಾರಂಗಿ) ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮೇಲ್ಛಾವಣಿಯು ಹಾನಿಗೊಳಗಾಗಿ ಮಳೆಯ ನೀರು ಗೋಡೆಯ ಮೇಲೆ ಹರಿಯುವದರಿಂದ ಶಾಲೆಯು ಶಿಥಿಲಾವಸ್ಥೆಯಲ್ಲಿದೆ.

ಈ ಶಾಲೆಯಲ್ಲಿ ಒಂದನೇ ತರಗತಿಯಿಂದ ಎಂಟನೇ ತರಗತಿ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಈ ಶಾಲೆಯು ಹಾರಂಗಿ ನೀರಾವರಿ ನಿಗಮದ ಕಟ್ಟಡವಾಗಿರುವದರಿಂದ ನೀರಾವರಿ ನಿಗಮದವರು ದುರಸ್ತಿಪಡಿಸಲಿ ಎಂದು ಶಿಕ್ಷಣ ಇಲಾಖೆಯವರು ಹೆಚ್ಚು ಹಣ ಬಿಡುಗಡೆ ಮಾಡಿರುವದಿಲ್ಲ.

ನೀರಾವರಿ ನಿಗಮದವರು ಇದರತ್ತ ಗಮನಹರಿಸದೆ, ಶಾಲೆಯು ಶಿಥಿಲಾವಸ್ಥೆ ತಲಪಿದೆ. ಶಾಲೆ, ಅಂಗನವಾಡಿಗಳ ಕುಂದುಕೊರತೆ ಬಗ್ಗೆ ಕೂಡುಮಂಗಳೂರು ಗ್ರಾ.ಪಂ.ನಲ್ಲಿ ಸಭೆ ನಡೆಸಿದ ಸಂದರ್ಭ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಅವರಿಗೆ ಶಾಲೆಯನ್ನು ದುರಸ್ತಿಪಡಿಸುವಂತೆ ಗ್ರಾಮಸ್ಥರು ಮನವಿ ನೀಡಿದ್ದರು. ನಂತರ ಶಾಲೆಯ ದುರಸ್ತಿಪಡಿಸುವದಾಗಿ ಭರವಸೆ ನೀಡಿದ್ದಾರೆ.

ವಿದ್ಯಾರ್ಥಿಗಳಿಗೆ ಯಾವದೇ ಅನಾಹುತಗಳಾಗುವ ಮುನ್ನ ಸಂಬಂಧಪಟ್ಟವರು ಶಾಲೆಯನ್ನು ದುರಸ್ತಿಗೊಳಿಸಬೇಕು ಎಂದು ಈ ವ್ಯಾಪ್ತಿಯ ಪೋಷಕರು, ಸಾರ್ವಜನಿಕರು ಆಗ್ರಹಿಸಿದ್ದಾರೆ.