ಕುಶಾಲನಗರ, ಜು. 5: ದುಬಾರೆ ಸಾಕಾನೆ ಶಿಬಿರದ ಬಳಿ ಕಳೆದ ಹಲವು ತಿಂಗಳುಗಳಿಂದ ನಿರ್ಬಂಧ ಗೊಳಿಸಲಾಗಿದ್ದ ರಿವರ್ ರ್ಯಾಫ್ಟಿಂಗ್ ಸಾಹಸ ಕ್ರೀಡಾ ಚಟುವಟಿಕೆಗೆ ಶುಕ್ರವಾರ ಚಾಲನೆ ದೊರೆತಿದೆ. ರಿವರ್ ರ್ಯಾಫ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿಯ ಹಲವು ನಿಬಂಧನೆಗಳಿಗೆ ಒಳಪಟ್ಟು ಮತ್ತೆ ಪ್ರಾರಂಭವಾದ ಸಾಹಸಕ್ರೀಡೆಗೆ ಸೋಮವಾರಪೇಟೆ ಉಪ ವಿಭಾಗದ ಪೊಲೀಸ್ ಉಪ ಅಧೀಕ್ಷಕ ಪಿ.ಕೆ.ಮುರಳೀಧರ್ ನದಿ ತಟದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಿದರು.ಈ ಸಂದರ್ಭ ಮಾತನಾಡಿದ ಡಿವೈಎಸ್ಪಿ ಮುರಳೀಧರ್, ಮುಖ್ಯವಾಗಿ ಪ್ರವಾಸಿ ಕೇಂದ್ರದಲ್ಲಿ ಪ್ರವಾಸಿಗರ ಸುರಕ್ಷತೆ ಮತ್ತು ಭದ್ರತೆಗೆ ಆದ್ಯತೆ ಕಲ್ಪಿಸಬೇಕು. ಯಾವದೇ ಸಂದರ್ಭ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಬೇಕೆಂದು ಸೂಚಿಸಿದರು.ಈ ಸಂದರ್ಭ ಸುದ್ದಿಗಾರ ರೊಂದಿಗೆ ಮಾತನಾಡಿದ ದುಬಾರೆ ರ್ಯಾಫ್ಟಿಂಗ್ ಅಸೋಸಿಯೇಷನ್ ಅಧ್ಯಕ್ಷ ಕೃಷ್ಣಪ್ಪ, ಸಿ.ಎಲ್.ವಿಶ್ವ ಹಾಗೂ ಕೆ.ಎಸ್.ರತೀಶ್, ದುಬಾರೆ ಪ್ರವಾಸಿ ಕೇಂದ್ರವನ್ನು ವಿಶ್ವ ಮಟ್ಟದಲ್ಲಿ ಗುರುತಿಸುವ ನಿಟ್ಟಿನಲ್ಲಿ ಸ್ಥಳೀಯ ಉದ್ಯಮಿಗಳು ಶ್ರಮಿಸಿರುವದಾಗಿ ಹೇಳಿದರು. ಕಳೆದ ಒಂದು ವರ್ಷದ ಹಿಂದೆ ದುಬಾರೆಯಲ್ಲಿ ನಡೆದ ಅಹಿತಕರ ಘಟನೆ ಹಿನೆÀ್ನಲೆಯಲ್ಲಿ ರ್ಯಾಫ್ಟಿಂಗ್ ಕ್ರೀಡೆಗೆ ನಿರ್ಭಂದ ಹೇರಲಾಗಿತ್ತು. ಇದೀಗ ಉಸ್ತುವಾರಿ ಸಚಿವ ಸಾ.ರಾ.ಮಹೇಶ್, ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಡಾ.ಡಿ.ಪಿ.ಸುಮನ್ ಅವರ ಸಹಕಾರದಿಂದ ರ್ಯಾಫ್ಟಿಂಗ್‍ಗೆ ಮತ್ತೆ ಚಾಲನೆ ದೊರೆತಿದೆ. ಈಗಾಗಲೆ 5 ಮಂದಿ ಮಾಲೀಕರಿಗೆ ತಲಾ ಎರಡು ರ್ಯಾಫ್ಟರ್‍ಗಳಂತೆ 10 ರ್ಯಾಫ್ಟರ್‍ಗಳು ಕಾರ್ಯಾರಂಭಗೊಳಿಸಿದೆ ಎಂದು ಮಾಹಿತಿ ಒದಗಿಸಿದರು.
ಕೆಲವೇ ದಿನಗಳಲ್ಲಿ ಎರಡನೇ ಹಂತದಲ್ಲಿ ಇನ್ನೂ ಹೆಚ್ಚುವರಿ ರ್ಯಾಫ್ಟರ್‍ಗಳು ನದಿಯಲ್ಲಿ ಸಾಹಸ ಕ್ರೀಡೆಯಲ್ಲಿ (ಮೊದಲ ಪುಟದಿಂದ) ತೊಡಗಲು ಅನುಮತಿ ದೊರಕಲಿದೆ ಎಂದು ಮಾಹಿತಿ ನೀಡಿದ ರ್ಯಾಫ್ಟರ್ ಮಾಲೀಕರಾದ ಸಿ.ಎಲ್.ವಿಶ್ವ, ದುಬಾರೆ ಕೇಂದ್ರ ಸ್ಥಾನದಿಂದ 7 ಕಿಮೀ ಅಂತರದ ತನಕ ರ್ಯಾಫ್ಟಿಂಗ್ ಕ್ರೀಡೆ ನಡೆಯಲಿದೆ. ತಲಾ ವ್ಯಕ್ತಿಗೆ ರೂ. 600 ರಂತೆ ಒಂದು ರ್ಯಾಫ್ಟರ್‍ನಲ್ಲಿ 6 ಮಂದಿಯನ್ನು ಕರೆಯೊಯ್ಯಬಹುದು. ಗೋವಾದ ರಾಷ್ಟ್ರೀಯ ಜಲಕ್ರೀಡಾ ಸಂಸ್ಥೆಯಿಂದ ತರಬೇತುಗೊಂಡ ಗೈಡ್‍ಗಳನ್ನು ಸಾಹಸ ಕ್ರೀಡೆಯಲ್ಲಿ ಬಳಸಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಎಲ್ಲಾ ನೀತಿ ನಿಯಮಗಳನ್ನು ಪಾಲಿಸುವ ಮೂಲಕ ನದಿಯಲ್ಲಿ ಸಾಹಸ ಕ್ರೀಡೆ ನಡೆಯುವ ಸಂದರ್ಭ ಯಾವದೇ ರೀತಿಯ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಲಾಗುವದು ಎಂದು ರ್ಯಾಫ್ಟಿಂಗ್ ನಿರ್ವಹಣಾ ಸಮಿತಿ ಪ್ರತಿನಿಧಿ ಕೆ.ಎಸ್.ರತೀಶ್ ಭರವಸೆ ವ್ಯಕ್ತಪಡಿಸಿದರು. ಯಾವದೇ ರೀತಿಯ ನ್ಯೂನತೆಗಳು ಕಂಡುಬಂದಲ್ಲಿ ತಕ್ಷಣ ತಮ್ಮ ಅಸೋಸಿಯೇಷನ್‍ಗೆ ಮಾಹಿತಿ ನೀಡಿ ಸಹಕರಿಸುವಂತೆ ಅಸೋಸಿಯೇಷನ್ ಅಧ್ಯಕ್ಷರಾದ ಕೃಷ್ಣಪ್ಪ ಕೋರಿದರು.
ಈ ಸಂದರ್ಭ ರ್ಯಾಫ್ಟರ್ ಮಾಲೀಕರಾದ ತಳೂರು ಚೇತನ್, ಸುಜಿತ್, ಪಾರೇರ ವಸಂತ್, ಎಂ.ಟಿ.ಸಾಗರ್, ನಂಜರಾಯಪಟ್ಟಣ ಗ್ರಾಪಂ ಸದಸ್ಯ ಟಿ.ಕೆ.ಸುಮೇಶ್, ಕುಶಾಲನಗರ ಗ್ರಾಮಾಂತರ ಪೊಲೀಸ್ ಠಾಣಾಧಿಕಾರಿ ನಂದೀಶ್ ಮತ್ತಿತರರು ಇದ್ದರು.