ಮಡಿಕೇರಿ, ಜು. 5: ಕೊಡಗು ಜಿಲ್ಲೆಯಲ್ಲಿ ಈ ತನಕ ವಾಡಿಕೆಯಂತೆ ಮುಂಗಾರು ಮಳೆ ಕಂಡುಬಂದಿರಲಿಲ್ಲ. ಜೂನ್ ತಿಂಗಳು ಪೂರ್ಣಗೊಂಡು ಜುಲೈ ಮೊದಲವಾರ ಪೂರ್ಣಗೊಳ್ಳುತ್ತಿರುವ ಈ ಹಂತದಲ್ಲಿ ಜಿಲ್ಲೆ ತನ್ನ ಸಹಜ ಮುಂಗಾರುವಿನ ಲಕ್ಷಣಗಳನ್ನು ಕಾಣುತ್ತಿವೆ. ಜೂನ್ 22ರಂದು ಆದ್ರ್ರಾ ಮಳೆ ನಕ್ಷತ್ರ ಆರಂಭಗೊಂಡಿದ್ದು, ಈ ಮಳೆಯೂ ಸುರಿಯದ ಹಿನ್ನೆಲೆಯಲ್ಲಿ ಮಲೆನಾಡು ಜಿಲ್ಲೆಯಾದ ಕೊಡಗು ಈ ಬಾರಿ ಹಿಂದಿನ ವರ್ಷಗಳಂತೆ ಮಳೆಗಾಲದ ಸನ್ನಿವೇಶವನ್ನು ಕಾಣಲಿದೆಯೇ ಎಂಬಂತಾಗಿತ್ತು. ಇದೀಗ ತಾ. 5ರಂದು ಆದ್ರ್ರಾ ಮಳೆ ನಕ್ಷತ್ರ ಪೂರ್ಣಗೊಂಡಿದ್ದು, ನಿನ್ನೆಯಿಂದ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮುಂಗಾರು ಮಲೆ ಚುರುಕುಗೊಳ್ಳುತ್ತಿದೆ. ದಕ್ಷಿಣ ಕೊಡಗಿನ ಗ್ರಾಮೀಣ ಪ್ರದೇಶಗಳಲ್ಲಿ ಕಳೆದ ಕೆಲವು ದಿನಗಳಿಂದ ನಿರಂತರವಾಗಿ ಮಳೆ ಸುರಿಯದಿದ್ದರೂ ಅಲ್ಲಿನ ಹಲವಾರು ಕಡೆಗಳಲ್ಲಿ ಪ್ರತಿದಿನ ಒಂದಷ್ಟು ಹೆಚ್ಚಿನ ಮಳೆಯಾಗುತ್ತಿತ್ತು. ಉಳಿದಂತೆ ಜಿಲ್ಲೆಯ ಇತರೆಡೆಗಳಲ್ಲಿ ಮಳೆಗಾಲದ ಸ್ಪಷ್ಟ ಚಿತ್ರಣ ಕಂಡುಬಂದಿರಲಿಲ್ಲ. ಇದೀಗ ಜಿಲ್ಲಾ ಕೇಂದ್ರವಾದ ಮಡಿಕೇರಿಯೂ ಸೇರಿದಂತೆ ಜಿಲ್ಲೆಯ ಬಹುತೇಕ ಕಡೆಗಳಲ್ಲಿ ಮಳೆ ಬಿರುಸುಗೊಳ್ಳುತ್ತಿರುವ ಬಗ್ಗೆ ವರದಿಯಾಗಿದೆ. ಈ ತನಕ ಇದ್ದ ಬಿಸಿಲಿನ ಸನ್ನಿವೇಶ ಮರೆಯಾದಂತಿದ್ದು, ನಿರಂತರವಾಗಿ ಮಳೆ ಸುರಿಯುತ್ತಿದೆ. ಇದರೊಂದಿಗೆ ಚಳಿಯ ವಾತಾವರಣವೂ ಕಂಡುಬರುತ್ತಿದೆ.

ಕಳೆದ ವರ್ಷಕ್ಕೆ ಹೋಲಿಸಿದರೆ ಇಡೀ ಜಿಲ್ಲೆ ಸೇರಿದಂತೆ ಮೂರು ತಾಲೂಕುಗಳಲ್ಲಿಯೂ ಮಳೆಯ ಪ್ರಮಾಣ ತೀರಾ

(ಮೊದಲ ಪುಟದಿಂದ) ಕಡಿಮೆಯಿದ್ದು, ಕೃಷಿ ಚಟುವಟಿಕೆಗಳು ವಿಳಂಬವಾಗುತ್ತಿವೆ. ಇದೀಗ ತಾ. 6ರಿಂದ (ಇಂದಿನಿಂದ) ಪುನರ್ವಸು ಮಳೆ ನಕ್ಷತ್ರ ಆರಂಭಗೊಳ್ಳಲಿದ್ದು, ಮಳೆಗಾಲ ಚೇತರಿಕೆ ಕಾಣುವ ನಿರೀಕ್ಷೆ ಉಂಟಾಗಿದೆ. ದಕ್ಷಿಣ ಕೊಡಗಿನ ಬ್ರಹ್ಮಗಿರಿ ತಪ್ಪಲುವಿನ ಗ್ರಾಮೀಣ ಪ್ರದೇಶಗಳು ಸೇರಿದಂತೆ ಅಲ್ಲಿನ ಹಲವೆಡೆಗಳಲ್ಲಿ ಈ ಬಾರಿ ಕೆಲವು ದಿನಗಳಿಂದ ಇತರೆಡೆಗಳಿಗಿಂತ ಒಂದಷ್ಟು ಹೆಚ್ಚು ಮಳೆಯಾಗಿರುವದು ವಿಶೇಷವಾಗಿದೆ. ಕಳೆದ ವರ್ಷ ಜಿಲ್ಲೆಯಲ್ಲಿ ಉಂಟಾದ ಅತಿವೃಷ್ಟಿ ಸೇರಿದಂತೆ ಹತ್ತು ಹಲವು ರೀತಿಯ ಆಪತ್ತಿನಿಂದ ಕಂಗೆಟ್ಟಿರುವ ಜನತೆ ಈ ಬಾರಿ ಅಂತಹ ಸನ್ನಿವೇಶ ಎದುರಾಗದಿರಲಿ ಎಂಬ ಆಶಯ ಹೊಂದಿದ್ದರೂ ಈ ಕೃಷಿ ಪ್ರಧಾನವಾದ ಜಿಲ್ಲೆಗೆ ಅಗತ್ಯ ಮಳೆ ಅನಿವಾರ್ಯವೂ ಆಗಿದೆ. ರಾಜ್ಯದಲ್ಲಿ ಮುಂಗಾರು ನಿರೀಕ್ಷಿತವಾಗಿ ಕಂಡುಬಾರದೆ ಬರಗಾಲದ ಸನ್ನಿವೇಶ ಎದುರಾಗುತ್ತಿರುವ ಈ ಪರಿಸ್ಥಿತಿಯಲ್ಲಿ ಕೊಡಗಿನಲ್ಲಿ ಮುಂಗಾರು ಒಂದಷ್ಟು ಚುರುಕುಗೊಳ್ಳುತ್ತಿರುವದು ಆಶಾಭಾವನೆ ಮೂಡಿಸುತ್ತಿದೆ.

ಕಾಡಾನೆಗಳು ಸೇರಿದಂತೆ ವನ್ಯಪ್ರಾಣಿಗಳ ಉಪಟಳ, ತೋಟ ಕೆಲಸಗಳ ನಿರ್ವಹಣೆ, ಕಾರ್ಮಿಕರ ವಿಚಾರ, ಶಾಲೆಗಳಿಗೆ ಮಕ್ಕಳನ್ನು ಕಳುಹಿಸಲು ಆಗುತ್ತಿರುವ ಸಮಸ್ಯೆಗಳು, ಇದರೊಂದಿಗೆ ಈ ವಿಚಾರದ ಬಗ್ಗೆ ಪ್ರಸ್ತುತ ನಡೆಯುತ್ತಿರುವ ಕಾನೂನು ಸಂಬಂಧಿತವಾದ ಪೊಲೀಸ್ ಕಾರ್ಯಾಚರಣೆಯ ನಡುವೆ ಜಿಲ್ಲೆಯ ಜನತೆ ಮಳೆಗಾಲವನ್ನು ಎದುರಿಸಲು ಸಂಕಷ್ಟದ ನಡುವೆಯೂ ನಿಧಾನಗತಿಯಲ್ಲಿ ಹೊಂದಿಕೊಳ್ಳುತ್ತಿದ್ದಾರೆ.

ಮಳೆ ವಿವರ

ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 1.27 ಇಂಚು ಮಳೆಯಾಗಿದೆ. ಜನವರಿಯಿಂದ ಈ ತನಕ 19.33 ಇಂಚು ಮಳೆ ಬಿದ್ದಿದ್ದು, ಕಳೆದ ವರ್ಷ ಈ ಅವಧಿಯಲ್ಲಿ 54.44 ಇಂಚು ಮಳೆಯಾಗಿತ್ತು. ಮಡಿಕೇರಿ ತಾಲೂಕಿನಲ್ಲಿ ಕಳೆದ 24 ಗಂಟೆಯಲ್ಲಿ 2.11 ಇಂಚು, ವೀರಾಜಪೇಟೆ ತಾಲೂಕಿನಲ್ಲಿ 0.98 ಹಾಗೂ ಸೋಮವಾರಪೇಟೆ ತಾಲೂಕಿನಲ್ಲಿ 0.73 ಇಂಚು ಸರಾಸರಿ ಮಳೆಯಾಗಿದೆ.

ಭಾಗಮಂಡಲಕ್ಕೆ ಅಧಿಕ ಮಳೆ

ಕಳೆದ 24 ಗಂಟೆಗಳ ಅವಧಿಯಲ್ಲಿ (ಶುಕ್ರವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ) ಭಾಗಮಂಡಲ ಹೋಬಳಿಗೆ 4.04 ಇಂಚು ಮಳೆಯಾಗಿದೆ. ಪೊನ್ನಂಪೇಟೆ ಹೋಬಳಿಗೆ 2.04 ಇಂಚು ಮಳೆ ಬಿದ್ದಿದ್ದರೆ, ಶ್ರೀಮಂಗಲ 1.52, ಹುದಿಕೇರಿ 1 ಇಂಚು, ಶಾಂತಳ್ಳಿ 1.72, ಮಡಿಕೇರಿ ಕ.ಸ.ಬಾ. 1.85, ನಾಪೋಕ್ಲು 1.20, ಸಂಪಾಜೆ 1.36 ಹಾಗೂ ವೀರಾಜಪೇಟೆ ಕ.ಸ.ಬಾ., ಸೋಮವಾರಪೇಟೆ ಕ.ಸ.ಬಾ. ಹಾಗೂ ಕೊಡ್ಲಿಪೇಟೆ ಹೋಬಳಿಯಲ್ಲಿ ತಲಾ 0.88 ಇಂಚು ಮಳೆಯಾಗಿದೆ. ಜಿಲ್ಲೆಯ ಇನ್ನಿತರ ಹೋಬಳಿಗಳಲ್ಲಿ ಮಳೆಯ ಪ್ರಮಾಣ ತುಸು ಕಡಿಮೆ ಕಂಡುಬಂದಿದೆ.

ಸೋಮವಾರಪೇಟೆ ವ್ಯಾಪ್ತಿಯಲ್ಲಿ ಚುರುಕು

ಸೋಮವಾರಪೇಟೆ : ಜಿಟಿಜಿಟಿ ಮಳೆ-ಬಿಸಿಲಿನ ವಾತಾವರಣ ಮರೆಯಾಗಿ ನಿನ್ನೆಯಿಂದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಮಳೆಗಾಲದ ಚಿತ್ರಣ ಗೋಚರಿಸುತ್ತಿದೆ. ಕಳೆದೆರಡು ದಿನಗಳಿಂದ ಮುಂಗಾರು ಚುರುಕುಗೊಂಡಿದ್ದು, ಉತ್ತಮ ಮಳೆಯಾಗುತ್ತಿದೆ.

ಇಲ್ಲಿಯವರೆಗೆ ಇದ್ದ ಬಿಸಿಲಿನ ವಾತಾವರಣ ಮರೆಯಾಗಿದ್ದು, ಆಗಾಗ್ಗೆ ಭಾರೀ ಮಳೆಯಾಗುತ್ತಿದೆ. ಪುಷ್ಪಗಿರಿ ಬೆಟ್ಟಶ್ರೇಣಿ ವ್ಯಾಪ್ತಿಯ ಹೆಗ್ಗಡಮನೆ, ಕೊತ್ನಳ್ಳಿ, ಬೆಟ್ಟದಳ್ಳಿ, ಬೀದಳ್ಳಿ, ಬೆಟ್ಟದಳ್ಳಿ, ಶಾಂತಳ್ಳಿ ವ್ಯಾಪ್ತಿಯಲ್ಲಿ ಮಳೆ ಬಿರುಸುಗೊಂಡಿದೆ.

ಉತ್ತಮ ಮಳೆಯಾಗುತ್ತಿರುವ ಹಿನ್ನೆಲೆ ರೈತಾಪಿ ವರ್ಗದ ಮೊಗದಲ್ಲಿ ಸಂತಸ ಮೂಡಿದೆ. ಕಳೆದ 20 ದಿನಗಳಿಂದಲೇ ಉಳುಮೆ ಮಾಡಿ ಮಳೆಗಾಗಿ ಕಾಯುತ್ತಿದ್ದ ಕೃಷಿಕರು ಮುಂದಿನ ಚಟುವಟಿಕೆಗೆ ತಯಾರಿ ಆರಂಭಿಸುತ್ತಿದ್ದಾರೆ. ಈಗಾಗಲೇ ಉಳುಮೆಯಾಗಿರುವ ಗದ್ದೆಯಲ್ಲಿ, ನೀರು ಕಟ್ಟುವದು, ಸಸಿಮಡಿ ತಯಾರಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.

ಈಗಾಗಲೇ ಮಳೆಯಾಗಿರುವ ಪ್ರದೇಶದ ಕಾಫಿ ತೋಟಗಳಲ್ಲಿ ಸ್ಪ್ರೇ ಹಾಗೂ ಗೊಬ್ಬರ ಹಾಕುವ ಕೆಲಸ ಬಹುತೇಕ ಮುಗಿದಿದ್ದು, ಉಳಿದೆಡೆ ಕಳೆದೆರಡು ದಿನಗಳಿಂದ ಗೊಬ್ಬರ ಹಾಕುವ ಕೆಲಸ ಪ್ರಗತಿಯಲ್ಲಿದೆ. ರೈತರು ಗದ್ದೆಯತ್ತ ಮುಖ ಮಾಡಿದ್ದು, ಭತ್ತದ ಕೃಷಿಗೆ ಸಿದ್ಧತೆ ಆರಂಭಿಸಿದ್ದಾರೆ.

ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಮಳೆಗೆ ಸಮೀಪದ ಯಡೂರು ಕೆರೆಯಲ್ಲಿ ನೀರಿನ ಸಂಗ್ರಹದಲ್ಲಿ ಏರಿಕೆ ಕಂಡುಬಂದಿದೆ. ಇದರೊಂದಿಗೆ ಪಟ್ಟಣದ ಆನೆಕೆರೆಯಲ್ಲೂ ನೀರಿನ ಪ್ರಮಾಣ ಹೆಚ್ಚಳವಾಗಿದೆ.

ಕಳೆದ 48 ಗಂಟೆಗಳ ಅವಧಿಯಲ್ಲಿ ಸೋಮವಾರಪೇಟೆ ಕಸಬ ಹೋಬಳಿ ವ್ಯಾಪ್ತಿಗೆ 28.2 ಮಿ.ಮೀ., ಸುಂಟಿಕೊಪ್ಪಕ್ಕೆ 10, ಕುಶಾಲನಗರಕ್ಕೆ 3.4 ಮಿ.ಮೀ. ಶಾಂತಳ್ಳಿಗೆ 68.2, ಶನಿವಾರಸಂತೆಗೆ 30 ಮಿ.ಮೀ., ಕೊಡ್ಲಿಪೇಟೆ ವ್ಯಾಪ್ತಿಗೆ 38 ಮಿ.ಮೀ. ಮಳೆ ಸುರಿದಿರುವ ಬಗ್ಗೆ ವರದಿಯಾಗಿದೆ.