ವೀರಾಜಪೇಟೆ, ಜು. 4: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿರುವ ಪೌರ ಕಾರ್ಮಿಕರುಗಳು ಅನೇಕ ವರ್ಷಗಳಿಂದ ಮೂಲ ಸೌಕರ್ಯಗಳಿಲ್ಲದ ಹಳೆಯ ಮನೆಯಲ್ಲಿ ವಾಸವಿದ್ದಾರೆ. ಈಗಿರುವ ಇವರುಗಳ ಹಳೆಯ ಹಂಚಿನ ಮನೆಯನ್ನು ಕೆಡವಿ ಸುಸಜ್ಜಿತವಾದ ಎಲ್ಲ ಮೂಲ ಸೌಲಭ್ಯಗಳುಳ್ಳ ಹೊಸ ಆಧುನಿಕ ಆರ್.ಸಿ.ಸಿ. ಗುಂಪು ಮನೆಗಳನ್ನು ನಿರ್ಮಿಸಲಾಗುವದು ಎಂದು ಶಾಸಕ ಕೆ.ಜಿ.ಬೋಪಯ್ಯ ಹೇಳಿದರು.

ವಾಜಪೇಯಿ ಹಾಗೂ ಅಂಬೇಡ್ಕರ್ ವಸತಿ ಯೋಜನೆಯಿಂದ ಪಟ್ಟಣದ ಸುಣ್ಣದ ಬೀದಿಯಲ್ಲಿ ಅನೇಕ ವರ್ಷಗಳಿಂದ ವಾಸ ಮಾಡುತ್ತಿರುವ ಪೌರ ಕಾರ್ಮಿಕರ ಮನೆಗಳನ್ನು ವೀಕ್ಷಿಸಿದ ಬಳಿಕ ಬೋಪಯ್ಯ ಅವರು ಮಾತನಾಡಿ ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸಿದಂತಹ ಪೌರ ಕಾರ್ಮಿಕರಿಗಾಗಿ ಕೇಂದ್ರ, ರಾಜ್ಯ ಸರಕಾರ ಹಾಗೂ ಪಟ್ಟಣ ಪಂಚಾಯಿತಿಯ ಅನುದಾನ ಸೇರಿ 24 ಪೌರ ಕಾರ್ಮಿಕ ಕುಟುಂಬಗಳಿಗೆ ಗುಂಪು ಮನೆಗಳನ್ನು ನಿರ್ಮಾಣ ಮಾಡಲಾಗುವದು ಎಂದರು.

ಇದೇ ವೇಳೆ ಸುಣ್ಣದ ಬೀದಿಯಲ್ಲಿ ಎನ್.ಎಫ್.ಡಿ.ಸಿ.ಯ ರೂ,1,79 ಕೋಟಿ ಅನುದಾನದಲ್ಲಿ ಮಂಗಳೂರಿನ ಕೆ.ಫ್.ಡಿ.ಸಿ. ನಿರ್ಮಿತಿ ಕೇಂದ್ರದವರಿಂದ ನಿರ್ಮಾಣಗೊಂಡಿರುವ 16 ಮಳಿಗೆಗಳ ಹೈಟೆಕ್ ಮೀನು ಮಾರ್ಕೆಟ್ ಕಟ್ಟಡಕ್ಕೆ ಶಾಸಕ ಬೋಪಯ್ಯ ಅವರು ಅಧಿಕಾರಿ ಗಳೊಂದಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾತನಾಡಿದ ಶಾಸಕರು ಮೀನು ಮಾರ್ಕೆಟ್ ಕಟ್ಟಡ ಆಗಸ್ಟ್ ತಿಂಗಳಲ್ಲಿ ಉದ್ಘಾಟನೆಗೊಳ್ಳಲಿದ್ದು ಆಗಸ್ಟ್ ತಿಂಗಳಲ್ಲಿಯೇ ಟೆಂಡರ್ ಬಾಡಿಗೆದಾರರಿಗೆ ಬಿಟ್ಟು ಕೊಡಲಾಗುವದು. ಇನ್ನು ಕಟ್ಟಡದ ಮೇಲ್ಬಾಗದಲ್ಲಿ ಒಣಮೀನು ಮಾರುಕಟ್ಟೆ ನಿರ್ಮಾಣಕ್ಕಾಗಿ ರೂ, 90 ಲಕ್ಷ ಅನುದಾನ ಬಂದಿದ್ದು ತಕ್ಷಣ ಕಾಮಗಾರಿ ಆರಂಭಿಸಲು ಪಟ್ಟಣ ಪಂಚಾಯಿತಿಗೆ ಸೂಚಿಸಲಾಗಿದೆ, ಪಟ್ಟಣದಲ್ಲಿ ಕುಡಿಯುವ ನೀರಿನ ಅಭಾವ ಆಗದಂತೆ ರೂ,17,5 ಲಕ್ಷ ವೆಚ್ಚದಲ್ಲಿ ಬೇತ್ರಿ ಹೊಳೆಗೆ ನೂತನ ಮೋಟಾರ್ ಅಳವಡಿಸಲಾಗಿದೆ ಎಂದರು.

ಈ ಸಂದರ್ಭ ಪಟ್ಟಣ ಪಂಚಾಯಿತಿಯ ಮುಖ್ಯಾಧಿಕಾರಿ ಎ.ಎಂ.ಶ್ರೀಧರ್, ಅಭಿಯಂತರ ಎನ್.ಹೇಮ್‍ಕುಮಾರ್, ಪಂಚಾಯಿತಿ ಸದಸ್ಯರುಗಳು ಹಾಜರಿದ್ದರು.