ಶನಿವಾರಸಂತೆ, ಜು. 4: ಸೋಮವಾರಪೇಟೆ ವೃತ್ತ ನಿರೀಕ್ಷಕ ನಂಜುಂಡೇಗೌಡ ಹಾಗೂ ಶನಿವಾರಸಂತೆ ಠಾಣಾಧಿಕಾರಿ ಹೆಚ್.ಎಂ. ಮರಿಸ್ವಾಮಿ, ಸಿಬ್ಬಂದಿಗಳು ಗುರುವಾರ ಬೆಳಗ್ಗಿನ ಜಾವ ಗಸ್ತಿನಲ್ಲಿರುವಾಗ ಶನಿವಾರಸಂತೆ ಸಮೀಪದ ಕಾಜೂರಿನ ಬಳಿ ಯಾವದೇ ರಹದಾರಿ ಇಲ್ಲದೆ ಅಕ್ರಮವಾಗಿ ಲಾರಿ (ಕೆಎ 12, ಎ-3510) ಯಲ್ಲಿ ಮರದ ದಿಮ್ಮಿಗಳನ್ನು ಸಾಗಾಟ ಮಾಡುತ್ತಿದ್ದಾಗ ಧಾಳಿ ನಡೆಸಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದಾರೆ.
ಕಾಜೂರಿನ ಬಳಿ, ಗುಂಡೂರಾವ್ ಬಡಾವಣೆ ನಿವಾಸಿ ಕುಮಾರ ಎಂಬವರು ಕಾಜೂರು ಗ್ರಾಮದ ಎಡಳ್ಳಿಯಿಂದ ಮೈಸೂರಿಗೆ ಲಾರಿಯಲ್ಲಿ ನೀಲ, ಬಳಗುಂಜಿ ಹಾಗೂ ಇತರ ಮರದ ದಿಮ್ಮಿಗಳನ್ನು ರಹದಾರಿ ಇಲ್ಲದೆ ಅಕ್ರಮವಾಗಿ ಸಾಗಾಟ ಮಾಡುತ್ತಿದ್ದುದನ್ನು ಪತ್ತೆ ಹಚ್ಚಿ ವಶಪಡಿಸಿಕೊಂಡು ಪ್ರಕರಣ ದಾಖಲಿಸಿ, ಶನಿವಾರಸಂತೆ ವಲಯ ಅರಣ್ಯ ಇಲಾಖೆಗೆ ಹಸ್ತಾಂತರಿಸಲಾಗಿದೆ.
ಕಾರ್ಯಾಚರಣೆಯಲ್ಲಿ ವೃತ್ತ ನಿರೀಕ್ಷಕ ನಂಜುಂಡೇಗೌಡ, ಠಾಣಾಧಿಕಾರಿ ಮರಿಸ್ವಾಮಿ, ಸಹಾಯಕ ಠಾಣಾಧಿಕಾರಿ ಗೋವಿಂದ್, ಸಿಬ್ಬಂದಿಗಳಾದ ಮಹದೇಶ್ವರ ಸ್ವಾಮಿ, ರಘು, ಅನಂತಕುಮಾರ್, ಮಂಜು, ಶಫೀಲ್ ಪಾಲ್ಗೊಂಡಿದ್ದರು.