*ಗೋಣಿಕೊಪ್ಪಲು, ಜು. 4: ಅಕ್ರಮ ಮರ ಸಾಗಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಬಂಧನಕ್ಕೆ ಒಳಗಾಗಿರುವ ನಾಲ್ಕೇರಿಯ ನೋಬನ್ ಅವರಿಗೆ ಸೇರಿದ ಗೋಣಿಕೊಪ್ಪಲಿನ ಪಲ್ಲೇರಿ ಟಿಂಬರ್ ಟ್ರೇಡರ್ಸ್ ಮಳಿಗೆ ಮೇಲೆ ಅರಣ್ಯಾಧಿಕಾರಿಗಳು ಧಾಳಿ ನಡೆಸಿ ಲಕ್ಷಾಂತರ ಮೌಲ್ಯದ ನಾಟಾಗಳನ್ನು ಗುರುವಾರ ವಶಪಡಿಸಿಕೊಂಡಿದ್ದಾರೆ.

20 ದಿನಗಳಿಂದ ನ್ಯಾಯಾಂಗ ಬಂಧನದಲ್ಲಿರುವ ನೋಬನ್ ಅವರನ್ನು ಹೆಚ್ಚಿನ ತನಿಖೆ ನಡೆಸಲು ತಮ್ಮ ವಶಕ್ಕೆ ಪಡೆದ ವೀರಾಜಪೇಟೆ ಉಪ ವಿಭಾಗದ ಅರಣ್ಯಾಧಿಕಾರಿಗಳು ಗೋಣಿಕೊಪ್ಪ ಮೈಸೂರು ರಸ್ತೆಯಲ್ಲಿರುವ ನೋಬನ್ ಮಾಲೀಕತ್ವದ ಪಲ್ಲೇರಿ ಟಿಂಬರ್ ಟ್ರೇಡರ್ಸ್ ಮೇಲೆ ಧಾಳಿ ಮಾಡಿ ತನಿಖೆ ನಡೆಸಿದರು.

ಮಳಿಗೆಯಲ್ಲಿ ಹದಗೊಳಿಸಿದ ವಿವಿಧ ಜಾತಿಯ ಲಕ್ಷಾಂತರ ಮೌಲ್ಯದ ಮರಗಳ ಬಗ್ಗೆ ಅರಣ್ಯಾಧಿಕಾರಿಗಳು ದಾಖಲೆ ಕೇಳಿದಾಗ ದಾಖಲೆ ತೋರಿಸುವಲ್ಲಿ ವಿಫಲರಾದರು ಎನ್ನಲಾಗಿದೆ. ಇದರಿಂದ ಅರಣ್ಯಾಧಿಕಾರಿಗಳು ದಾಸ್ತಾನು ಮಾಡಿದ್ದ ಮರಗಳನ್ನು ವಶಕ್ಕೆ ಪಡೆದು ನೋಬನ್ ಮೇಲೆ ಮತ್ತೊಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದಾರೆ.

ವಶಪಡಿಸಿಕೊಂಡಿರುವ ಮರಗಳ ಮೌಲ್ಯವನ್ನು ಲೆಕ್ಕ ಹಾಕಬೇಕಾಗಿದೆ. ನ್ಯಾಯಾಲಯಕ್ಕೆ ದಾಖಲೆ ಒಪ್ಪಿಸಿದ ಬಳಿಕ ಹೆಚ್ಚಿನ ಮಾಹಿತಿ ನೀಡಲಾಗುವದು ಎಂದು ಅರಣ್ಯಾಧಿಕಾರಿಗಳು ತಿಳಿಸಿದ್ದಾರೆ.